ಸೋಮವಾರ, ಸೆಪ್ಟೆಂಬರ್ 20, 2021
26 °C

ಐಸಿಎಸ್‌ಇ ಪರೀಕ್ಷೆಗೆ ಅನುಮತಿ ಸಾಧ್ಯವಿಲ್ಲ: ಮಹಾರಾಷ್ಟ್ರ

ಪಿಟಿಐ Updated:

ಅಕ್ಷರ ಗಾತ್ರ : | |

Exam hall

ಮುಂಬೈ: ‘ಬಾಕಿ ಉಳಿದಿರುವ ಐಸಿಎಸ್‌ಇ 10 ಹಾಗೂ 12ನೇ ತರಗತಿ ಪರೀಕ್ಷೆಗಳನ್ನು ಜುಲೈನಲ್ಲಿ ನಡೆಸಲು ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ಮಹಾರಾಷ್ಟ್ರ ಸರ್ಕಾರ, ಬಾಂಬೆ ಹೈಕೋರ್ಟ್‌ಗೆ ಬುಧವಾರ ಸ್ಪಷ್ಟಪಡಿಸಿದೆ. 

ಮಹಾರಾಷ್ಟ್ರದಲ್ಲಿ ಕೋವಿಡ್ ಸೋಂಕಿತರು ಹಾಗೂ ಸಾವಿನ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನದಲ್ಲಿರಿಸಿಕೊಂಡು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. 

‘ರಾಜ್ಯ ವಿಶ್ವವಿದ್ಯಾಲಯಗಳ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸದಿರಲು ತೀರ್ಮಾನಿಸಲಾಗಿದೆ’ ಎಂದು ಸರ್ಕಾರ ಇದೇ ವೇಳೆ ತಿಳಿಸಿದೆ. 

ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ರಾಜ್ಯ ವಿಪತ್ತು ನಿರ್ವಹಣಾ ಸಮಿತಿ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್‌ಗೆ ತಿಳಿಸಿದರು.

ಪರೀಕ್ಷೆ ಬರೆಯದ ವಿದ್ಯಾರ್ಥಿಗಳಿಗೆ ಯಾವ ಬಗೆಯ ಪರ್ಯಾಯ ವಿಧಾನ ಅಳವಡಿಸಿಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ನೀಡುವಂತೆ ಐಸಿಎಸ್‌ಇಗೆ ನಿರ್ದೇಶನ ನೀಡಿದ ಹೈಕೋರ್ಟ್‌, ವಿಚಾರಣೆಯನ್ನು ಇದೇ 29ಕ್ಕೆ ಮುಂದೂಡಿತು.

ಐಸಿಎಸ್‌ಇ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಜುಲೈ 2ರಿಂದ 12ರವರೆಗೆ ನಡೆಸಲು ನಿರ್ಧರಿಸಿತ್ತು. ಆದರೆ, ಪರೀಕ್ಷೆಗಳನ್ನು ನಡೆಸುವ ಮಂಡಳಿಯ ನಿರ್ಧಾರ ಪ್ರಶ್ನಿಸಿ ಮುಂಬೈ ನಿವಾಸಿ ಅರವಿಂದ ತಿವಾರಿ ಎಂಬುವರು ನ್ಯಾಯಾಲಯದ ಮೊರೆ ಹೋಗಿದ್ದರು. ಮುಂಬೈನಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ವಿದ್ಯಾರ್ಥಿಗಳ ಹಿಂದಿನ ಪರೀಕ್ಷಾ ಫಲಿತಾಂಶ ಆಧರಿಸಿ ತೇರ್ಗಡೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದರು. ಈ ಕುರಿತು ಸ್ಪಷ್ಟ ನಿಲುವು ತಿಳಿಸುವಂತೆ ಹೈಕೋರ್ಟ್ ಸೋಮವಾರ ಮಹಾರಾಷ್ಟ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು