ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

SL vs BAN: ಒಂದೂ ಎಸೆತ ಆಡದೇ ಔಟ್ ಆದ ಏಂಜೆಲೊ ಮ್ಯಾಥ್ಯೂಸ್! ಏನಿದು ಟೈಮ್ ಔಟ್?

ಕ್ರಿಕೆಟ್ ಇತಿಹಾಸದಲ್ಲಿ ಇದೇ ಮೊದಲು; ಒಂದೂ ಎಸೆತ ಎದುರಿಸದೇ ಔಟಾದ ಬ್ಯಾಟರ್
Published 6 ನವೆಂಬರ್ 2023, 14:24 IST
Last Updated 6 ನವೆಂಬರ್ 2023, 14:24 IST
ಅಕ್ಷರ ಗಾತ್ರ

ನವದೆಹಲಿ: ಶ್ರೀಲಂಕಾ ತಂಡದ ಅನುಭವಿ ಆಲ್‌ರೌಂಡರ್ ಏಂಜೆಲೊ ಮ್ಯಾಥ್ಯೂಸ್ ಟೈಮ್ಡ್‌ ಔಟ್ ಆದರು. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ರೀತಿಯಾಗಿರುವುದು ಇದೇ ಮೊದಲು. ಅವರು ಒಂದೂ ಎಸೆತ ಎದುರಿಸದೇ ಔಟ್ ಆದ ಬ್ಯಾಟರ್ ಕೂಡ ಅವರಾದರು.

ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ 36 ವರ್ಷದ ಮ್ಯಾಥ್ಯೂಸ್ ಅವರು ಸದೀರ  ಸಮರವಿಕ್ರಮ ಅವರು ಔಟಾದ ನಂತರ ಬ್ಯಾಟಿಂಗ್ ಮಾಡಬೇಕಿತ್ತು. ಆರನೇ ಕ್ರಮಾಂಕದ ಬ್ಯಾಟರ್‌ ಮ್ಯಾಥ್ಯೂಸ್ ಪಿಚ್‌ನತ್ತ ಬಂದರು. ಆದರೆ ಇದೇ ಸಂದರ್ಭದಲ್ಲಿ ತಮ್ಮ ಹೆಲ್ಮೆಟ್‌ನ ಪಟ್ಟಿ ಹರಿದಿದ್ದನ್ನು ಗಮನಿಸಿದರು. ಇನ್ನೊಂದು ಹೆಲ್ಮೆಟ್ ತರುವಂತೆ ಡಗ್‌ಔಟ್‌ನತ್ತ ಸಹ ಆಟಗಾರನಿಗೆ ಸನ್ನೆ ಮಾಡಿದರು. ಆದರೆ ಈ ಸಂದರ್ಭದಲ್ಲಿ ವೇಳೆ ಮೀರಿದ್ದನ್ನು ಗಮನಿಸಿದ ಬಾಂಗ್ಲಾ ಆಟಗಾರರು ಟೈಮ್‌ ಔಟ್‌ಗಾಗಿ ಮನವಿ ಸಲ್ಲಿಸಿದರು.

ಒಬ್ಬ ಬ್ಯಾಟರ್ ಔಟ್ ಅಥವಾ ಗಾಯಗೊಂಡು ನಿವೃತ್ತಿಯಾಗಿ ನಿರ್ಗಮಿಸಿದ ಎರಡು ನಿಮಿಷಗಳ ಅವಧಿಯಲ್ಲಿ ಮತ್ತೊಬ್ಬ ಬ್ಯಾಟರ್ ಕ್ರೀಸ್‌ಗೆ ಬಂದು ಆಟ ಆರಂಭಿಸಬೇಕು ಎಂಬುದು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (40.1.1) ನಿಯಮವಾಗಿದೆ. ಅಲ್ಲದೇ ನಿಯಮ 40.1.2ರ ಪ್ರಕಾರ,  ಬ್ಯಾಟರ್‌  ಕ್ರೀಸ್‌ಗೆ ಬರುವಲ್ಲಿ ವಿಳಂಬವಾದರೆ ಅಂಪೈರ್‌ಗಳು 16.3ರ ಅನ್ವಯ ಕ್ರಮ ಕೈಗೊಳ್ಳಬಹುದಾಗಿದೆ.

ಅಂಪೈರ್‌ಗಳಾದ ಮರಾಯಿಸ್ ಎರಸ್ಮಸ್ ಮತ್ತು ರಿಚರ್ಡ್ ಇಲಿಂಗ್‌ವರ್ಥ್ ಅವರು ಏಂಜೆಲೊ ಮ್ಯಾಥ್ಯೂಸ್ ಅವರನ್ನು  ಔಟ್ ಎಂದು ತೀರ್ಪು ನೀಡಿದರು. ಈ ಸಂದರ್ಭದಲ್ಲಿ ಚಕಿತಗೊಂಡ ಮ್ಯಾಥ್ಯೂಸ್ ಮತ್ತು ಇನ್ನೊಂದು ಬದಿಯಲ್ಲಿದ್ದ  ಚರಿತ ಅಸಲಂಕಾ ಅವರು ಅಂಪೈರ್‌ಗಳ ಜೊತೆಗೆ ವಾಗ್ವಾದ ನಡೆಸಿದರು. ಮ್ಯಾಥ್ಯೂಸ್ ಅವರು ಬಾಂಗ್ಲಾ ತಂಡದ ನಾಯಕ ಶಕೀಬ್ ಅಲ್ ಹಸನ್ ಅವರೊಂದಿಗೆ ಕೂಡ ಮಾತುಕತೆ ನಡೆಸಿದರು. ತಮ್ಮ ಹೆಲ್ಮೆಟ್‌ನ ಪಟ್ಟಿ ಕಿತ್ತಿರುವುದನ್ನು ತೋರಿಸಿದರು. ಆದರೆ ಯಾವುದೂ ಫಲ ಕೊಡಲಿಲ್ಲ.

ಅಸಮಾಧಾನದಿಂದ ಕುದಿಯುತ್ತಲೇ ಮ್ಯಾಥ್ಯೂಸ್ ಹೊರನಡೆದರು. ಲಂಕಾ ತಂಡದ ಮೊತ್ತ 135 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ನಿಯಮದ ಪ್ರಕಾರಣ ಟೈಮ್‌ ಔಟ್ ವಿಕೆಟ್‌ ಅನ್ನು ಯಾವುದೇ ಬೌಲರ್‌ಗಳ ಖಾತೆಗೂ ಸೇರ್ಪಡೆ ಮಾಡಲಿಲ್ಲ.

ಇಂತದೊಂದು ಘಟನೆಯು ದೇಶಿ ಕ್ರಿಕೆಟ್‌ನಲ್ಲಿ ದಾಖಲಾಗಿದೆ. 1997ರಲ್ಲಿ ಕಟಕ್‌ನಲ್ಲಿ ನಡೆದಿದ್ದ ತ್ರಿಪುರಾ ಮತ್ತು ಒಡಿಶಾ ನಡುವಣ ಪಂದ್ಯದಲ್ಲಿ ಹೇಮುಲಾಲ್ ಯಾದವ್ ಇದೇ ರೀತಿ ಟೈಮ್ ಔಟ್ ಆಗಿದ್ದರು.

ಹೆಲ್ಮೆಟ್ ಬೀಸಾಡಿದ ಮ್ಯಾಥ್ಯೂಸ್

ಅಸಮಾಧಾನದಿಂದ ಮೈದಾನದಿಂದ ಹೊರಬಂದ ಏಂಜೆಲೊ ಮ್ಯಾಥ್ಯೂಸ್  ತಮ್ಮ ತಂಡದ ಡಗ್‌ಔಟ್ ಬಳಿ ಹೆಲ್ಮೆಟ್ ಮತ್ತು ಕೈಗವಸುಗಳನ್ನು ಜೋರಾಗಿ ಬೀಸಾಕಿದರು. ಅವರ ಈ ವರ್ತನೆಯೂ ಕೂಡ ಶಿಕ್ಷಾರ್ಹವಾಗಬಹುದು ಎನ್ನಲಾಗಿದೆ.

ಕ್ರಿಕೆಟ್ ಪರಿಕರಗಳನ್ನು ಈ ರೀತಿ ಬಿಸಾಕಿ ಅವಮಾನಿಸುವುದು ಐಸಿಸಿ ನಿಯಮದ ಪ್ರಕಾರ ಅಪರಾಧವಾಗಿದೆ. ಇದಕ್ಕೆ ವಾಗ್ದಂಡನೆ ಅಥವಾ ದಂಡ ಶಿಕ್ಷೆಯನ್ನು ಆಟಗಾರ ಅನುಭವಿಸಬೇಕಾಗಬಹುದು.

ಎರಡು ನಿಮಿಷ ಸಮಯ

ಅಂತರರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಒಬ್ಬ ಬ್ಯಾಟರ್ ಔಟ್ ಆಗಿ ಅಥವಾ ಗಾಯಗೊಂಡು ನಿವೃತ್ತಿ ಪಡೆದು ನಿರ್ಗಮಿಸಿದ ಎರಡು ನಿಮಿಷಗಳೊಳಗೆ ಮುಂದಿನ ಬ್ಯಾಟರ್ ಕ್ರೀಸ್‌ಗೆ ಬರಬೇಕು. ಅಷ್ಟೇ ಅಲ್ಲ. ಗಾರ್ಡ್‌ ತೆಗೆದುಕೊಂಡು ಎಸೆತ ಎದುರಿಸಲು ಸಿದ್ಧನಾಗಬೇಕು ಎಂಬುದು  ಐಸಿಸಿ ವಿಶ್ವಕಪ್ ಟೂರ್ನಿಯ ನಿಯಮವಾಗಿದೆ. ಏಂಜೆಲೊ ಮ್ಯಾಥ್ಯೂಸ್ ಕ್ರೀಸ್‌ ಬಳಿ ಬಂದಿದ್ದರು. ಆದರೆ ಗಾರ್ಡ್‌ ತೆಗೆದುಕೊಂಡಿರಲಿಲ್ಲ.

ಮೆರಿಲ್‌ಬೊನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ನಿಯಮದ ಪ್ರಕಾರ ಮೂರು ನಿಮಿಷಗಳ ಸಮಯ ಇರುತ್ತದೆ. ಆದರೆ ವಿಶ್ವಕಪ್ ಟೂರ್ನಿಗೆ ಇದು ಅನ್ವಯವಾಗುವುದಿಲ್ಲ.

– ವಿ.ಎನ್. ಕುಲಕರ್ಣಿ, ಮಾಜಿ ಅಂತರರಾಷ್ಟ್ರೀಯ ಅಂಪೈರ್ (ಕನ್ನಡದಲ್ಲಿ ಐಸಿಸಿ ನಿಯಮ ಬರೆದಿದ್ದಾರೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT