ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲೆಂದರಲ್ಲಿ ಉಗಿಯುವ ಗೀಳು ಸಲ್ಲದು: ಡಾ.ಮೋಹನ್ ಸಲಹೆ

ವಿಶ್ವ ಕ್ಷಯ ರೋಗ ದಿನಾಚರಣೆ
Last Updated 25 ಮಾರ್ಚ್ 2019, 15:08 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ದೇಶದಲ್ಲಿ ಜನರು ಎಲ್ಲೆಂದರಲ್ಲಿ ಉಗಿಯುವ ಗೀಳನ್ನು ಹೋಗಲಾಡಿಸಿದರೆ, ಶೇ 50ರಷ್ಟು ರೋಗಗಳನ್ನು ತಡೆಗಟ್ಟಬಹುದು ಎಂದು ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಮೋಹನ್ ಅಭಿಪ್ರಾಯಪಟ್ಟರು.

ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯ ರೋಗ ನಿಯಂತ್ರಣ ಕೇಂದ್ರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದೊಂದಿಗೆ ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಕ್ಷಯ ರೋಗ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ಆರೋಗ್ಯ ಕಾಪಾಡಿಕೊಳ್ಳುವುದು ಜನರ ಕೈಯಲ್ಲಿಯೇ ಇದೆ. ಅದನ್ನು ಕಂಡುಕೊಳ್ಳುವಲ್ಲಿ ಅವರು ವಿಫಲರಾಗುತ್ತಿದ್ದಾರೆ. ಕ್ಷಯ ರೋಗ ಮಾರಾಣಾಂತಿಕವಾಗಿದೆ. ಸೂಕ್ತ ಚಿಕಿತ್ಸೆಯಿಂದ ಅದನ್ನು ಪೂರ್ಣವಾಗಿ ಗುಣಪಡಿಸಲು ಸಾಧ್ಯವಾಗುತ್ತದೆ. ಈ ರೋಗಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಔಷಧಿ ನೀಡಲಾಗುವುದು. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮವಾದ ವೈದ್ಯರಿದ್ದಾರೆ. ಅವರು ಗುಣಮಟ್ಟದ ಚಿಕಿತ್ಸೆ ನೀಡುತ್ತಾರೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಬಸವರಾಜ್ ಚೇಂಗಟಿ ಮಾತನಾಡಿ, ‘ದೇಶವನ್ನು ಕ್ಷಯರೋಗ ಮುಕ್ತವಾಗಿಸಲು ಎಲ್ಲರೂ ಸಹಕರಿಸಬೇಕು. ನೈರ್ಮಲ್ಯಕ್ಕೆ ಆದ್ಯತೆ ನಿಡಬೇಕು. ಅರಣ್ಯ ಮತ್ತು ನೀರಿನ ಮೂಲಗಳ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಸಲಹೆ ನೀಡಿದರು.

ಕ್ಷಯ ರೋಗಕ್ಕೆ 1882ರಲ್ಲಿಯೇ ಔಷಧಿ ಕಂಡುಹಿಡಿದರೂ ಸಹ, ಜಗತ್ತಿನಲ್ಲಿ ಕ್ಷಯ ಪೂರ್ಣ ನಿರ್ಮೂಲನೆಯಾಗಿಲ್ಲ. 2030ರ ವೇಳೆಗೆ ದೇಶವನ್ನು ಕ್ಷಯ ಮುಕ್ತವಾಗಿಸುವ ಉದ್ದೇಶವನ್ನು ಸರ್ಕಾರ ಹೊಂದಿದೆ. ಅದಕ್ಕೆ ಎಲ್ಲರು ಕೈ ಜೋಡಿಸಬೇಕು ಎಂದರು.

ಜಿಲ್ಲಾ ಕ್ಷಯ ರೋಗ ತಜ್ಞ ಡಾ.ಬಾಲಕೃಷ್ಣ ಮಾತನಾಡಿ, ಕ್ಷಯ ರೋಗದ ಬಗ್ಗೆ ಜನರಿಗೆ ಜಾಗೃತಿ ಅಗತ್ಯವಾಗಿದೆ. ರೋಗದ ಗುಣಲಕ್ಷಣಗಳು ಕಂಡುಬಂದಲ್ಲಿ ನಿರ್ಲಕ್ಷ ವಹಿಸಿಬಾರದು ಎಂದರು.

ಜೆಸಿಐ ಸಂಸ್ಥೆ ವತಿಯಿಂದ ಇಬ್ಬರೂ ಕ್ಷಯ ರೋಗಿಗಳಿಗೆ ನ್ಯೂಟ್ರೀಷನ್ ಔಷಧಿ ವಿತರಿಸಲಾಯಿತು.

ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಪಿ.ರಾಜೇಶ್, ಜೆಸಿಐ ಸಂಸ್ಥೆ ಅಧ್ಯಕ್ಷ ರಘುನಂದನ್, ಸದಸ್ಯರಾದ ಚೈತ್ರಾ, ಶ್ವೇತಾ ಆನಂದ್ ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT