ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತಕ್ಕೆ ಹಾಲೆಂಡ್ ಎದುರಾಳಿ

Last Updated 29 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಮೂವತ್ತೆರಡು ವರ್ಷಗಳಿಂದ ಪದಕದ ನಿರೀಕ್ಷೆ ಹುಸಿಯಾಗಿದೆ. ಈ ಬಾರಿಯಾದರೂ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾರತ ಹಾಕಿ ತಂಡವು ದೀರ್ಘ ಕಾಲದ ಪದಕದ ಬರ ನೀಗಿಸುತ್ತದೆ ಎನ್ನುವ ಆಶಯ ಬಲವಾಗಿದೆ.

1980ರ ಮಾಸ್ಕೋ ಒಲಿಂಪಿಕ್ಸ್‌ನಲ್ಲಿ ಸ್ವರ್ಣ ಗೆದ್ದ ನಂತರ ನಿರಂತರವಾಗಿ ನಿರಾಸೆ ಕಾಡಿದೆ. ಕಳೆದ ಬಾರಿ ಬೀಜಿಂಗ್  ಒಲಿಂಪಿಕ್ಸ್‌ಗಂತೂ ಭಾರತದ ಪುರುಷರ ತಂಡವು ಅರ್ಹತೆ ಪಡೆಯಲು ಕೂಡ ಸಾಧ್ಯವಾಗಿರಲಿಲ್ಲ. ಲಂಡನ್‌ನಲ್ಲಿ ಪೈಪೋಟಿ ನಡೆಸುವ ಅವಕಾಶವಂತೂ ಸಿಕ್ಕಿದೆ. ಒಂದು ರೀತಿಯಲ್ಲಿ ಇದು `ಪೆನಾಲ್ಟಿ ಕಾರ್ನರ್~. ಇದನ್ನು `ಪದಕ ಗೆಲ್ಲುವ~ ಗೋಲಾಗಿ ಪರಿವರ್ತಿಸಬೇಕು.

ಒಲಿಂಪಿಕ್ಸ್‌ನಲ್ಲಿ ಭಾರತ ಹಾಕಿ ತಂಡದ್ದು ಅದ್ಭುತ ಸಾಧನೆ. ಆದರೆ ಅದೆಲ್ಲವೂ ಹಳೆಯ              ಇತಿಹಾಸ. ಒಟ್ಟಾರೆ ಹನ್ನೊಂದು ಪದಕ ಗೆದ್ದಿದ್ದರೂ ಅದು ಮೂರು ದಶಕಗಳ ಹಿಂದೆ ಬರೆದಿಟ್ಟ ಇತಿಹಾಸದ ಪುಟ. ಈಗ ಹನ್ನೊಂದನ್ನು ಹನ್ನೆರಡು ಆಗಿಸುವ ಕಾಲ ಬಂದಿದೆ.

ಸೋಮವಾರ ನಡೆಯುವ ಲಂಡನ್ ಒಲಿಂಪಿಕ್ ಕೂಟದ ಪುರುಷರ ಹಾಕಿ ಚಾಂಪಿಯನ್‌ಷಿಪ್‌ನ `ಎ~ ಗುಂಪಿನ ಪಂದ್ಯದಲ್ಲಿ ಭಾರತಕ್ಕೆ ಮೊದಲ ಎದುರಾಳಿ ಹಾಲೆಂಡ್. ಗೆಲುವಿನೊಂದಿಗೆ ಕಾರ್ಯಾಚರಣೆ ಆರಂಭಿಸಿದಲ್ಲಿ ಮುಂದೆ ಎದುರಾಗಲಿರುವ ಹಾಕಿ ಶಕ್ತಿಗಳ ಮುಂದೆ ವಿಶ್ವಾಸದಿಂದ ನಿಲ್ಲುವುದು ಸಾಧ್ಯವಾಗುತ್ತದೆ. ಆದ್ದರಿಂದ ಹಾಲೆಂಡ್ ವಿರುದ್ಧದ ಪಂದ್ಯವು ಮಹತ್ವದ್ದಾಗಿದೆ.

ಸೆಮಿಫೈನಲ್ ಕನಸು ನನಸಾಗಿಸಿಕೊಳ್ಳುವ ಹಾದಿ ತುಂಬಾ ಕಷ್ಟದ್ದು. ಏಕೆಂದರೆ ಹಾಲೆಂಡ್ ಅಲ್ಲದೇ ಕಳೆದ ಬಾರಿಯ ಚಾಂಪಿಯನ್ ಜರ್ಮನಿ ಕೂಡ ಇದೇ ಗುಂಪಿನಲ್ಲಿದೆ. ದಕ್ಷಿಣ ಕೊರಿಯಾ ಹಾಗೂ ಬೆಲ್ಜಿಯಂ ಅನ್ನು ಕೂಡ ಲಘುವಾಗಿ ಪರಿಗಣಿಸಲಾಗದು. ನ್ಯೂಜಿಲೆಂಡ್ ಅಂತೂ ಭಾರಿ ಅಪಾಯಕಾರಿ. ಇಂಥ ಪರಿಸ್ಥಿತಿಯಲ್ಲಿ ಭಾರತವು ಸೆಮಿಫೈನಲ್ ತಲುಪುವಷ್ಟು ಪಾಯಿಂಟುಗಳನ್ನು ಗಿಟ್ಟಿಸಬೇಕು. ಅದೇ ದೊಡ್ಡ ಸವಾಲು!

ಭಾರತವು ಒಲಿಂಪಿಕ್ ಕೂಟದಲ್ಲಿ ಹಾಲೆಂಡ್ ಎದುರು ಗೆಲುವು ಪಡೆದಿದ್ದು ಬಹು ಹಿಂದೆ. ಅಂದರೆ 1984ರಲ್ಲಿ. ಜರ್ಮನಿಯಂತೂ 1968ರ ನಂತರ ಕಬ್ಬಿಣದ ಕಡಲೆಯಾಗಿಯೇ ಉಳಿದಿದೆ. ಇವೆರಡೂ ತಂಡಗಳ ವಿರುದ್ಧದ ಸೋಲಿನ ಕಥೆ ಮುಂದುವರಿದರೆ ಕನಸು ಒಡೆದು ಹೋಗುವ ಅಪಾಯ.

ಹಾಲೆಂಡ್, ಜರ್ಮನಿ ಹಾಗೂ ನ್ಯೂಜಿಲೆಂಡ್ ವಿರುದ್ಧದ ಪಂದ್ಯಗಳಲ್ಲಿನ ಫಲಿತಾಂಶವು ಭಾರತವು ನಾಲ್ಕರ ಘಟ್ಟವನ್ನು ಮುಟ್ಟುವ ಏಣಿಯ ಕಂಬಿಗಳು. ಈ ಎದುರಾಳಿಗಳಿಗೆ ಶರಣಾದರೆ ಸೆಮಿಫೈನಲ್‌ಗೆ ಏರುವ ಏಣಿಯೇ ಮುರಿದು ಬೀಳುತ್ತದೆ.

ಕೋಚ್ ಮೈಕಲ್ ನಾಬ್ಸ್ ಮಾರ್ಗದರ್ಶನದಲ್ಲಿ ಭಾರತ ತಂಡವು ಪದಕ ಗೆಲ್ಲುವ ಮಟ್ಟದ ವಿಶ್ವಾಸವನ್ನಂತೂ ಪಡೆದಿದೆ. ಇತ್ತೀಚೆಗೆ ಆಡಿದ ಪಂದ್ಯಗಳಲ್ಲಿನ ಪ್ರದರ್ಶನವೇ ಇಂಥದೊಂದು ಭರವಸೆಗೆ ಕಾರಣ. ಇದೇ ಉತ್ಸಾಹವು ಇಲ್ಲಿನ ನೀಲಿ ಅಂಗಳದಲ್ಲಿ ಯಶಸ್ಸಿನ ವರ್ಣವಾಗಿ ಹರಡಿಕೊಳ್ಳಬೇಕು. ಅದೇ ಆಶಯದೊಂದಿಗೆ ಭರತ್ ಚೆಟ್ರಿ ನಾಯಕತ್ವದ ಭಾರತ ತಂಡವು ಹೋರಾಟಕ್ಕೆ ಸಜ್ಜಾಗಿದೆ.

ಯಶಸ್ಸಿನ ಮುನ್ನುಡಿ ಬರೆಯುವಲ್ಲಿ ಮಿಡ್‌ಫೀಲ್ಡರ್ ಇಗ್ನೇಸ್ ಟಿರ್ಕಿ, ಡ್ರ್ಯಾಗ್ ಫ್ಲಿಕ್ ಪರಿಣತ ಸಂದೀಪ್ ಸಿಂಗ್ ಹಾಗೂ ರಕ್ಷಣಾ ಆಟಗಾರ ಸರ್ದಾರ್ ಸಿಂಗ್ ಪಾತ್ರ ಮಹತ್ವದ್ದು. ಈ ಮೂವರನ್ನು ಅತಿಯಾಗಿ ನೆಚ್ಚಿಕೊಂಡಿರುವ ಕಾರಣ ಇವರ ಮೇಲಿನ ನಿರೀಕ್ಷೆಯ ಭಾರವೂ ಹೆಚ್ಚು!

ಗುರಿ ಸ್ಪಷ್ಟವಾಗಿದೆ
ಲಂಡನ್ (ಎಎಫ್‌ಪಿ): ಗುರಿ ಸ್ಪಷ್ಟವಾಗಿದೆ. ಅದನ್ನು ಮುಟ್ಟುವ ಸಾಮರ್ಥ್ಯವನ್ನು ನಮ್ಮ ಆಟಗಾರರು ಹೊಂದಿದ್ದಾರೆಂದು ಭಾರತ ಹಾಕಿ ತಂಡದ ಕೋಚ್ ಮೈಕಲ್ ನಾಬ್ಸ್ ಹೇಳಿದ್ದಾರೆ.

`ನಮ್ಮ ಆಟಗಾರರು ಅಂಗಳಕ್ಕಿಳಿದು ಹೋರಾಡಲು ಕಾತರದಿಂದ ಕಾಯ್ದಿದ್ದಾರೆ. ಕೂಟಕ್ಕೆ ಮುನ್ನವೇ ಸತ್ವ ಪರೀಕ್ಷೆ ಮಾಡಿಕೊಳ್ಳಲಾಗಿದೆ. ಆದ್ದರಿಂದ ಭಯಪಡುವ ಪ್ರಶ್ನೆಯೇ ಎದುರಾಗದು~ ಎಂದು ಹಾಲೆಂಡ್ ವಿರುದ್ಧದ ಪಂದ್ಯದ ಮುನ್ನಾ ದಿನವಾದ ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT