ಸೋಮವಾರ, ಮಾರ್ಚ್ 8, 2021
27 °C

ರಮೇಶ ಯತ್ನ ನಿಲ್ಲಿಸಲ್ಲ: ಸಚಿವ ಸತೀಶ ಜಾರಕಿಹೊಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಮೇಶ ಜಾರಕಿಹೊಳಿ ಏಕಾಂಗಿಯಾಗಿದ್ದಾರೆ. ಸಮ್ಮಿಶ್ರ ಸರ್ಕಾರ ಉರುಳಿಸಲು ಅಗತ್ಯವಾದಷ್ಟು ಶಾಸಕರ ಸಂಖ್ಯಾ ಬಲ ಈಗ ಅವರ ಬಳಿ ಇಲ್ಲ. ಹೀಗಾಗಿ, ಅವರ ಯತ್ನ ಯಶಸ್ವಿಯಾಗುವುದಿಲ್ಲ’ ಎಂದು ಅರಣ್ಯ ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಂಗಳವಾರ ಮಾತನಾಡಿದ ಅವರು, ‘ಮುಂದಿನ ದಿನಗಳಲ್ಲೂ ರಮೇಶಗೆ ಸಂಖ್ಯಾ ಬಲ ಸಿಗುವುದಿಲ್ಲ. ಆದರೂ ಅವರು ತಮ್ಮ ಪ್ರಯತ್ನ ನಿಲ್ಲಿಸುವುದಿಲ್ಲ. ಇಲ್ಲಿಯವರೆಗೆ ಆಗಿದ್ದು ಆಗಿದೆ. ಇನ್ನು ಮುಂದಾದರೂ ಪಕ್ಷದ ಪರವಾಗಿ ಇರಬೇಕು ಎಂದು ಅವರಿಗೆ ನಾನು ಮನವಿ ಮಾಡುತ್ತೇನೆ’ ಎಂದರು.

‘ಸರ್ಕಾರದ ವಿರುದ್ಧ ಬಂಡಾಯವೇಳುವಂತೆ ಪ್ರಚೋದಿಸಿದ್ದೇ ಸತೀಶ’ ಎಂಬ ರಮೇಶ ಜಾರಕಿಹೊಳಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಪಕ್ಷ ಸಂಘಟನೆ, ಸಂಪುಟ ಸಭೆಗೆ ಹೋಗಬೇಡ ಎಂದು ನಾನು ಯಾವತ್ತೂ ಅವರಿಗೆ ಹೇಳಿರಲಿಲ್ಲ. ಅಷ್ಟಕ್ಕೂ ರಮೇಶ ಇನ್ನೂ ಚಿಕ್ಕ ಹುಡುಗನಲ್ಲ. ಅನಾವಶ್ಯಕವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಒಂದು ಪಕ್ಷದಲ್ಲಿ ಇದ್ದು, ಸಚಿವರಾಗಿ ಸರ್ಕಾರದ ವಿರುದ್ಧವಾಗಿ ಕೆಲಸ ಮಾಡಿದ್ದಾರೆ. ಇದೇ ಕಾರಣಕ್ಕೆ ಸಚಿವ ಸ್ಥಾನದಿಂದ ಪಕ್ಷದ ನಾಯಕರು ಅವರನ್ನು ಕೈಬಿಟ್ಟಿದ್ದಾರೆ. ಇದಕ್ಕೆ ನಾನು ಹೇಗೆ ಹೊಣೆಯಾಗಲು ಸಾಧ್ಯ’ ಎಂದು ಪ್ರಶ್ನಿಸಿದರು.

‘ಸಂದರ್ಭಕ್ಕೆ ತಕ್ಕಂತೆ ಡಿ.ಕೆ. ಶಿವಕುಮಾರ್‌, ಲಕ್ಷ್ಮಿ ಹೆಬ್ಬಾಳಕರ, ಸಿದ್ದರಾಮಯ್ಯ ವಿರುದ್ಧ ರಮೇಶ ಮಾತನಾಡಿದ್ದಾರೆ. ಈಗ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಆ ಒಂದು ‘ವಸ್ತು’ ಕಳೆದುಕೊಂಡು ಹೀಗೆಲ್ಲಾ ಆಡುತ್ತಿದ್ದಾರೆ. ಖಂಡಿತವಾಗಿಯೂ ಸಮಯ ಬಂದಾಗ ಆ 'ವಸ್ತು' ಯಾವುದು, ಏನು ಎಂಬುವುದನ್ನು ಹೇಳುತ್ತೇನೆ’ ಎಂದರು.

‘ಈಗಿನ ಎಲ್ಲ ಬೆಳವಣಿಗೆಗಳಿಗೆ ರಮೇಶ ಅವರ ಅಳಿಯ ಅಂಬಿರಾಯ ಪಾಟೀಲ ಕಾರಣ. ರಮೇಶನ ಮೇಲೆ ನಿಯಂತ್ರಣ, ಆಡಳಿತ ಎಲ್ಲವನ್ನೂ ಅಂಬಿರಾಯನೇ ಮಾಡುವುದು. ಇದನ್ನು ವಿರೋಧಿಸಿದ ಕಾರಣಕ್ಕೆ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ’ ಎಂದರು.

‘ಡಿಕೆಶಿ ಬಗ್ಗೆ ನಾನು ಮಾತನಾಡಿಲ್ಲ’
‘ಸಚಿವ ಶಿವಕುಮಾರ್ ಬಗ್ಗೆ ನಾನು ಎಲ್ಲೂ ಮಾತನಾಡಿಲ್ಲ. ಅವರು ಅಷ್ಟೊಂದು ತರಾತುರಿಯಲ್ಲಿ ನನ್ನ ಬಗ್ಗೆ ಮಾತನಾಡಬಾರದಿತ್ತು’ ಎಂದು ಸತೀಶ ಜಾರಕಿಹೊಳಿ ಹೇಳಿದರು.

‘‌ಸತೀಶ ಸಾಹುಕಾರ, ನಾನು ಸಾಮಾನ್ಯ ಪ್ರಜೆ’ ಎಂಬ ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.

‘ಶಿವಕುಮಾರ್‌ಗೆ ಉಸ್ತುವಾರಿ ವಹಿಸಿರುವುದು ಪಕ್ಷದ ನಿರ್ಧಾರ. ಗುಂಡ್ಲುಪೇಟೆ, ಬಳ್ಳಾರಿ ಚುನಾವಣೆಯಲ್ಲಿ ಅವರ ಉಸ್ತುವಾರಿಯಲ್ಲೇ ನಾವು ಕೆಲಸ ಮಾಡಿದ್ದೆವು. ಅವರು ಕುಂದಗೋಳ ಕ್ಷೇತ್ರದ ಉಸ್ತುವಾರಿ ವಹಿಸಬಾರದೆಂದೂ ನಾನು ಹೇಳಿಲ್ಲ. ಅನಾವಶ್ಯಕವಾಗಿ ನನ್ನ ಬಗ್ಗೆ ಹೇಳಿಕೆ ನೀಡಿದ್ದಾರೆ. ಹೇಳಿಕೆ ನೀಡುವ ಮೊದಲು ತಿಳಿದುಕೊಂಡು ಮಾತನಾಡಲಿ’ ಎಂದು ಸಿಟ್ಟು ವ್ಯಕ್ತಪಡಿಸಿದರು.

ರಮೇಶ ಕಾಂಗ್ರೆಸ್ ತ್ಯಜಿಸಲ್ಲ: ಜಮೀರ್
‘ರಮೇಶ ಅವರ ದೇಹದಲ್ಲಿ ಹರಿಯುತ್ತಿರುವುದು ಕಾಂಗ್ರೆಸ್ ರಕ್ತ. ಸಚಿವ ಸ್ಥಾನದಿಂದ‌ ಕೈಬಿಟ್ಟಾಗ ಅಸಮಾಧಾನ ಆಗುವುದು ಸಹಜ. ಹಾಗೆಂದು, ಅವರು ಕಾಂಗ್ರೆಸ್ ತ್ಯಜಿಸಿ ಬಿಜೆಪಿಗೆ ಹೋಗುವುದಿಲ್ಲ. ಕೋಪದಲ್ಲಿ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದಾರೆ ಅಷ್ಟೆ’ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಜಮೀರ್ ಅಹಮದ್ ಖಾನ್ ಹೇಳಿದರು.

ರಮೇಶ ಅಸಮಾಧಾನ ಕುರಿತು ಪ್ರತಿಕ್ರಿಯಿಸಿದ ಅವರು, ‘ಜಾರಕಿಹೊಳಿ ಸಹೋದರರ ನಡುವೆ ಯಾವುದೇ ಭಿನ್ನಮತ ಇಲ್ಲ. ಸಹೋದರರ ನಡುವೆ ಪ್ರೀತಿ ಜಾಸ್ತಿ ಇದೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು