ಅಹಮದಾಬಾದ್: ವಿಶ್ವ ಕಪ್ ಫೈನಲ್‌ನಲ್ಲಿ ತಾವು ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದಾಗ, ಕಿಕ್ಕಿರಿದ್ದಿದ್ದ ಕ್ರೀಡಾಂಗಣದಲ್ಲಿ ಆವರಿಸಿದ ಮೌನ, ಕ್ರಿಕೆಟ್ ಅಂಗಳದಲ್ಲಿ ತಮ್ಮ ಪಾಲಿಗೆ ಅತ್ಯಂತ ಸುಮಧುರ ಕ್ಷಣ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಹೇಳಿದ್ದಾರೆ.
54 ರನ್ ಗಳಿಸಿದ್ದಾಗ ಪುಟಿದ್ದೆದ್ದ ಚೆಂಡನ್ನು ಕೊಹ್ಲಿ ಆಡಲು ಹೋದಾಗ, ಅದು ಬ್ಯಾಟ್‌ಗೆ ತಗುಲಿ ನೆಲಕ್ಕೆ ಬಡಿದು ಬೇಲ್ಸ್‌ಗಳನ್ನು ಉರುಳಿಸಿತ್ತು. ಕ್ರೀಡಾಂಗಣದ ನಿಶ್ಶಬ್ದವಾಯಿತು. ಅಧಿಕೃತ ಮಾಹಿತಿಯಂತೆ ಕ್ರೀಡಾಂಗಣದಲ್ಲಿ 92,543 ಮಂದಿ ಪ್ರೇಕ್ಷಕರಿದ್ದರು.
‘ಕ್ರೀಡಾಂಗಣ ಮೌನಕ್ಕೆ ಜಾರಿದ ಆ ಕ್ಷಣವನ್ನು ನಾವು ಎರಡು ಸಲ ಸಂಭ್ರಮಿಸಿದೆವು. ಅದಕ್ಕೆ ಮೊದಲು ಕೊಹ್ಲಿ ಎಂದಿನಂತೆ ಮತ್ತೊಂದು ಶತಕದತ್ತ ಸಾಗಿದ್ದಂತೆ ಕಂಡಿತು. ಹೀಗಾಗಿ ಆ ಕ್ಷಣ ತೃಪ್ತಿದಾಯಕ’ ಎಂದು ಕಮಿನ್ಸ್ ಭಾನುವಾರ ಆಸ್ಟ್ರೇಲಿಯಾ ಆರನೇ ಬಾರಿ ವಿಶ್ವಕಪ್ ಗೆದ್ದ ನಂತರ ಹೇಳಿದರು.
‘ನಾವು ವಿಶ್ವಕಪ್ ಗೆದ್ದಿರಬಹುದು ನಿಜ. ಆದರೆ ಏಕದಿನ ಮಾದರಿಯ ಮೇಲೆ ತಮಗೆ ಮತ್ತೆ ಪ್ರೀತಿ ಮೂಡಿದೆ’ ಎಂದು ಅವರು ಹೇಳಿದರು. ಏಕದಿನ ವಿಶ್ವಕಪ್ ಟೂರ್ನಿ ಮುಂದೆಯೂ ಇರಲಿದೆ ಎಂಬುದು ಅವರ ವಿಶ್ವಾಸ. ‘ಇದಕ್ಕೆ ತನ್ನದೇ ಆದ ಪರಂಪರೆಯಿದೆ. ಆಟಗಾರರಿಗೆ ತಮ್ಮದೇ ಆದ ಸವಿನೆನಪುಗಳಿರುತ್ತವೆ. ಆದರೆ ದ್ವಿಪಕ್ಷೀಯ ಸರಣಿಗಳದ್ದೇ ಸಮಸ್ಯೆ’ ಎಂದರು.
ಕಳೆದ ಮಾರ್ಚ್‌ನಲ್ಲಿ ಭಾರತ ಪ್ರವಾಸದ ವೇಳೆ ಕಮಿನ್ಸ್ ಅವರ ತಾಯಿ ನಿಧನರಾಗಿದ್ದರು. ಅವರು ಪ್ರವಾಸದಿಂದ ಅರ್ಧಕ್ಕೇ ತವರಿಗೆ ಮರಳಿದ್ದರು. ನಂತರ ಅವರು ಆಸ್ಟ್ರೇಲಿಯಾ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಕಿರೀಟ ಧರಿಸಲು ನೆರವಾದರು.
‘ನೀಲಿ ಬಣ್ಣದ ಉಡುಗೆಯಲ್ಲಿ ಭಾರತದ ಬೆಂಬಲಿಗರು ಕ್ರೀಡಾಂಗಣದತ್ತ ಹರಿದುಬರುವ ರೀತಿಯನ್ನು ಹೋಟೆಲ್ ಕೊಠಡಿಯಿಂದ ನೋಡುವಾಗ ಕ್ಷಣಕಾಲ ನರ್ವಸ್ ಆಗಿದ್ದೆ’ ಎಂದು ಅವರು ಒಪ್ಪಿಕೊಂಡರು.
ಹೆಡ್ ಗಾಯಾಳಾಗಿದ್ದರೂ, ತಂಡದ ವೈದ್ಯಕೀಯ ಸಿಬ್ಬಂದಿ ಅವರ ಕಡೆ ನಿಗಾಯಿಟ್ಟರು. ತಂಡದ ಆಯ್ಕೆಗಾರರೂ ವಿಶ್ವಾಸವಿಟ್ಟರು. ಅವರ ಬೆರಳಿಗೆ ಗಾಯವಾಗಿತ್ತು. ಟೂರ್ನಿಯ ಅರ್ಧದಷ್ಟು ಸಮಯ ಅವರು ಕೈ ನೋವಿನಿಂದ ಬಳಲಿದ್ದರು. ಆದರೆ ನಾವು ಅವರನ್ನು ಉಳಿಸಿಕೊಂಡಿದ್ದು ಫಲ ನೀಡಿತು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.