ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ₹ 45 ಲಕ್ಷ ಜಪ್ತಿ

ಶನಿವಾರ, ಏಪ್ರಿಲ್ 20, 2019
24 °C

ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ₹ 45 ಲಕ್ಷ ಜಪ್ತಿ

Published:
Updated:
Prajavani

ಬೆಂಗಳೂರು: ಮಹಾಲಕ್ಷ್ಮಿಲೇಔಟ್ ಸಮೀಪದ ಜಿ.ಡಿ.ನಾಯ್ಡು ರಸ್ತೆಯಲ್ಲಿ ಮಂಗಳವಾರ ಬೆಳಿಗ್ಗೆ ಚಿನ್ನಾಭರಣ ವ್ಯಾಪಾರಿಯೊಬ್ಬರ ಸಹಾಯಕನನ್ನು ವಶಕ್ಕೆ ಪಡೆದ ಪೊಲೀಸರು, ಅವರ ಬಳಿ ಇದ್ದ ದಾಖಲೆ ಇಲ್ಲದ ₹ 45 ಲಕ್ಷ ನಗದನ್ನು ಜಪ್ತಿ ಮಾಡಿದ್ದಾರೆ. 

‘ವಿನೋಬಾನಗರದ ನಿವಾಸಿ ರಾಹುಲ್, ಬೆಳಿಗ್ಗೆ 11 ಗಂಟೆ ಸುಮಾರಿಗೆ ಮಹಾಲಕ್ಷ್ಮಿಲೇಔಟ್‌ನಿಂದ ಸ್ಕೂಟರ್‌ನಲ್ಲಿ ಚಿಕ್ಕಪೇಟೆ ಕಡೆಗೆ ತೆರಳುತ್ತಿದ್ದರು. ಅವರು ಹಣ ಸಾಗಣೆ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂತು.

ಕೂಡಲೇ ಲೋಕಸಭಾ ಚುನಾವಣೆಯ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿ ಹನುಮಂತ ಬಗಲಿ ಅವರನ್ನು ಕರೆಸಿಕೊಂಡೆವು. ಜೆ.ಡಿ.ನಾಯ್ಡು ರಸ್ತೆಯಲ್ಲಿ ಸ್ಕೂಟರ್ ತಡೆದು ಪರಿಶೀಲಿಸಿದಾಗ, ಡಿಕ್ಕಿಯಲ್ಲಿ ನೋಟುಗಳ ಬಂಡಲ್‌ಗಳು ಸಿಕ್ಕವು’ ಎಂದು ಪೊಲೀಸರು ಹೇಳಿದರು.

‘ನಾನು ಹಲವು ವರ್ಷಗಳಿಂದ ಚಿಕ್ಕಪೇಟೆಯ ಆಭರಣ ವ್ಯಾಪಾರಿ ಸಚಿನ್ ಅವರ ಬಳಿ ಕೆಲಸ ಮಾಡುತ್ತಿದ್ದೇನೆ. ಮಹಾಲಕ್ಷ್ಮಿಲೇಔಟ್‌ನಲ್ಲಿರುವ ತಮ್ಮ ಸ್ನೇಹಿತ ಸುನೀಲ್ ಬಳಿ ತೆರಳಿ ₹ 45 ಲಕ್ಷ ಪಡೆದುಕೊಂಡು ಬರುವಂತೆ ಮಾಲೀಕರು ಹೇಳಿದ್ದರು. ಅವರ ಸೂಚನೆಯಂತೆ ಹಣ ತೆಗೆದುಕೊಂಡು ಹೋಗುತ್ತಿದ್ದೆ. ಅದರ ಬಗ್ಗೆ ನನಗೆ ಹೆಚ್ಚಿನ ಮಾಹಿತಿ ಗೊತ್ತಿಲ್ಲ’ ಎಂದು ರಾಹುಲ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ರಾಹುಲ್ ಹೇಳಿಕೆ ಆಧರಿಸಿ ಪೊಲೀಸರು ಸಚಿನ್ ಅವರನ್ನೂ ವಿಚಾರಣೆ ನಡೆಸಿದ್ದಾರೆ.

‘ಅಕ್ಷಯ ತೃತೀಯ ಸಂದರ್ಭದಲ್ಲಿ ನಮ್ಮಲ್ಲಿ ವಹಿವಾಟು ಹೆಚ್ಚಿರುತ್ತದೆ. ಹೀಗಾಗಿ, ಆಭರಣ ಖರೀದಿಸಲು ಸುನೀಲ್ ಬಳಿ ₹ 45 ಲಕ್ಷ ಸಾಲ ಕೇಳಿದ್ದೆ. ಆತ ಕೊಡುವುದಾಗಿ ಹೇಳಿದ್ದರಿಂದ ಸಹಾಯಕನನ್ನು ಕಳುಹಿಸಿದ್ದೆ.

ಇದು ಚುನಾವಣೆಗೆ ಸಂಬಂಧಿಸಿದ ಹಣವಲ್ಲ’ ಎಂದು ಅವರು ಹೇಳಿದ್ದಾರೆ. ರಾಹುಲ್ ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿದ್ದನ್ನು ಸುನೀಲ್ ಸಹ ಖಚಿತಪಡಿಸಿದ್ದಾರೆ.

‘ಸದ್ಯ ಎನ್‌ಸಿಆರ್ (ಸಾಮಾನ್ಯ ಪ್ರಕರಣ) ದಾಖಲಿಸಿಕೊಂಡು, ದಾಳಿ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದೇವೆ.

ಹಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಾಜರುಪಡಿಸುವಂತೆ ಸುನೀಲ್ ಹಾಗೂ ಸಚಿನ್‌ಗೆ ಸೂಚಿಸಿದ್ದೇವೆ’ ಎಂದು ಮಹಾಲಕ್ಷ್ಮಿ ಲೇಔಟ್ ಪೊಲೀಸರು ಹೇಳಿದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !