ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿ: ಭಾರತದ ಮೊದಲ ಎದುರಾಳಿ ವಿಂಡೀಸ್

Last Updated 20 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ದುಬೈ (ಪಿಟಿಐ): ಭಾರತ ತಂಡ ಐಸಿಸಿ ಕಿರಿಯರ (19 ವರ್ಷ ವಯಸ್ಸಿನೊಳಗಿನವರ) ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸಲಿದೆ. ಕ್ವೀನ್ಸ್‌ಲೆಂಡ್‌ನ ಟೋನಿ ಐರ್ಲೆಂಡ್ ಕ್ರೀಡಾಂಗಣದಲ್ಲಿ ಆಗಸ್ಟ್ 12 ರಂದು ಈ ಪಂದ್ಯ ನಡೆಯಲಿದೆ.

ಮಾಜಿ ಚಾಂಪಿಯನ್ ಭಾರತಕ್ಕೆ ಲೀಗ್‌ನಲ್ಲಿ ಸುಲಭ `ಡ್ರಾ~ ಲಭಿಸಿದ್ದು, ಜಿಂಬಾಬ್ವೆ, ವೆಸ್ಟ್ ಇಂಡೀಸ್ ಮತ್ತು ಪಪುವಾ ನ್ಯೂಗಿನಿ ಜೊತೆ `ಸಿ~ ಗುಂಪಿನಲ್ಲಿ ಸ್ಥಾನ ಪಡೆದಿದೆ. ಭಾರತ ಎರಡು ಸಲ ಐಸಿಸಿ ಕಿರಿಯರ ವಿಶ್ವಕಪ್ ಗೆದ್ದುಕೊಂಡಿದೆ. 2000 ದಲ್ಲಿ ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಮೊಹಮ್ಮದ್ ಕೈಫ್ ನೇತೃತ್ವದ ತಂಡ ಚಾಂಪಿಯನ್ ಆಗಿತ್ತು. 2008 ರಲ್ಲಿ ಮಲೇಷ್ಯದಲ್ಲಿ ನಡೆದ ಟೂರ್ನಿಯಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಟ್ರೋಫಿ ಎತ್ತಿಹಿಡಿದಿತ್ತು.

ಆಗಸ್ಟ್ 14 ರಂದು ನಡೆಯುವ ಪಂದ್ಯದಲ್ಲಿ ಜಿಂಬಾಬ್ವೆ ತಂಡವನ್ನು ಎದುರಿಸಲಿರುವ ಭಾರತ ಎರಡು ದಿನಗಳ ಬಳಿಕ ಎಂಡೇವರ್ ಪಾರ್ಕ್ ಕ್ರೀಡಾಂಗಣದಲ್ಲಿ ಪಪುವಾ ನ್ಯೂಗಿನಿ ಜೊತೆ ಪೈಪೋಟಿ ನಡೆಸಲಿದೆ. ಆಗಸ್ಟ್ 11 ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಕಳೆದ ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ನ ಸವಾಲನ್ನು ಎದುರಿಸಲಿದೆ. ವಿಶ್ವಕಪ್ ಟೂರ್ನಿ ಕ್ವೀನ್ಸ್‌ಲೆಂಡ್‌ನ ವಿವಿಧ ತಾಣಗಳಲ್ಲಿ ಆಗಸ್ಟ್ 11 ರಿಂದ 26ರ ವರೆಗೆ ನಡೆಯಲಿದೆ.

ಕಿರಿಯರ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ಅತ್ಯಂತ ಯಶಸ್ವಿ ತಂಡ ಎನಿಸಿದೆ. ಕಾಂಗರೂ ನಾಡಿನವರು ಮೂರು ಸಲ (1988, 2002 ಮತ್ತು 2010) ಈ ಟ್ರೋಫಿ ಜಯಿಸಿದ್ದಾರೆ. ಆದರೆ ಸತತ ಎರಡು ಬಾರಿ ಟ್ರೋಫಿ ಜಯಿಸಿರುವ ಏಕೈಕ ತಂಡ ಎಂಬ ಗೌರವವನ್ನು ಪಾಕ್ ತಂಡ ಹೊಂದಿದೆ. ಪಾಕಿಸ್ತಾನ 2004 ಮತ್ತು 2006 ರಲ್ಲಿ ಕ್ರಮವಾಗಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾದಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಕಿರೀಟ ಮುಡಿಗೇರಿಸಿಕೊಂಡಿತ್ತು.

ಈ ಬಾರಿ 16 ತಂಡಗಳು ಪಾಲ್ಗೊಳ್ಳಲಿದ್ದು, ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಎಂಟು ತಾಣಗಳಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿವೆ. ಐಸಿಸಿ ಕಿರಿಯರ ವಿಶ್ವಕಪ್ ಟೂರ್ನಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ. 2014ರ ಟೂರ್ನಿಗೆ ಯುಎಇ ಆತಿಥ್ಯ ವಹಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT