ಭಾರತ ಬಂದ್‌ ಭಾಗಶಃ ಯಶಸ್ವಿ

7
ಅಂಗಡಿ– ಮುಂಗಟ್ಟು, ಶಾಲಾ– ಕಾಲೇಜು ಬಂದ್, ಬಸ್‌ ಸಂಚಾರ ಸ್ಥಗಿತ– ಜನರ ಪರದಾಟ

ಭಾರತ ಬಂದ್‌ ಭಾಗಶಃ ಯಶಸ್ವಿ

Published:
Updated:
Deccan Herald

ರಾಯಚೂರು: ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭಾರತ ಬಂದ್‌ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.

ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ– ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಬಸ್‌ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು ಜನರು ಪರದಾಡುವಂತಾಯಿತು. ಕಾಂಗ್ರೆಸ್‌ ಪಕ್ಷದ ಮುಖಂಡರು ಎತ್ತಿನ ಬಂಡಿ ಹಾಗೂ ಸೈಕಲ್‌ ಸವಾರಿ ಮೂಲಕ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬಂದ್‌ ಬೆಂಬಲಿಸಿ ವಿವಿಧ ಸಂಘಟನೆಗಳು ಬೀದಿಗಿಳಿದು ಹೋರಾಟ ನಡೆಸಿದ್ದು, ಕೇಂದ್ರ ಸರ್ಕಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ದಹನ ಮಾಡಿದರು. ಪ್ರಮುಖ ವೃತ್ತಗಳಲ್ಲಿ ಪೊಲೀಸ್‌ ಬಂದೋಬಸ್ತ್ ಒದಗಿಸಲಾಗಿತ್ತು

ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ನಗರದ ಕೇಂದ್ರ ಬಸ್‌ ನಿಲ್ದಾಣ ಬಿಕೋ ಎನ್ನುತ್ತಿತ್ತು. ಆದರೆ, ಖಾಸಗಿ ವಾಹನ ಸಂಚಾರ ಎಂದಿನಂತೆ ನಡೆದಿತ್ತು. ಕೃಷಿ ಉತ್ಪನ್ನ ಮಾರುಕಟ್ಟೆ, ತರಕಾರಿ ಮಾರುಕಟ್ಟೆ, ಬಟ್ಟೆ ಬಜಾರ್, ಸರಾಫ್ ಬಜಾರ್ ಸೇರಿದಂತೆ ಬಹುತೇಕ ವ್ಯಾಪಾರ ಕೇಂದ್ರಗಳು ಮುಚ್ಚಿದ್ದವು. ಪೆಟ್ರೋಲ್ ಬಂಕ್ ಹಾಗೂ ಚಿತ್ರಮಂದಿರಗಳು ಕೂಡ ಬಂದ್ ಮಾಡಲಾಗಿತ್ತು. ತುರ್ತು ಸೇವೆಗಳಾದ ಆಸ್ಪತ್ರೆ, ಔಷಧ ಅಂಗಡಿಗಳು, ಸರ್ಕಾರಿ ಕಚೇರಿಗಳು ಹಾಗೂ ಬ್ಯಾಂಕ್‌ಗಳು ತೆರೆದಿದ್ದವು.

ಜಿಲ್ಲಾ ಕಾಂಗ್ರೆಸ್‌ ಸಮಿತಿ

ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ನಿರಂತರ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಸದಸ್ಯರು ನಗರದ ಪ್ರಮುಖ ರಸ್ತೆಗಳಲ್ಲಿ ಎತ್ತಿನ ಬಂಡಿ ಹಾಗೂ ಸೈಕಲ್ ‍ರ‍್ಯಾಲಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸೈಕಲ್ ರ‍್ಯಾಲಿ ಮೂಲಕ ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್‌ ಕಾರ್ಯಕರ್ತರು ಟೈರ್‌ಗೆ ಬೆಂಕಿ ಹಚ್ಚಿ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.  ಧರಣಿಯಲ್ಲಿ ಜೆಡಿಎಸ್‌ ಪಕ್ಷದ ಮುಖಂಡರು ಪಾಲ್ಗೊಂಡು ಬೆಂಬಲಿಸಿದರು.

ಇಂಧನ ಬೆಲೆ ನಿಯಂತ್ರಣ ಮಾಡುವಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ವಿಫಲವಾಗಿದ್ದು, ಇಂಧನದ ಮೇಲೆ ಭಾರಿ ಸುಂಕ ವಿಧಿಸುವ ಮೂಲಕ ಜನಸಾಮಾನ್ಯರ ಮೇಲೆ ಹೊರೆ ಹಾಕಲಾಗಿದೆ. ಸುಳ್ಳು ಭರವಸೆಗಳ ನೀಡಿ ಆಡಳಿತ ನಡೆಸುತ್ತಿರುವ ಸರ್ಕಾರ ಜನವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ದೂರಿದರು.

ಚುನಾವಣೆ ಸಂದರ್ಭದಲ್ಲಿ ಬಿಜೆಪಿ ನೀಡಿದ್ದ ಭರವಸೆಗಳು ಇದುವರೆಗೆ ಈಡೇರಿಸಿಲ್ಲ. ಮೋದಿ ಭಾಷಣಗಳು ಸುಳ್ಳಿನಿಂದ ಕೂಡಿವೆ ಎಂಬುದು ಜನರಿಗೆ ಅರಿವಾಗಿದೆ. ಕೇಂದ್ರ ಸರ್ಕಾರ ಜನಪರವಾಗಿದೆ ಎಂದು ಹೇಳಿಕೊಂಡೆ ಜನರ ಮೇಲೆ ಆರ್ಥಿಕ ಬರೆ ಎಳೆದಿದೆ ಎಂದು ಆರೋಪಿಸಿದರು.

ಸಂಸದ ಬಿ.ವಿ.ನಾಯಕ, ಶಾಸಕ ಬಸನಗೌಡ ದದ್ದಲ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ರಾಮಣ್ಣ ಇರಬಗೇರಾ, ಪಾರಸಮಲ್ ಸುಖಾಣಿ, ರವಿ ಬೋಸರಾಜು, ಕೆ.ಶಾಂತಪ್ಪ, ಅಮರೇಗೌಡ ಹಂಚಿನಾಳ, ನಗರಸಭೆ ಸದಸ್ಯರಾದ ಜಯಣ್ಣ, ಈ.ವಿನಯಕುಮಾರ, ಶ್ರೀನಿವಾಸರೆಡ್ಡಿ, ದರೂರು ಬಸವರಾಜ, ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ ಬೆಣ್ಣೆ, ಜಿ.ಬಸವರಾಜ ರೆಡ್ಡಿ, ಬಸನಗೌಡ ತುರುಕನಡೋಣಿ, ರಾಣಿ ರಿಚರ್ಡ್‌ ಇದ್ದರು. ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಂ.ವಿರೂಪಾಕ್ಷಿ, ಮಕ್ಬೂಲ್, ದಾನಪ್ಪ ಯಾದವ್, ಶಿವಂಶಕರ, ಆಲಂಬಾಬು ಭಾಗವಹಿಸಿದ್ದರು.

ಟಿಯುಸಿಐ

ತೈಲ ಬೆಲೆ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಟ್ರೇಡ್‌ ಯೂನಿಯನ್‌ ಸೆಂಟರ್ ಆಫ್ ಇಂಡಿಯಾ (ಟಿಯುಸಿಐ) ಜಿಲ್ಲಾ ಘಟಕದ ಸದಸ್ಯರು ಪ್ರಧಾನಿ ನರೇಂದ್ರ ಮೋದಿ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿದರು.

‘ಒಳ್ಳೆಯ ದಿನಗಳು ಬರಲಿವೆ ಎಂದು ಭರವಸೆ ನೀಡಿದ್ದ ಕೇಂದ್ರ ಸರ್ಕಾರ ನೋಟು ರದ್ದು ಮತ್ತು ಜಿಎಸ್‌ಟಿ ಜಾರಿಗೊಳಿಸಿ ಜನರನ್ನು ಸಂಕಷ್ಟಕ್ಕೆ ದೂಡಿವೆ. ಕಾರ್ಮಿಕ ಕಾನೂನುಗಳನ್ನು ಬದಲಾಯಿಸುವ ಆತಂಕ ಎದುರಾಗಿದ್ದು, ದೇಶದಲ್ಲಿ ಅಘೋಷಿತ ಪರಿಸ್ಥಿತಿ ಹೇರಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕ ಅಧ್ಯಕ್ಷ ಜಿ.ಅಮರೇಶ, ಚಿನ್ನಪ್ಪ ಕೊಟ್ರಿಕಿ, ಆರ್.ಹುಚ್ಚರೆಡ್ಡಿ, ಮಲ್ಲಪ್ಪ, ಆದಿನಗನೂರು, ರಾಮರೆಡ್ಡಿ, ರವಿ, ಮಹಾಂತೇಶಗೌಡ, ರವಿ ದಾದಸ ಇದ್ದರು.

ಎಡಪಕ್ಷಗಳು

 ಕೇಂದ್ರ ಸರ್ಕಾರದ ಆರ್ಥಿಕ ಕ್ರಮಗಳನ್ನು ವಿರೋಧಿಸಿ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಇಂಡಿಯಾ (ಸಿಪಿಐ) ಹಾಗೂ ಸೋಷಲಿಸ್ಟ್ ಯೂನಿಟಿ ಸೆಂಟರ್‌ ಆಫ್ ಇಂಡಿಯಾ (ಎಸ್‌ಯುಸಿಐ) ಜಿಲ್ಲಾ ಸಮಿತಿ ಸದಸ್ಯರು ಎತ್ತಿನ ಬಂಡಿಯಲ್ಲಿ ದ್ವಿಚಕ್ರ ವಾಹನವನ್ನಿಟ್ಟು ವಿನೂತನ ಪ್ರತಿಭಟನೆ ನಡೆಸಿದರು.

ನಗರದ ಭಗತ್ ಸಿಂಗ್‌ ವೃತ್ತದಿಂದ ವಿವಿಧ ರಸ್ತೆಗಳ ಮೂಲಕ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಹಿಂದೆಂದೂ ಕಾಣದ ರೀತಿಯಲ್ಲಿ ಜನರ ಮೇಲೆ ಆರ್ಥಿಕ ಹೊರೆ ಹೇರಿದೆ. ಈಗಾಗಲೇ ಕೃಷಿ ವಲಯ ಸಂಕಷ್ಟು ಎದುರಿಸುತ್ತಿದ್ದು, ದಿನದಿಂದ ದಿನಕ್ಕೆ ಜನರನ್ನು ಕಷ್ಟಕ್ಕೆ ದೂಡುವ ಮೂಲಕ ಮತ್ತಷ್ಟು ಸಮಸ್ಯೆ ತಂದೊಡ್ಡಲಾಗುತ್ತಿದೆ. ನಿರುದ್ಯೋಗ ಸಮಸ್ಯೆ, ರೂಪಾಯಿ ಮೌಲ್ಯ ಕುಸಿತದಿಂದ ದೇಶ ಆರ್ಥಿಕ ಬಿಕ್ಕಟ್ಟು ಎದುರಿಸುವಂತಾಗಿದೆ ಎಂದು ಆರೋಪಿಸಿದರು.

ರಫೇಲ್ ಯುದ್ಧ ವಿಮಾನ ಖರೀದಿ ಹಗರಣ ತನಿಖೆ ನಡೆಸದಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟನೆಯನ್ನು ಹತ್ತಿಕ್ಕಲು ಜನರ ನಡುವೆ ದ್ವೇಷ, ಕೋಮು ಹಿಂಸಾಚಾರ ಬೆಳೆಸಲಾಗುತ್ತಿದೆ. ಸಾಮಾಜಿಕ ಕಾರ್ಯಕರ್ತರನ್ನು ಬಂಧಿಸಿ ಜನತಂತ್ರ ವಿರೋಧಿ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ದೂರಿದರು.

ಜಿಲ್ಲಾ ಕಾರ್ಯದರ್ಶಿ ಕೆ.ಜಿ.ವೀರೇಶ, ಚಂದ್ರಗಿರೀಶ, ಸುನೀತ್‌ಕುಮಾರ, ಸುಲೋಚನಾ, ಎನ್.ಎಸ್.ವೀರೇಶ, ಬಿ.ಆರ್.ಅಪರ್ಣಾ, ಡಿ.ಎಸ್.ಶರಣಬಸವ, ಕರಿಯಪ್ಪ ಅಚ್ಚೊಳ್ಳಿ, ಸತ್ಯಪ್ಪ, ಜಮುಲಮ್ಮ, ಚನ್ನಬಸವ, ಮಹೇಶ ಇದ್ದರು.

ಕರವೇ

ಇಂಧನ ಬೆಲೆ ಇಳಿಸುವ ಮೂಲಕ ಜನಸಾಮಾನ್ಯರ ಮೇಲಿನ ಹೊರೆ ತಗ್ಗಿಸುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣ ಗೌಡ ಬಣ) ಜಿಲ್ಲಾ ಘಟಕ ಸದಸ್ಯರು ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ಭೂತ ದಹನ ನಡೆಸಿದರು.

ವಿನೋದರೆಡ್ಡಿ, ಎಂ.ಎಸ್.ಮದನ್, ಅಮರಯ್ಯಸ್ವಾಮಿ, ಚಾಂದಪಾಷ, ಕೊಂಡಪ್ಪ, ಜಿಂದಪ್ಪ ಯಾದವ, ನರಸಪ್ಪ ಏಗನೂರು, ಆಂಜನೇಯ, ನರಸಿಂಹಲು, ರಮೇಶ, ಶರಣಪ್ಪ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !