ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CWC 2023: ಏಕದಿನ ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧ ಸೋಲರಿಯದ ಸರದಾರ ಭಾರತ

Published 13 ಅಕ್ಟೋಬರ್ 2023, 6:47 IST
Last Updated 13 ಅಕ್ಟೋಬರ್ 2023, 6:47 IST
ಅಕ್ಷರ ಗಾತ್ರ

ಬೆಂಗಳೂರು: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ಮಗದೊಂದು ರೋಚಕ ಹಣಾಹಣಿಗೆ ವೇದಿಕೆ ಸಿದ್ಧಗೊಂಡಿದೆ. ಗುಜರಾತ್‌ನ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಶನಿವಾರ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿವೆ.

ಭಾರತ ಅಜೇಯ ಓಟ...

ಏಕದಿನ ವಿಶ್ವಕಪ್‌ನಲ್ಲಿ ಭಾರತ ಎಂದೂ ಪಾಕಿಸ್ತಾನ ವಿರುದ್ಧ ಸೋತಿಲ್ಲ ಎಂಬುದು ಗಮನಾರ್ಹ. ಈವರೆಗೆ ಒಟ್ಟು ಏಳು ಬಾರಿ (1992, 1996, 1999, 2003, 2011, 2015, ಮತ್ತು 2019) ಮುಖಾಮುಖಿಯಾಗಿದ್ದಾಗಲೂ ಗೆಲುವು ಭಾರತದ್ದಾಗಿತ್ತು. ಈ ಬಾರಿಯೂ ಭಾರತ ಗೆಲುವಿನ ಓಟ ಮುಂದುವರಿಸುವ ತವಕದಲ್ಲಿದೆ.

1992: ಭಾರತಕ್ಕೆ 43 ರನ್ ಗೆಲುವು (ಸಿಡ್ನಿ)

1992ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 43 ರನ್ ಅಂತರದ ಗೆಲುವು ದಾಖಲಿಸಿತ್ತು. ಭಾರತ ಒಡ್ಡಿದ 217 ರನ್ ಗುರಿ ಬೆನ್ನಟ್ಟಿದ ಪಾಕಿಸ್ತಾನ 173 ರನ್ನಿಗೆ ಆಲೌಟ್ ಆಗಿತ್ತು. ಭಾರತದ ಪರ ಸಚಿನ್ ತೆಂಡೂಲ್ಕರ್ ಔಟಾಗದೆ 54 ಮತ್ತು ಅಜಯ್ ಜಡೇಜ 46 ರನ್ ಗಳಿಸಿದ್ದರು.

1996: ಭಾರತಕ್ಕೆ 39 ರನ್ ಗೆಲುವು (ಬೆಂಗಳೂರು)

ಬೆಂಗಳೂರಿನಲ್ಲಿ ನಡೆದಿದ್ದ ವಿಶ್ವಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ 39 ರನ್ ಅಂತರದ ರೋಚಕ ಗೆಲುವು ದಾಖಲಿಸಿತ್ತು. ನವಜೋತ್ ಸಿಧು (93) ಮತ್ತು ಅಜಯ್ ಜಡೇಜ (45) ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಭಾರತ ಎಂಟು ವಿಕೆಟ್ ನಷ್ಟಕ್ಕೆ 287 ರನ್ ಗಳಿಸಿತ್ತು. ಬಳಿಕ ವೆಂಕಟೇಶ್ ಪ್ರಸಾದ್ ಮತ್ತು ಅನಿಲ್ ಕುಂಬ್ಳೆ ದಾಳಿಗೆ ತತ್ತರಿಸಿದ್ದ ಪಾಕಿಸ್ತಾನ, ಒಂಬತ್ತು ವಿಕೆಟ್ ನಷ್ಟಕ್ಕೆ 248 ರನ್ ಗಳಿಸಲಷ್ಟೇ ಸಾಧ್ಯವಾಗಿತ್ತು. ತಮ್ಮನ್ನು ಕೆದಕಲು ಬಂದಿದ್ದ ಪಾಕ್ ಬ್ಯಾಟರ್‌ ಅಮೀರ್ ಸೊಹೈಲ್‌ರನ್ನು ವೆಂಕಟೇಶ್ ಪ್ರಸಾದ್ ಕ್ಲೀನ್ ಬೌಲ್ಡ್ ಮಾಡಿರುವುದು ಪಂದ್ಯದ ರೋಚಕತೆಗೆ ಸಾಕ್ಷಿಯಾಗಿತ್ತು.

1999: ಭಾರತಕ್ಕೆ 47 ರನ್ ಜಯ (ಮ್ಯಾಂಚೆಸ್ಟರ್)

ನಾಯಕ ಮೊಹಮ್ಮದ್ ಅಜರುದ್ದೀನ್ (59), ರಾಹುಲ್ ದ್ರಾವಿಡ್ (61) ಹಾಗೂ ಸಚಿನ್ ತೆಂಡೂಲ್ಕರ್ (45) ಆಟದ ನೆರವಿನಿಂದ ಮೊದಲು ಬ್ಯಾಟಿಂಗ್ ನಡೆಸಿದ್ದ ಭಾರತ ತಂಡ ಆರು ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ್ದ ಪಾಕಿಸ್ತಾನ ಮಗದೊಮ್ಮೆ ವೆಂಕಟೇಶ್ ಪ್ರಸಾದ್ (27ಕ್ಕೆ 5 ವಿಕೆಟ್) ದಾಳಿಗೆ ತತ್ತರಿಸಿ 180ಕ್ಕೆ ಆಲೌಟ್ ಆಗಿತ್ತು. ಜಾಗವಲ್ ಶ್ರೀನಾಥ್ 3 ವಿಕೆಟ್ ಗಳಿಸಿದ್ದರು.

2003: ಭಾರತಕ್ಕೆ 6 ವಿಕೆಟ್ ಗೆಲುವು (ಸೆಂಚುರಿಯನ್)

ಸಚಿನ್ ತೆಂಡೂಲ್ಕರ್ (98 ರನ್) ಅಮೋಘ ಆಟದ ನೆರವಿನಿಂದ ಪಾಕಿಸ್ತಾನ ಒಡ್ಡಿದ 273 ರನ್ ಗುರಿಯನ್ನು ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ ತಲುಪಿತ್ತು. ಯುವರಾಜ್ ಸಿಂಗ್ ಸಹ 50 ರನ್ ಗಳಿಸಿ ಮಿಂಚಿದ್ದರು. ಪಾಕ್‌ನ ತ್ರಿವಳಿ ವೇಗಿಗಳಾದ ವಾಸೀಂ ಅಕ್ರಂ, ಶೋಯಬ್ ಅಖ್ತರ್ ಮತ್ತು ವಕಾರ್ ಯೂನಿಸ್ ಬೌಲಿಂಗ್‌ಗೆ ಸಚಿನ್ ತಕ್ಕ ಉತ್ತರ ನೀಡಿದ್ದರು.

2011: ಭಾರತಕ್ಕೆ 29 ರನ್ ಗೆಲುವು (ಮೊಹಾಲಿ)

2011ರಲ್ಲಿ ಪಾಕಿಸ್ತಾನ ವಿರುದ್ಧ ಸೆಮಿಫೈನಲ್‌ನಲ್ಲಿ ಭಾರತ 29 ರನ್‌ಗಳಿಂದ ಗೆಲುವು ದಾಖಲಿಸಿತ್ತು. ಭಾರತ ಒಡ್ಡಿದ 261 ರನ್ ಬೆನ್ನಟ್ಟುವಲ್ಲಿ ಪಾಕ್ ಎಡವಿತ್ತು. ಸಚಿನ್ 85 ಹಾಗೂ ಸುರೇಶ್ ರೈನ್ ಔಟಾಗದೆ 36 ರನ್ ಗಳಿಸಿದ್ದರು. ಅಂತಿಮವಾಗಿ ಫೈನಲ್‌ನಲ್ಲಿ ಶ್ರೀಲಂಕಾ ಮಣಿಸಿದ್ದ ಭಾರತ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಗೆದ್ದಿತ್ತು.

2015: ಭಾರತಕ್ಕೆ 76 ರನ್ ಜಯ (ಅಡಿಲೇಡ್)

ವಿರಾಟ್ ಕೊಹ್ಲಿ ಶತಕದ (107) ಅಬ್ಬರದ ನೆರವಿನಿಂದ ಭಾರತ ಏಳು ವಿಕೆಟ್ ನಷ್ಟಕ್ಕೆ 300 ರನ್ ಪೇರಿಸಿತ್ತು. ಪಾಕಿಸ್ತಾನ 224 ರನ್ನಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ನಿಖರ ದಾಳಿ ಸಂಘಟಿಸಿದ್ದ ಮೊಹಮ್ಮದ್ ಶಮಿ ನಾಲ್ಕು ವಿಕೆಟ್ ಕಬಳಿಸಿದ್ದರು.

2019: ಭಾರತಕ್ಕೆ 89 ರನ್ ಜಯ (ಮ್ಯಾಂಚೆಸ್ಟರ್)

ಮಳೆ ಬಾಧಿತ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ 89 ರನ್ ಅಂತರದ ಭರ್ಜರಿ ಗೆಲುವು ದಾಖಲಿಸಿತ್ತು. ರೋಹಿತ್ ಶರ್ಮಾ ಶತಕದ (140) ನೆರವಿನಿಂದ ಭಾರತ 336 ರನ್‌ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT