ಕಲಾಪಕ್ಕೆ ಗೈರು: ವಕೀಲರ ಪ್ರತಿಭಟನೆ

7
ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯ

ಕಲಾಪಕ್ಕೆ ಗೈರು: ವಕೀಲರ ಪ್ರತಿಭಟನೆ

Published:
Updated:
Prajavani

ಬೆಂಗಳೂರು: ವಕೀಲರ ರಕ್ಷಣೆ ಕಾಯ್ದೆ ಜಾರಿಗೆ ಒತ್ತಾಯಿಸಿ ಸಾವಿರಾರು ವಕೀಲರು ಮಂಗಳವಾರ ಕಲಾಪದಿಂದ ಹೊರಗುಳಿದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು.

ಬೆಂಗಳೂರು ವಕೀಲರ ಸಂಘದ ಕರೆಗೆ ಒಗೊಟ್ಟ ಎರಡು ಸಾವಿರಕ್ಕೂ ಹೆಚ್ಚು ವಕೀಲರು ಮಧ್ಯಾಹ್ನ 12.30ರ ವೇಳೆಗೆ ನಗರ ಸಿವಿಲ್‌ ನ್ಯಾಯಾಲಯದಿಂದ ಕೆ.ಆರ್.ಸರ್ಕಲ್‌, ಹೈಕೋರ್ಟ್‌ ಮಾರ್ಗವಾಗಿ ರಾಜಭವನದವರೆಗೆ ಶಾಂತಿಯುತ ಪ್ರತಿಭಟನೆ ನಡೆಸಿದರು.

ಮ್ಯಾಜಿಸ್ಟ್ರೇಟ್‌, ಮೆಯೊ ಹಾಲ್‌, ಸಿಟಿ ಸಿವಿಲ್‌ ಕೋರ್ಟ್ ಮತ್ತು ಹೈಕೋರ್ಟ್‌ ವಿಭಾಗಗಳ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ರಾಜಭವನಕ್ಕೆ ತೆರಳುವ ಮುನ್ನ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ನಂತರ ರಾಜಭವನಕ್ಕೆ ತೆರಳಿ ಪ್ರಧಾನಿ ಅವರಿಗೆ ತಮ್ಮ ಅಹವಾಲು ರವಾನಿಸುವಂತೆ ಕೋರಿ ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವವನ್ನು ಅಧ್ಯಕ್ಷರಾದ ಎ.ಪಿ.ರಂಗನಾಥ್‌ ಮತ್ತು ಪ್ರಧಾನ ಕಾರ್ಯದರ್ಶಿ ಎ.ಎನ್‌.ಗಂಗಾಧರಯ್ಯ ಸೇರಿದಂತೆ ನಾಲ್ಕೂ ವಿಭಾಗಗಳ ಪದಾಧಿಕಾರಿಗಳು ವಹಿಸಿದ್ದರು. ಮಹಿಳಾ ವಕೀಲರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.

ಹೈಕೋರ್ಟ್‌ನ ಎಲ್ಲ ನ್ಯಾಯಪೀಠಗಳು ಎಂದಿನಂತೆ ಬೆಳಗ್ಗೆ 10.30ಕ್ಕೆ ಕಲಾಪ ಆರಂಭಿಸಿದವು. ಕೆಲ ನ್ಯಾಯಪೀಠಗಳಲ್ಲಿ ಅರ್ಜಿಗಳ ವಿಚಾರಣೆಗೆ ಕಾಯುತ್ತಿದ್ದ ವಕೀಲರ ಬಳಿಗೆ ತೆರಳಿದ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಗಳು, ಪ್ರತಿಭಟನೆಗೆ ಸಹಕರಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ವಕೀಲರು ಕಲಾಪಗಳಿಂದ ಹೊರಗುಳಿದರು.

ವಕೀಲರ ಮನವಿ ಏನು: ‌

* ಗಂಭೀರ ಕಾಯಿಲೆ ಹಾಗೂ ಅಪಘಾತಗಳಲ್ಲಿ ಅಕಾಲಿಕ ಮರಣಕ್ಕೆ ತುತ್ತಾಗುವ ವಕೀಲರು ಮತ್ತು ಅವರ ಅವಲಂಬಿತ ಕುಟುಂಬಗಳಿಗೆ ಆರ್ಥಿಕ ಸಹಾಯ ಒದಗಿಸಬೇಕು.

* ತೆಲಂಗಾಣ ರಾಜ್ಯದಲ್ಲಿ ವಕೀಲರ ಕಲ್ಯಾಣ ನಿಧಿಗೆ ₹ 100 ಕೋಟಿ ಅನುದಾನ ಒದಗಿಸಿದ್ದು ವಾರ್ಷಿಕ  ₹ 10 ಕೋಟಿ ನೀಡಲಾಗುತ್ತಿದೆ. ಅಲ್ಲಿ ಕೇವಲ 25 ಸಾವಿರ ವಕೀಲರಿದ್ದು ಇಷ್ಟು ದೊಡ್ಡ ಮೊತ್ತದ ಸೌಲಭ್ಯ ನೀಡಲಾಗುತ್ತಿದೆ. ಆದರೆ, ರಾಜ್ಯದಲ್ಲಿ 90 ಸಾವಿರಕ್ಕೂ ಹೆಚ್ಚು ವೃತ್ತಿನಿರತ ವಕೀಲರಿದ್ದು ಸೂಕ್ತ ಅನುದಾನ ಲಭಿಸುತ್ತಿಲ್ಲ.

* ಹರಿಯಾಣ ರಾಜ್ಯ ಸರ್ಕಾರದ ಮಾದರಿಯಲ್ಲಿ ವಕೀಲರಿಗೆ ಕಡಿಮೆ ದರದಲ್ಲಿ ವಸತಿ ಸೌಲಭ್ಯ ಒದಗಿಸಬೇಕು.

* ನ್ಯಾಯಮಂಡಳಿ, ಆಯೋಗಗಳು ಅಥವಾ ಸಕ್ಷಮ ಪ್ರಾಧಿಕಾರಗಳಿಗೆ ಸಮರ್ಥ ಯುವ ವಕೀಲರಿಗೆ ಹೆಚ್ಚಿನ ಅವಕಾಶ ಸಿಗುವಂತಾಗಬೇಕು.

* ದೇಶದಾದ್ಯಂತ ವಕೀಲರ ಸಂಘಗಳಿಗೆ ಯಥೋಚಿತ ಕಟ್ಟಡಗಳು, ಗ್ರಂಥಾಲಯ, ಇ–ಗ್ರಂಥಾಲಯ, ಶೌಚಾಲಯ ವ್ಯವಸ್ಥೆ ಸಿಗುವಂತಾಗಬೇಕು.

* ವಕೀಲರ ಕಲ್ಯಾಣ ನಿಧಿಗೆ ವಾರ್ಷಿಕ ಬಜೆಟ್‌ನಲ್ಲಿ ₹ 5 ಸಾವಿರ ಕೋಟಿ ತೆಗೆದಿರಿಸಬೇಕು.

* ವಕೀಲರು ಮತ್ತು ಅವರ ಕುಟುಂಬದ ಸದಸ್ಯರಿಗೆ ವಿಮಾ ಸೌಲಭ್ಯ ನೀಡಬೇಕು.

* ಹೊಸದಾಗಿ ವೃತ್ತಿ ಆರಂಭಿಸುವ ಅಗತ್ಯವುಳ್ಳ ವಕೀಲರಿಗೆ ಪ್ರತಿ ತಿಂಗಳೂ ₹ 10 ಸಾವಿರ ಮೊತ್ತವನ್ನು ಐದು ವರ್ಷಗಳವರೆಗೆ ಸೈಪೆಂಡ್‌ ರೂಪದಲ್ಲಿ ನೀಡಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !