ಕೋಲ್ಕತ್ತ: ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪ್ರವೇಶಿಸುವುದು ಬಹುತೇಕ ಅಸಾಧ್ಯವೇ ಎನ್ನುವಂತಹ ಸವಾಲು ಎನ್ನುವಂತಹ ಘಟ್ಟಕ್ಕೆ ಪಾಕಿಸ್ತಾನ ತಂಡವು ಬಂದು ನಿಂತಿದೆ.
ರೌಂಡ್ ರಾಬಿನ್ ಲೀಗ್ ಸುತ್ತಿನಲ್ಲಿ ಪಾಕ್ ತಂಡವು ತನ್ನ ಕೊನೆಯ ಪಂದ್ಯವನ್ನು ಈಡನ್ ಗಾರ್ಡನ್‌ನಲ್ಲಿ ಆಡಲಿದೆ. ‘ಹಾಲಿ ಚಾಂಪಿಯನ್‘ ಇಂಗ್ಲೆಂಡ್ ತಂಡವನ್ನು ಎದುರಿಸಲಿದೆ.
ಈಗಾಗಲೇ ಸೆಮಿಫೈನಲ್ ಹಾದಿಯಿಂದ ಇಂಗ್ಲೆಂಡ್ ಹೊರಬಿದ್ದಾಗಿದೆ. ಆದರೆ ಮುಂಬರುವ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಅರ್ಹತೆಗಾಗಿ ಈ ಪಂದ್ಯದಲ್ಲಿ ಗೆಲ್ಲುವತ್ತ ಚಿತ್ತ ನೆಟ್ಟಿದೆ.
ಪಾಕಿಸ್ತಾನ ತಂಡಕ್ಕೆ ಸೆಮಿಫೈನಲ್ ಹೋಗಬೇಕಾದರೆ ಅಸಾಧ್ಯವೆನ್ನುವ ಸವಾಲುಗಳನ್ನು ಪಾರು ಮಾಡಬೇಕಿದೆ. ಸದ್ಯ ನಾಲ್ಕನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ (ನೆಟ್ ರನ್‌ರೇಟ್: 0.743 ) ತಂಡವನ್ನು ಹಿಂದಿಕ್ಕಬೇಕಾದರೆ ಪಾಕ್ ತಂಡವು (0.036) ದೊಡ್ಡ ಅಂತರದ ಜಯ ಗಳಿಸಬೇಕು.
ಪಾಕ್ ತಂಡವು ಮೊದಲು ಬ್ಯಾಟಿಂಗ್ ಮಾಡಿದರೆ 287 ರನ್‌ಗಳ ಅಂತರದ ಜಯ ಸಾಧಿಸಬೇಕು. ಗುರಿ ಬೆನ್ನಟ್ಟಿದರೆ 284 ಎಸೆತಗಳು ಬಾಕಿಯಿರುವಾಗಲೇ ಜಯಸಾಧಿಸಬೇಕು. ಆದ್ದರಿಂದ ಪಾಕ್ ತಂಡದ ನಾಲ್ಕರ ಘಟ್ಟದ ಕನಸು ಬಹುತೇಕ ಕಮರಿದಂತಾಗಿದೆ.
ಆದರೆ ಸಮಾಧಾನಕರ ಗೆಲುವಿಗಾಗಿ ಬಾಬರ್ ಆಜಂ ಬಳಗವು ಪ್ರಯತ್ನಿಸಬಹುದು. 2025ರ ಚಾಂಪಿಯನ್ಸ್ ಟ್ರೋಫಿಗೆ ಆತಿಥ್ಯ ವಹಿಸುತ್ತಿರುವ ಪಾಕಿಸ್ತಾನಕ್ಕೆ ನೇರಪ್ರವೇಶ ಸಿಗುವುದರಿಂದ ವಿಶ್ವಕಪ್ ಅಂಕಪಟ್ಟಿಯಲ್ಲಿ ಸ್ಥಾನ ಗಣನೆಗೆ ಬರುವುದಿಲ್ಲ.
ಆದರೆ ಇಂಗ್ಲೆಂಡ್ ತಂಡವು ಗೆದ್ದರೆ ಸರಾಗವಾಗಿ ಅಗ್ರ ಎಂಟರಲ್ಲಿ ಸ್ಥಾನ ಪಡೆಯುತ್ತದೆ. ಬಾಂಗ್ಲಾ ಮತ್ತು ನೆದರ್ಲೆಂಡ್ಸ್ ತಂಡಗಳೂ ಈ ಪೈಪೋಟಿಯಲ್ಲಿವೆ. ಆದರೆ ಬಾಂಗ್ಲಾ ತಂಡವು ಆಸ್ಟ್ರೇಲಿಯಾ ಎದುರು ಹಾಗೂ ನೆದರ್ಲೆಂಡ್ಸ್ ಭಾರತದ ಎದುರು ಆಡುವುದರಿಂದ ಗೆಲ್ಲುವುದು ಸುಲಭವಲ್ಲ.
ಪಾಕ್ ತಂಡವು ತನ್ನ ಬ್ಯಾಟಿಂಗ್ ಶಕ್ತಿಯ ಮೇಲೆ ಹೆಚ್ಚು ಅವಲಂಬಿತವಾಗಿದೆ. ನ್ಯೂಜಿಲೆಂಡ್ ಎದುರು ಸ್ಫೋಟಕ ಇನಿಂಗ್ಸ್ ಆಡಿದ್ದ ಫಕಾರ್ ಜಮಾನ್, ಮೊಹಮ್ಮದ್ ರಿಜ್ವಾನ್, ಅಬ್ದುಲ್ಲಾ ಅವರು ಉತ್ತಮ ಲಯದಲ್ಲಿದ್ದಾರೆ. ಬಾಬರ್ ಆಜಂ ಫಾರ್ಮ್‌ಗೆ ಮರಳುವ ಪ್ರಯತ್ನದಲ್ಲಿದ್ದಾರೆ.
ಇಂಗ್ಲೆಂಡ್ ತಂಡವು ಸತತ ಐದು ಪಂದ್ಯಗಳ ಸೋನಿ ನಂತರ ಗೆಲುವಿನ ಹಾದಿಗೆ ಮರಳಿದೆ. ಬೆನ್ ಸ್ಟೋಕ್ಸ್ ಕಳೆದ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಡೇವಿಡ್ ಮಲಾನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಆದ್ದರಿಂದ ಅವರು ಪಾಕ್ ಬೌಲರ್‌ಗಳಿಗೆ ಕಠಿಣ ಸವಾಲೊಡ್ಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.