ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Timed Out | ವಿಡಿಯೊ ಪುರಾವೆ ಇದೆ, ಇಷ್ಟು ಕೆಳಮಟ್ಟದ ಆಟ ನೋಡಿಲ್ಲ: ಮ್ಯಾಥ್ಯೂಸ್

Published 7 ನವೆಂಬರ್ 2023, 6:47 IST
Last Updated 7 ನವೆಂಬರ್ 2023, 6:47 IST
ಅಕ್ಷರ ಗಾತ್ರ

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 'ಟೈಮ್ಡ್ ಔಟ್' ಆಗಿರುವ ಶ್ರೀಲಂಕಾದ ಆಟಗಾರ ಏಂಜೆಲೊ ಮ್ಯಾಥ್ಯೂಸ್ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ.

'ನಮ್ಮ ಬಳಿ ವಿಡಿಯೊ ಪುರಾವೆ ಇದೆ. ನಾವಿದನ್ನು ಬಿಡುಗಡೆಗೊಳಿಸಲಿದ್ದೇವೆ. ಕ್ಯಾಚ್ ಪಡೆದ ಬಳಿಕ ನಾನು ಕ್ರೀಸಿಗೆ ಬಂದ ಸಮಯದ ಪುರಾವೆಯೊಂದಿಗೆ ನಾನು ಮಾತನಾಡುತ್ತಿದ್ದೇನೆ' ಎಂದು ಮ್ಯಾಥ್ಯೂಸ್ ಹೇಳಿದ್ದಾರೆ.

ಉಭಯ ತಂಡದ ಆಟಗಾರರು ಪಂದ್ಯದ ಬಳಿಕ ಪರಸ್ಪರ ಹಸ್ತಲಾಘವ ಮಾಡಿರಲಿಲ್ಲ. ಈ ಕುರಿತು ಕೇಳಿದಾಗ, ನಮ್ಮನ್ನು ಗೌರವಿಸುವವರನ್ನು ನಾವು ಗೌರವಿಸುತ್ತೇವೆ. ನಾವೆಲ್ಲರೂ ಕ್ರಿಕೆಟ್‌ನ ರಾಯಭಾರಿಗಳು. ನಿಮ್ಮ ತಿಳುವಳಿಕೆಯನ್ನು ನೀವು ಗೌರವಿಸದಿದ್ದರೆ ನಾನೇನು ಹೇಳಲಿ? ಎಂದು ಹೇಳಿದರು.

ನನ್ನ 15 ವರ್ಷಗಳ ವೃತ್ತಿ ಜೀವನದಲ್ಲಿ ತಂಡ (ಬಾಂಗ್ಲಾದೇಶ) ಇಷ್ಟು ಕೆಳಮಟ್ಟಕ್ಕೆ ಇಳಿದಿರುವುದನ್ನು ನೋಡಿಲ್ಲ. ಇಂದಿನವರೆಗೂ ಶಕೀಬ್ ಅಲ್ ಹಸನ್ ಬಗ್ಗೆ ನನಗೆ ಅತೀವ ಗೌರವವಿತ್ತು. ನಿಸ್ಸಂಶವಾಗಿಯೂ ನಾವೆಲ್ಲರೂ ಗೆಲ್ಲುವುದಕ್ಕಾಗಿ ಆಡುತ್ತೇವೆ. ನಿಯಮ ಹಾಗಿದ್ದರೆ ಉತ್ತಮ. ಆದರೆ ಎರಡು ನಿಮಿಷದೊಳಗೆ ನಾನು ಕ್ರೀಸಿನಲ್ಲಿದ್ದೆ ಎಂದು ವಿವರಿಸಿದರು.

ನಾನು ಯಾವುದೇ ತಪ್ಪು ಮಾಡಿಲ್ಲ. ಎರಡು ನಿಮಿಷಗಳಲ್ಲಿ ಪಿಚ್‌ ಬಳಿ ಬಂದಿದ್ದೆ. ಆದರೆ ಹೆಲ್ಮೆಟ್‌ನ ಪಟ್ಟಿ ಹರಿದು ಹೋಗಿತ್ತು. ಅದನ್ನು ತಿಳಿದೂ ಶಕೀಬ್‌ ಔಟ್‌ಗಾಗಿ ಮನವಿ ಮಾಡಿದ್ದು ನಾಚಿಕೆಗೇಡಿನ ವಿಷಯ. ಇದರಿಂದ ನನಗೆ ಆಘಾತವಾಗಿದೆ ಎಂದು ಹೇಳಿದರು.

ನಾವು ಆಟಗಾರರ ಸುರಕ್ಷತೆಯ ಬಗ್ಗೆ ಮಾತನಾಡುತ್ತೇವೆ. ಹಾಗಾದರೆ ಹೆಲ್ಮೆಟ್ ಇಲ್ಲದೆಯೇ ನಾನು ಆಡಬೇಕಿತ್ತೇ? ಅಂಪೈರ್‌ಗಳಿಗೂ ದೊಡ್ಡ ಜವಾಬ್ದಾರಿ ಇತ್ತು. ಮೂರನೇ ಅಂಪೈರ್‌ಗೆ ಪರಿಶೀಲನೆಗಾಗಿ ನೀಡಬಹುದಿತ್ತು. ಸುರಕ್ಷತೆಯ ದೃಷ್ಟಿಕೋನದಲ್ಲಿ ವಿಕೆಟ್ ಕೀಪರ್‌ಗಳು ಕೂಡಾ ಹೆಲ್ಮೆಟ್ ಕಳಚುವುದಿಲ್ಲ. ಇದು ತಿಳುವಳಿಕೆಯ ವಿಚಾರ ಎಂದು ಹೇಳಿದರು.

ನಾನು ಕ್ರೀಸಿನಲ್ಲಿದ್ದರೆ ಪಂದ್ಯ ಗೆಲ್ಲಿಸುತ್ತಿದ್ದೆ ಎಂದು ಹೇಳುತ್ತಿಲ್ಲ. ಖಂಡಿತವಾಗಿಯೂ ಬೇರೆ ಯಾವುದೇ ತಂಡವಾಗಿದ್ದರೆ ಈ ರೀತಿ ಮಾಡುತ್ತಿತ್ತು ಎಂದು ಭಾವಿಸುತ್ತಿಲ್ಲ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT