ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕೂವರೆ ವರ್ಷದಲ್ಲಿ 19 ಕೆರೆ ಕಣ್ಮರೆ

ರಾಜಕಾಲುವೆ ಒತ್ತುವರಿ ತೆರವು ಕೋರಿದ ಪಿಐಎಲ್‌ಗಳ ವಿಚಾರಣೆ
Last Updated 7 ಜೂನ್ 2019, 19:35 IST
ಅಕ್ಷರ ಗಾತ್ರ

ಬೆಂಗಳೂರು: ‘ಕಳೆದ ನಾಲ್ಕೂವರೆ ವರ್ಷಗಳಲ್ಲಿ ಬೆಂಗಳೂರಿನ 19 ಕೆರೆಗಳು ಹೇಗೆ ನಶಿಸಿವೆ ಮತ್ತು ಅಸ್ತಿತ್ವದಲ್ಲಿರುವ ಕೆರೆಗಳ ಸಂರಕ್ಷಣೆಗೆ ಕೈಗೊಂಡಿರುವ ಕ್ರಮಗಳೇನು ಎಂಬುದರ ಸಂಪೂರ್ಣ ವಿವರ ಒದಗಿಸಿ’ ಎಂದು ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶಿಸಿದೆ.

‘ಬಿಬಿಎಂಪಿ ವ್ಯಾಪ್ಯಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವುಗೊಳಿಸಬೇಕು’ ಎಂದು ಕೋರಿ ‘ಸಿಟಿಜನ್ಸ್‌ ಆ್ಯಕ್ಷನ್‌ ಗ್ರೂಪ್‌’ ಕಾರ್ಯದರ್ಶಿ ನೊಮಿತಾ ಚಾಂಡಿ, ‘ಜೆ.ಪಿ ನಗರ 4ನೇ ಹಂತದ ಡಾಲರ್ಸ್‌ ಲೇ ಔಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ’ದ ಕಾರ್ಯದರ್ಶಿ ಗುಂಡಾ ಭಟ್‌ ಮತ್ತು ‘ಸಮರ್ಪಣಾ’ ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು, ಮುಖ್ಯ ನ್ಯಾಯಮೂರ್ತಿ ಎ.ಎಸ್‌.ಓಕಾ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.

ಮುಂದಿನ ವಿಚಾರಣೆ ವೇಳೆಗೆ ನಗರದ ಕೆರೆಗಳ ಕುರಿತಾದ ವಾಸ್ತವ ಸಂಗತಿಗಳನ್ನು ಅರಿಯಲು ರಾಷ್ಟ್ರೀಯ ಪರಿಸರ ಎಂಜಿನಿಯರಿಂಗ್‌ ಸಂಶೋಧನಾ ಸಂಸ್ಥೆಯಿಂದ (ಎನ್‌ಇಇಆರ್‌ಐ) ತಪಾಸಣೆ ನಡೆಸುವ ಇಂಗಿತ ವ್ಯಕ್ತಪಡಿಸಿರುವ ನ್ಯಾಯಪೀಠ, ‘ಈ ಕುರಿತಂತೆ ಸರ್ಕಾರದಿಂದ ಸೂಕ್ತ ಮಾಹಿತಿ ಪಡೆದುಕೊಳ್ಳಿ’ ಎಂದು ರಾಜ್ಯ ಸರ್ಕಾರದ ಪರ ವಕೀಲ ಡಿ.ನಾಗರಾಜ್ ಅವರಿಗೆ ತಾಕೀತು ಮಾಡಿದೆ.

‘ಅಸ್ತಿತ್ವ ಕಳೆದುಕೊಂಡಿವೆ ಎಂದು ಹೇಳಲಾಗುತ್ತಿರುವ 19 ಕೆರೆಗಳನ್ನು ವೈಜ್ಞಾನಿಕ ವಿಧಾನದಲ್ಲಿ ಪುನರುಜ್ಜೀವನಗೊಳಿಸಲು ಸಾಧ್ಯವೇ, ಇಲ್ಲಿನ ಲೇ ಔಟ್‌ಗಳು ಮತ್ತು ಕಟ್ಟಡಗಳನ್ನು ತೆರವುಗೊಳಿಸಲು ಆಗುತ್ತದೆಯೇ, ಬ್ರಿಟಿಷರ ಕಾಲದಲ್ಲಿ ಗುರುತಿಸಲಾಗಿರುವ ಬೆಂಗಳೂರಿನ ಕೆರೆಗಳ ಸಂಖ್ಯೆ ಎಷ್ಟು ಮತ್ತು, ಈ ಕುರಿತ ಗೆಜೆಟ್‌ ಅಂಕಿ ಅಂಶಗಳು ಏನು ಹೇಳುತ್ತವೆ ಎಂಬುದರ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿ’ ಎಂದೂ ನ್ಯಾಯಪೀಠ ಸೂಚಿಸಿದೆ.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲ ವಿ.ಶ್ರೀನಿಧಿ, ನಗರದಲ್ಲಿರುವ ಕೆರೆಗಳ ಕುರಿತಾದ ವಸ್ತುಸ್ಥಿತಿ ವರದಿಯನ್ನು ಮೆಮೊ (ಜ್ಞಾಪನಾ ಪತ್ರ) ಮೂಲಕ ನ್ಯಾಯಪೀಠಕ್ಕೆ ಸಲ್ಲಿಸಿದರು.

ಮೆಮೊದಲ್ಲಿ ಏನಿದೆ?: ‘ಸದ್ಯ ಬಿಬಿಎಂಪಿ ವಶದಲ್ಲಿ 168 ಕೆರೆಗಳಿವೆ. 19 ಕೆರೆಗಳು ತಮ್ಮ ಅಸ್ತಿತ್ವ ಕಳೆದುಕೊಂಡಿವೆ. ಬಸ್ ನಿಲ್ದಾಣ, ಕ್ರೀಡಾಂಗಣ, ಕಚೇರಿ, ಪರಿಸರ ನಿಯಂತ್ರಣ ಮಂಡಳಿ, ಕಂದಾಯ ಇಲಾಖೆ ವಸತಿ ಗೃಹಗಳು, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಲೇ ಔಟ್‌ಗಳು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. 58 ಕೆರೆಗಳನ್ನು ಬಿಡಿಎ ನಿರ್ವಹಣೆ ಮಾಡುತ್ತಿದೆ’ ಎಂದು ಮೆಮೊದಲ್ಲಿ ವಿವರಿಸಲಾಗಿದೆ.

‘75 ಕೆರೆಗಳನ್ನು ಸಂಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದ್ದು ಬಿಬಿಎಂಪಿಯೇ ಅವುಗಳ ನಿರ್ವಹಣೆ ಮಾಡುತ್ತಿದೆ. ಇವುಗಳಿಗೆ ಚರಂಡಿ ನೀರು ಸೇರುವುದನ್ನು ಸಂಪೂರ್ಣ ತಡೆಗಟ್ಟಲಾಗಿದೆ. ಕೇವಲ ಮಳೆ ನೀರು ಮಾತ್ರವೇ ಇಲ್ಲಿಗೆ ಹರಿದು ಬರುತ್ತಿದೆ. 168 ಕೆರೆಗಳ ಪೈಕಿ 19 ಕೆರೆಗಳ ಅಭಿವೃದ್ಧಿ ಕಾರ್ಯ ಚಾಲ್ತಿಯಲ್ಲಿದೆ. ಈ ಕಾಮಗಾರಿ ಇದೇ ವರ್ಷದ ಆಗಸ್ಟ್‌ ಅಂತ್ಯಕ್ಕೆ ಪೂರ್ಣವಾಗಲಿದೆ’ ಎಂದು ತಿಳಿಸಲಾಗಿದೆ.

ವಿಚಾರಣೆಯನ್ನು ಇದೇ 13ಕ್ಕೆ ಮುಂದೂಡಲಾಗಿದ್ದು, ‘ಅಂದು ಕೆರೆಗಳ ಕುರಿತಾದ ಆಕ್ಷೇಪಗಳಿಗೆ ಸಂಬಂಧಿಸಿದಂತೆ ಸೂಕ್ತ ಆದೇಶ ಹೊರಡಿಲಾಗುವುದು’ ಎಂದು ನ್ಯಾಯಪೀಠ ತಿಳಿಸಿದೆ.

‘ಪ್ರತಿ ತಿಂಗಳೂ 250 ಒತ್ತುವರಿ ತೆರವು’

‘ರಾಜಕಾಲುವೆಗಳ ಒತ್ತುವರಿಯನ್ನು ಪ್ರತಿ ತಿಂಗಳೂ 250ರಂತೆ ತೆರವುಗೊಳಿಸಲಾಗುತ್ತಿದೆ’ ಎಂದು ಶ್ರೀನಿಧಿ ನ್ಯಾಯಪೀಠಕ್ಕೆ ವಿವರಿಸಿದರು.

‘ಸರ್ಕಾರದ ಸರ್ವೆ ಅಧಿಕಾರಿಗಳು 2019ರ ಮೇ ಅಂತ್ಯಕ್ಕೆ ಗುರುತಿಸಿರುವ ವರದಿಯ ಅನುಸಾರ ಒಟ್ಟು 1912 ಒತ್ತುವರಿಗಳಿವೆ. ಇವುಗಳಲ್ಲಿ 600ಕ್ಕೂ ಹೆಚ್ಚು ತೆರವುಗೊಳಿಸಲಾಗಿದೆ’ ಎಂದು ತಿಳಿಸಿದರು.

ಆಕ್ಷೇಪ: ‘ಕೆರೆಗಳ ಅಂಕಿಸಂಖ್ಯೆ ವಿವರ ನಿಖರವಾಗಿಲ್ಲ’ ಎಂದು ಅರ್ಜಿದಾರರ ಪರ ವಕೀಲರಾದ ಜಿ.ಆರ್‌.ಮೋಹನ್‌ ಮತ್ತು ಜಯ್ನಾ ಕೊಠಾರಿ ಆಕ್ಷೇಪ ವ್ಯಕ್ತಪಡಿಸಿದರು.

‘ಕಣ್ಮರೆಯಾಗಿರುವ ಕೆರೆ ಪ್ರದೇಶವೊಂದರಲ್ಲಿ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ನೌಕರರ ಲೇ ಔಟ್‌ ನಿರ್ಮಾಣ ಮಾಡಲಾಗಿದೆ ಎಂದು ಜಯ್ನಾ ಕೊಠಾರಿ ದೂರಿದರು.

**

ನಗರದಲ್ಲಿರುವ ಕೆರೆಗಳ ದಶದಿಕ್ಕುಗಳು ಕಾಂಕ್ರೀಟ್ ಜಂಗಲ್‌ನಿಂದ ಆವೃತವಾಗಿವೆ. ಇವುಗಳ ಸಂರಕ್ಷಣೆ ಮಾಡದಿರುವುದು ಸಂವಿಧಾನದ 21ನೇ ವಿಧಿಯ ಉಲ್ಲಂಘನೆ
- ಎ.ಎಸ್‌.ಓಕಾ, ಮುಖ್ಯ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT