ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸನಗರದಲ್ಲಿ ಹಬ್ಬದ ವಾತಾವರಣ

Last Updated 4 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಕೊಣನೂರು: ಲಂಡನ್ ಪ್ಯಾರಾ ಲಿಂಪಿಕ್ಸ್ ಅಂಗಳದಲ್ಲಿ ಬೆಳ್ಳಿಗೆರೆ ಮೂಡಿಸಿದ ಎಚ್.ಎನ್. ಗಿರೀಶ್ ಅವರ ಊರು ಹೊಸನಗರದಲ್ಲಿ ಸಂಭ್ರಮದ ಅಲೆ. 

 ಹೊಸನಗರ ಪುನರ್ವಸತಿ ಗ್ರಾಮದ ನಾಗರಾಜೇಗೌಡ ಮತ್ತು ಜಯಮ್ಮ ಅವರ ಪುತ್ರರಾದ ಗಿರೀಶ್ ಅವರ ಎಡಗಾಲಿನ ಪಾದ ಹುಟ್ಟಿನಿಂದಲೇ ಊನವಾಗಿದೆ. ಅವರು ಈ ಅಂಗವೈಕಲ್ಯವನ್ನು ಮೆಟ್ಟಿ ನಿಂತ ಪರಿ ಅನನ್ಯ. 

ಬಂಗಾರದ ಕನಸು ಸ್ಪಲ್ಪ ಅಂತರದಲ್ಲಿ ತಪ್ಪಿದರೂ, ಬೆಳ್ಳಿಯ ಪದಕದೊಂದಿಗೆ ಅವರು ಮರಳುತ್ತಿರುವುದು ಗ್ರಾಮದ ಜನರಲ್ಲಿ ಹೆಮ್ಮೆ ಮೂಡಿಸಿದೆ.

`ನನ್ನ ಮಗ ಅಂಗವಿಕಲನಾಗಿ ಹುಟ್ಟಿದ್ದಕ್ಕಾಗಿ ಕೊರಗಿದ್ದೆವು. ಈಗ ಎಲ್ಲ ಚಿಂತೆ ದೂರವಾಗಿದೆ. ನಮ್ಮ ಆನಂದಕ್ಕೆ ಪಾರವೇ ಇರಲಿಲ್ಲ~ ಎಂದು ಗಿರೀಶ್ ತಾಯಿ ಜಯಮ್ಮ, ತಂದೆ ನಾಗರಾಜೇಗೌಡ ಅವರು `ಪ್ರಜಾವಾಣಿ~ಗೆ ತಿಳಿಸಿದರು.

ಗಿರೀಶ್ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿಯೇ ಪ್ರಾಥಮಿಕ ಶಿಕ್ಷಣ ಹಾಗೂ ಬನ್ನೂರು ಸಂತೆಮಾಳದ ಸರ್ಕಾರಿ ಪ್ರೌಢಶಾಲೆ, ಕೊಡಗು ಜಿಲ್ಲೆಯ ಶಿರಂಗಾಲದಲ್ಲಿ ಪಿಯು ಶಿಕ್ಷಣ ಹಾಗೂ ಗೊರೂರಿನ ಎ.ಎನ್.ವಿ. ಪ್ರಥಮ ದರ್ಜೆ ಕಾಲೇಜಿನಲ್ಲಿ ಪದವಿ ನಂತರ ಕಂಪ್ಯೂಟರ್ ಶಿಕ್ಷಣ ಪಡೆದಿದ್ದಾರೆ.
 
ಕ್ರೀಡಾ ಚಟುವಟಿಕೆಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದ ಗಿರೀಶ್ ಚಿಕ್ಕವನಿದ್ದಾಗ ತನ್ನ ಸಹೋದರನ ಜೊತೆ ಮನೆಯ ಕಂಬಕ್ಕೆ ಹಗ್ಗ ಕಟ್ಟಿಕೊಂಡು ನೆಗೆಯುತ್ತಿದ್ದ. ನಮಗೆ ಇಬ್ಬರನ್ನು ನಿಭಾಯಿಸುವುದೇ ಕಷ್ಟವಾಗಿತ್ತು. ಈಗ ಆತನ ಸಾಧನೆ ಬಗ್ಗೆ ಏನು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ ಎಂದು ಆತನ ಬಾಲ್ಯದ ದಿನಗಳನ್ನು ನಾಗರಾಜೇಗೌಡ, ಜಯಮ್ಮ ದಂಪತಿ ನೆನಪಿಸಿಕೊಂಡರು.

ಗೊರೂರು ಕಾಲೇಜಿನಲ್ಲಿ ಪ್ರಥಮ ಬಿ.ಎ. ಓದುತ್ತಿದ್ದಾಗಲೇ ಸಾಮಾನ್ಯರ ಜೊತೆ ಸ್ಪರ್ಧಿಸಿ ಹೈಜಂಪ್‌ನಲ್ಲಿ ಗೆದ್ದು ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದಿದ್ದರು. ಬಳಿಕ ಮೈಸೂರು ವಿಶ್ವವಿಶ್ವವಿದ್ಯಾಲಯದಲ್ಲಿ ಕಂಚಿನ ಪದಕ, ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಹೈಜಂಪ್ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿದರು. 

ನಂತರ 2006ರಲ್ಲಿ ಮೊದಲ ಬಾರಿಗೆ ಅಂತರಾಷ್ಟ್ರೀಯ ಮಟ್ಟದ ಅಂಗವಿಕಲರ ಅಥ್ಲೆಟಿಕ್ಸ್‌ಗೆ ಆಯ್ಕೆಯಾಗಿ ಐರ್ಲೆಂಡ್‌ನಲ್ಲಿ ನಡೆದ ಜೂನಿಯರ್ ಸ್ಪರ್ಧೆಯಲ್ಲಿ ಕಂಚಿನ ಪದಕ, ಕುವೈತ್ ಮತ್ತು ಮಲೇಷ್ಯಾದಲ್ಲಿ ನಡೆದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಪಡೆದು ಕ್ರೀಡಾ ಜಗತ್ತಿಗೆ ಕಾಲಿರಿಸಿದ.

ಕಳೆದ ಬಾರಿ ಚೀನಾದಲ್ಲಿ ನಡೆದ ಬೀಜಿಂಗ್ ಪ್ಯಾರಾಲಿಂಪಿಕ್ಸ್ ತಂಡಕ್ಕೆ ನಡೆದ ಆಯ್ಕೆ ಟ್ರಯಲ್ಸ್‌ನಲ್ಲಿ ಅಂತಿಮ ಹಂತದವರೆಗೆ ಬಂದು ವೈಫಲ್ಯ ಕಂಡರೂ, ಕುಗ್ಗದೆ ಅಭ್ಯಾಸ ಮುಂದುವರೆಸಿದ್ದ ಗಿರೀಶ್ ಛಲಕ್ಕೆ ಇದೀಗ ಲಂಡನ್‌ನಲ್ಲಿ ಪ್ರತಿಫಲ ಲಭಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT