ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC World Cup 2023: ಶ್ರೀಲಂಕಾ ವಿರುದ್ಧ ಗೆಲುವಿನ ಒತ್ತಡದಲ್ಲಿ ನ್ಯೂಜಿಲೆಂಡ್‌

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂದು ಪೈಪೋಟಿ
Published 8 ನವೆಂಬರ್ 2023, 23:30 IST
Last Updated 8 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಸತತ ನಾಲ್ಕು ಸೋಲುಗಳಿಂದ ಕಂಗೆಟ್ಟಿರುವ ನ್ಯೂಜಿಲೆಂಡ್‌ ತಂಡ, ಏಕದಿನ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ತನ್ನ ಕೊನೆಯ ಲೀಗ್‌ ಪಂದ್ಯದಲ್ಲಿ ಗುರುವಾರ ಶ್ರೀಲಂಕಾ ವಿರುದ್ಧ ಪೈಪೋಟಿ ನಡೆಸಲಿದೆ.

ನಾಲ್ಕು ಪಂದ್ಯಗಳಿಂದ ಎಂಟು ಪಾಯಿಂಟ್ಸ್‌ ಹೊಂದಿರುವ ಕೇನ್‌ ವಿಲಿಯಮ್ಸನ್‌ ಬಳಗಕ್ಕೆ ಸೆಮಿಫೈನಲ್‌ ಪ್ರವೇಶದ ಸಾಧ್ಯತೆ ಜೀವಂತವಾಗಿರಿಸಿಕೊಳ್ಳಲು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಈ ಪಂದ್ಯದಲ್ಲಿ ಜಯ ಅನಿವಾರ್ಯ.

ಭಾರತ, ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಈಗಾಗಲೇ ನಾಲ್ಕರಘಟ್ಟ ಪ್ರವೇಶಿಸಿವೆ. ಇನ್ನೊಂದು ಸ್ಥಾನಕ್ಕಾಗಿ ತಲಾ ಎಂಟು ಪಾಯಿಂಟ್ಸ್‌ ಹೊಂದಿರುವ ನ್ಯೂಜಿಲೆಂಡ್‌ (ರನ್‌ರೇಟ್‌ +0.398), ಪಾಕಿಸ್ತಾನ (+0.036) ಮತ್ತು ಅಫ್ಗಾನಿಸ್ತಾನ (-0.338) ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿವೆ.

ಈ ಮೂರು ತಂಡಗಳೂ ಕೊನೆಯ ಲೀಗ್ ಪಂದ್ಯಗಳನ್ನು ಜಯಿಸಿದರೆ, ಪಾಯಿಂಟ್ಸ್‌ 10 ಆಗಲಿದೆ. ಆಗ ರನ್‌ರೇಟ್‌ ಪರಿಗಣನೆಗೆ ಬರಲಿದೆ. ಪಾಕ್‌ ಮತ್ತು ಅಫ್ಗನ್‌ಗೆ ಹೋಲಿಸಿದರೆ, ನ್ಯೂಜಿಲೆಂಡ್‌ ತಂಡದ ರನ್‌ರೇಟ್‌ ಉತ್ತಮವಾಗಿದೆ. ಆದ್ದರಿಂದ ಶ್ರೀಲಂಕಾ ಎದುರು ಗೆಲ್ಲುವುದು ಮಾತ್ರವಲ್ಲದೆ, ರನ್‌ರೇಟ್‌ ತಗ್ಗದಂತೆ ಗಮನಹರಿಸಬೇಕಿದೆ.

ನ್ಯೂಜಿಲೆಂಡ್‌ ತಂಡ ಮೊದಲ ನಾಲ್ಕು ಪಂದ್ಯಗಳನ್ನು ಜಯಿಸಿ, ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿತ್ತು. ಆ ಬಳಿಕ ಭಾರತ, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನದ ಎದುರು ಸೋತಿದೆ. ನ.4 ರಂದು ಇದೇ ಕ್ರೀಡಾಂಗಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಪಾಕ್‌ ಎದುರು ಪರಾಭವಗೊಂಡಿತ್ತು.

ಲಂಕಾ ವಿರುದ್ಧ ಜಯಿಸಬೇಕಾದರೆ, ಕಿವೀಸ್‌ ತಂಡ ಬೌಲಿಂಗ್‌ ವಿಭಾಗದಲ್ಲಿನ ಲೋಪಗಳನ್ನು ತಿದ್ದುವುದು ಅಗತ್ಯ. ಗಾಯದ ಕಾರಣ ಕಳೆದ ಕೆಲ ಪಂದ್ಯಗಳನ್ನು ಕಳೆದುಕೊಂಡಿದ್ದ ಲಾಕಿ ಫರ್ಗ್ಯುಸನ್‌ ಅವರು ಆಯ್ಕೆಗೆ ಲಭ್ಯರಿರುವುದು ಬೌಲಿಂಗ್‌ ವಿಭಾಗದ ಬಲವನ್ನು ತುಸು ಹೆಚ್ಚಿಸಿದೆ.

‘ಅವರು (ಲಾಕಿ) ನಮ್ಮ ಬೌಲಿಂಗ್‌ ವಿಭಾಗಕ್ಕೆ ಸಮತೋಲನ ಮತ್ತು ಹೆಚ್ಚಿನ ಅನುಭವ ತಂದುಕೊಡುವರು’ ಎಂದು ನಾಯಕ ವಿಲಿಯಮ್ಸನ್‌ ತಿಳಿಸಿದರು. ವೇಗಿಗಳಾದ ಟ್ರೆಂಟ್‌ ಬೌಲ್ಟ್‌ ಮತ್ತು ಟಿಮ್‌ ಸೌಥಿ ಅವರೂ ಪರಿಣಾಮಕಾರಿ ದಾಳಿ ನಡೆಸಬೇಕಿದೆ.

ತಂಡವು ಬ್ಯಾಟಿಂಗ್‌ನಲ್ಲಿ ಯುವ ಆಟಗಾರ ರಚಿನ್‌ ರವೀಂದ್ರ ಅವರನ್ನು ನೆಚ್ಚಿಕೊಂಡಿದೆ. ಬೆಂಗಳೂರು ಮೂಲದ ಬ್ಯಾಟರ್‌ ಎಂಟು ಪಂದ್ಯಗಳಿಂದ 523 ರನ್‌ ಕಲೆಹಾಕಿದ್ದಾರೆ. ಕಳೆದ ಪಂದ್ಯದಲ್ಲಿ ಐದು ರನ್‌ಗಳಿಂದ ಶತಕ ವಂಚಿತರಾಗಿದ್ದ ವಿಲಿಯಮ್ಸನ್‌ ಅವರೂ ದೊಡ್ಡ ಇನಿಂಗ್ಸ್‌ ಆಡುವ ವಿಶ್ವಾಸದಲ್ಲಿದ್ದಾರೆ.

ಚಾಂಪಿಯನ್ಸ್‌ ಟ್ರೋಫಿ ಅರ್ಹತೆ ಗುರಿ: ಮತ್ತೊಂದೆಡೆ ಶ್ರೀಲಂಕಾ ತಂಡ ಪಾಯಿಂಟ್‌ ಪಟ್ಟಿಯಲ್ಲಿ ಅಗ್ರ ಏಳರಲ್ಲಿ ಸ್ಥಾನ ಪಡೆದು ಮುಂದಿನ ವರ್ಷ ನಡೆಯಲಿರುವ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗೆ ಅರ್ಹತೆ ಪಡೆಯುವ ಗುರಿಯೊಂದಿಗೆ ಆಡಲಿಳಿಯಲಿದೆ.

ತವರಿನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು (ಶ್ರೀಲಂಕಾದ ಕ್ರೀಡಾ ಸಚಿವಾಲಯ ಮತ್ತು ರಾಷ್ಟ್ರೀಯ ಕ್ರಿಕೆಟ್‌ ಮಂಡಳಿ ನಡುವಣ ತಿಕ್ಕಾಟ) ಮರೆತು ಆಟದತ್ತ ಗಮನ ಕೇಂದ್ರೀಕರಿಸುವ ಸವಾಲು ಕುಸಾಲ್‌ ಮೆಂಡಿಸ್‌ ಬಳಗದ ಮುಂದಿದೆ.

‘ಲಂಕಾ ಕ್ರಿಕೆಟ್‌ಗೆ ಇದು ಸವಾಲಿನ ಸಮಯ. ಅಂಗಳದ ಹೊರಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಬದಿಗಿರಿಸಿ ಆಟದತ್ತ ಗಮನ ಕೇಂದ್ರೀಕರಿಸುತ್ತೇವೆ. ಅಂತಿಮ ಪಂದ್ಯ ಗೆದ್ದು ಚಾಂಪಿಯನ್ಸ್‌ ಟ್ರೋಫಿಗೆ ಅರ್ಹತೆ ಗಳಿಸುವುದು ಗುರಿ’ ಎಂದು ಲಂಕಾ ತಂಡದ ಸಹಾಯಕ ಕೋಚ್‌ ನವೀದ್‌ ನವಾಜ್‌ ಅವರು ಬುಧವಾರ ಹೇಳಿದರು.

ಮಳೆ ಸಾಧ್ಯತೆ

ಬೆಂಗಳೂರಿನಲ್ಲಿ 2–3 ದಿನಗಳಿಂದ ಮಧ್ಯಾಹ್ನದ ಬಳಿಕ ಮಳೆಯಾಗುತ್ತಿದ್ದು ಈ ಪಂದ್ಯಕ್ಕೂ ವರುಣನ ಆತಂಕ ಎದುರಾಗಿದೆ. ಅಂಗಳದಲ್ಲಿ ನೀರು ನಿಂತರೆ ಅದನ್ನು ಕೆಲವೇ ನಿಮಿಷಗಳಲ್ಲಿ ಹೊರಹಾಕುವ ‘ಸಬ್‌ ಏರ್‌’ ವ್ಯವಸ್ಥೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೆ. ಆದ್ದರಿಂದ ಸಾಧಾರಣ ಮಳೆಯಾದರೆ ಪಂದ್ಯ ರದ್ದುಗೊಳ್ಳುವ ಸಾಧ್ಯತೆ ಕಡಿಮೆ. ಎಡೆಬಿಡದೆ ಮಳೆ ಸುರಿದು ಪಾಯಿಂಟ್‌ ಹಂಚಿಕೆಯಾದರೆ ನ್ಯೂಜಿಲೆಂಡ್‌ ತಂಡದ ಸೆಮಿ ಹಾದಿಗೆ ಅಡ್ಡಿಯಾಗಲಿದೆ.

ತಂಡಗಳು ನ್ಯೂಜಿಲೆಂಡ್: ಕೇನ್‌ ವಿಲಿಯಮ್ಸನ್‌ (ನಾಯಕ) ಟಾಮ್‌ ಲೇಥಮ್ ಟ್ರೆಂಟ್ ಬೌಲ್ಟ್ ಮಾರ್ಕ್ ಚಾಪ್‌ಮನ್ ಡೆವೊನ್ ಕಾನ್ವೆ ಲಾಕಿ ಫರ್ಗ್ಯುಸನ್ ಮ್ಯಾಟ್ ಹೆನ್ರಿ ಡೆರಿಲ್ ಮಿಚೆಲ್ ಜಿಮ್ಮಿ ನೀಶಮ್ ಗ್ಲೆನ್ ಫಿಲಿಪ್ಸ್ ರಚಿನ್ ರವೀಂದ್ರ ಮಿಚೆಲ್ ಸ್ಯಾಂಟ್ನರ್ ಈಶ್ ಸೋಧಿ ಟಿಮ್ ಸೌಥಿ ವಿಲ್ ಯಂಗ್.

ಶ್ರೀಲಂಕಾ: ಕುಸಾಲ್ ಮೆಂಡಿಸ್ (ನಾಯಕ– ವಿಕೆಟ್‌ ಕೀಪರ್) ಕುಸಾಲ್ ಪೆರೀರಾ ಪಥುಮ್ ನಿಸಾಂಕ ದುಷ್ಮಂತ ಚಮೀರ ಲಹಿರು ಕುಮಾರ ದಿಮುತ್‌ ಕರುಣಾರತ್ನೆ ಸದೀರ ಸಮರವಿಕ್ರಮ ಚರಿತ್ ಅಸಲಂಕ ಧನಂಜಯ ಡಿ ಸಿಲ್ವ ಮಹೀಷ ತೀಕ್ಷಣ ದುನಿತ್‌ ವೆಲ್ಲಾಳಗೆ ಕಸುನ್ ರಜಿತ ಏಂಜೆಲೊ ಮಾಥ್ಯೂಸ್ ದಿಲ್ಶನ್ ಮಧುಶಂಕ ದುಶಾನ್ ಹೇಮಂತ ಚಮಿಕ ಕರುಣಾರತ್ನೆ.

ಪಂದ್ಯ ಆರಂಭ: ಮಧ್ಯಾಹ್ನ 2.00

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್

ಏಕದಿನ ಕ್ರಿಕೆಟ್‌ ಬಲಾಬಲ

ಒಟ್ಟು ಪಂದ್ಯಗಳು; 101

ನ್ಯೂಜಿಲೆಂಡ್‌ ಗೆಲುವು; 51

ಶ್ರೀಲಂಕಾ ಗೆಲುವು; 41

ಟೈ; 1

ಫಲಿತಾಂಶವಿಲ್ಲ; 8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT