ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಷ್ಯಾ ಉಪಖಂಡದ ಆತಿಥ್ಯ

Last Updated 5 ಮೇ 2019, 20:00 IST
ಅಕ್ಷರ ಗಾತ್ರ

ಭಾರತದ ಜಂಟಿ ಆತಿಥ್ಯದಲ್ಲಿ ನಡೆದ ಆರನೇ ವಿಶ್ವಕಪ್‌ ಟೂರ್ನಿಯಲ್ಲಿ ಶ್ರೀಲಂಕಾ ಕಿರೀಟ ಮುಡಿಗೇರಿಸಿಕೊಂಡಿತು. ವೆಸ್ಟ್‌ ಇಂಡೀಸ್‌, ಭಾರತ, ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ತಂಡಗಳ ಬಳಿಕ ವಿಶ್ವಕಪ್‌ ಗೆದ್ದ ಐದನೇ ತಂಡ ಎನಿಸಿಕೊಂಡಿತು. ಭಾರತ ಹಾಗೂ ಪಾಕಿಸ್ತಾನ ನಡುವೆ ಬೆಂಗಳೂರಿನಲ್ಲಿ ನಡೆದಿದ್ದ ಕ್ವಾರ್ಟರ್‌ ಫೈನಲ್‌ ಪಂದ್ಯ ಈ ಟೂರ್ನಿಯ ಹೈಲೈಟ್‌ಗಳಲ್ಲೊಂದು.

ಆತಿಥ್ಯ: ಭಾರತ, ಪಾಕಿಸ್ತಾನ, ಶ್ರೀಲಂಕಾ

ಅವಧಿ: ಫೆ.14 ರಿಂದ ಮಾರ್ಚ್‌ 17

ಒಟ್ಟು ತಂಡಗಳು: 12

ಒಟ್ಟು ಪಂದ್ಯಗಳು: 37

ಸರಣಿಶ್ರೇಷ್ಠ: ಸನತ್‌ ಜಯಸೂರ್ಯ

ಗರಿಷ್ಠ ರನ್‌: ಸಚಿನ್‌ ತೆಂಡೂಲ್ಕರ್‌ (523)

ಗರಿಷ್ಠ ವಿಕೆಟ್‌: ಅನಿಲ್‌ ಕುಂಬ್ಳೆ (15)

* ಎರಡನೇ ಬಾರಿ ವಿಶ್ವಕಪ್‌ ಟೂರ್ನಿಗೆ ಜಂಟಿ ಆತಿಥ್ಯ ವಹಿಸುವ ಅವಕಾಶ ಭಾರತಕ್ಕೆ ಲಭಿಸಿತು. 1987ರ ವಿಶ್ವಕಪ್‌ ಟೂರ್ನಿ ಭಾರತ ಮತ್ತು ಪಾಕಿಸ್ತಾನದ ಜಂಟಿ ಆತಿಥ್ಯದಲ್ಲಿ ನಡೆದಿದ್ದರೆ, 1996ರ ಟೂರ್ನಿ ಭಾರತ, ಪಾಕಿಸ್ತಾನ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಿತು.

* 12 ತಂಡಗಳನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಿ ಲೀಗ್‌ ಪಂದ್ಯಗಳನ್ನು ಆಡಿಸಲಾಯಿತು. ಪ್ರತಿ ಗುಂಪಿನಿಂದ ತಲಾ ನಾಲ್ಕು ತಂಡಗಳು ಕ್ವಾರ್ಟರ್‌ ಫೈನಲ್‌ಗೆ ಅರ್ಹತೆ ಪಡೆದುಕೊಂಡವು.

* ಭಾರತ, ಶ್ರೀಲಂಕಾ, ಆಸ್ಟ್ರೇಲಿಯಾ, ವೆಸ್ಟ್‌ ಇಂಡೀಸ್‌, ಜಿಂಬಾಬ್ವೆ ಮತ್ತು ಕೀನ್ಯಾ ತಂಡಗಳು ‘ಎ’ ಗುಂಪಿನಲ್ಲಿ ಹಾಗೂ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ನ್ಯೂಜಿಲೆಂಡ್‌, ಇಂಗ್ಲೆಂಡ್‌, ಯುಎಇ ಮತ್ತು ನೆದರ್ಲೆಂಡ್ಸ್‌ ತಂಡಗಳು ‘ಬಿ’ ಗುಂಪಿನಲ್ಲಿ ಆಡಿದವು.

* ಯುಎಇ, ಕೀನ್ಯಾ ಮತ್ತು ನೆದರ್ಲೆಂಡ್ಸ್‌ ತಂಡಗಳು ಇದೇ ಮೊದಲ ಬಾರಿ ವಿಶ್ವಕಪ್‌ ಟೂರ್ನಿಯಲ್ಲಿ ಪಾಲ್ಗೊಂಡವು.

* ಆಸ್ಟ್ರೇಲಿಯಾ ಮತ್ತು ವೆಸ್ಟ್‌ ಇಂಡೀಸ್‌ ತಂಡಗಳು ಭದ್ರತೆಯ ಕಾರಣವೊಡ್ಡಿ ಶ್ರೀಲಂಕಾದಲ್ಲಿ ಆಡಲು ನಿರಾಕರಿಸಿತು. ಇದರಿಂದ ಐಸಿಸಿಯು ಶ್ರೀಲಂಕಾ ತಂಡಕ್ಕೆ ಪಾಯಿಂಟ್‌ ನೀಡಿತು. ಇನ್ನುಳಿದ ಮೂರು ಲೀಗ್‌ ಪಂದ್ಯಗಳಲ್ಲಿ ಗೆದ್ದ ಶ್ರೀಲಂಕಾ ತಂಡ ಅಜೇಯವಾಗಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು.

* ಭಾರತ ತಂಡ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಎದುರು ಎಡವಿತು. ಈಡನ್ ಗಾರ್ಡನ್ಸ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಸೋಲಿನತ್ತ ಮುಖಮಾಡಿದ್ದ ವೇಳೆ ರೊಚ್ಚಿಗೆದ್ದ ಪ್ರೇಕ್ಷಕರು ಆಟಕ್ಕೆ ಅಡ್ಡಿಪಡಿಸಿದರು. ಮ್ಯಾಚ್‌ ರೆಫರಿ ಕ್ಲೈವ್‌ ಲಾಯ್ಡ್‌ ಅವರು ಲಂಕಾ ತಂಡವನ್ನು ವಿಜೇತ ಎಂದು ಪ್ರಕಟಿಸಿದರು.

* ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಶ್ರೀಲಂಕಾ ತಂಡ ಆಸ್ಟ್ರೇಲಿಯಾ ವಿರುದ್ಧ ಏಳು ವಿಕೆಟ್‌ಗಳ ಜಯ ಸಾಧಿಸಿ ಟ್ರೋಫಿ ಜಯಿಸಿತು.

* ಶ್ರೀಲಂಕಾ ಈ ಟೂರ್ನಿಗೆ ಜಂಟಿ ಆತಿಥ್ಯ ವಹಿಸಿತ್ತು. ಆದ್ದರಿಂದ ವಿಶ್ವಕಪ್‌ ಗೆದ್ದ ಮೊದಲ ಆತಿಥೇಯ ತಂಡ ಎಂಬ ಗೌರವ ತನ್ನದಾಗಿಸಿಕೊಂಡಿತು.

* ನೆದರ್ಲೆಂಡ್ಸ್‌ ತಂಡದ ಆರಂಭಿಕ ಆಟಗಾರ ನೊಲನ್‌ ಇ ಕ್ಲಾರ್ಕ್‌ ಅವರು ತಮ್ಮ 47ನೇ ವಯಸ್ಸಿನಲ್ಲಿ ಈ ಟೂರ್ನಿಯಲ್ಲಿ ಆಡಿದ್ದರು. ವಿಶ್ವಕಪ್‌ನಲ್ಲಿ ಪಾಲ್ಗೊಂಡ ಅತಿಹಿರಿಯ ಆಟಗಾರ ಎಂಬ ದಾಖಲೆ ಇಂದಿಗೂ ಅವರ ಹೆಸರಿನಲ್ಲಿದೆ.

* ಭಾರತ ಆತಿಥ್ಯ ವಹಿಸಿದ್ದ 17 ಪಂದ್ಯಗಳು 17 ಕ್ರೀಡಾಂಗಣಗಳಲ್ಲಿ ನಡೆದದ್ದು ವಿಶೇಷವಾಗಿತ್ತು. ಪಾಕಿಸ್ತಾನದ ಆರು ತಾಣಗಳಲ್ಲಿ 16 ಪಂದ್ಯಗಳು ಮತ್ತು ಶ್ರೀಲಂಕಾದ ಮೂರು ತಾಣಗಳಲ್ಲಿ ನಾಲ್ಕು ಪಂದ್ಯಗಳು ಆಯೋಜನೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT