ನಾಲ್ವರ ಜೀವಕ್ಕೇ ಕುತ್ತು ತಂದ ಮೋಜಿನ ಸುತ್ತಾಟ

ಸೋಮವಾರ, ಮೇ 20, 2019
32 °C

ನಾಲ್ವರ ಜೀವಕ್ಕೇ ಕುತ್ತು ತಂದ ಮೋಜಿನ ಸುತ್ತಾಟ

Published:
Updated:
Prajavani

ಬೆಂಗಳೂರು: ಹೆಸರಘಟ್ಟ ಮುಖ್ಯರಸ್ತೆಯಲ್ಲಿ ಬುಧವಾರ ಸಂಜೆ ಮೋಜಿನ ಸುತ್ತಾಟ ನಡೆಸುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿ ಎಂಜಿನಿಯರಿಂಗ್ ವಿದ್ಯಾರ್ಥಿ ಆಶೀಷ್ ಶರ್ಮಾ (21) ಮೃತಪಟ್ಟು, ಆತನ ಸ್ನೇಹಿತ ಶಕೀಬ್ ಜಾವೇದ್ ಗಾಯಗೊಂಡಿದ್ದಾನೆ.

ಹೆಬ್ಬಾಳದ ಪ್ರೆಸಿಡೆನ್ಸಿ ಕಾಲೇಜಿನ ವಿದ್ಯಾರ್ಥಿಯಾದ ಆಶೀಷ್, ತನ್ನ ಸ್ನೇಹಿತರಾದ ಶಕೀಬ್ ಜಾವೆದ್ (21), ಆತನ ತಮ್ಮ ಅಕೀಬ್ ಜಾವೆದ್ (19) ಹಾಗೂ ವಿನಯ್ ನಾಯಕ್ (21) ಜತೆ ಸಂಜೆ 6 ಗಂಟೆ ಸುಮಾರಿಗೆ ಸುತ್ತಾಟಕ್ಕೆ ತೆರಳಿದ್ದ.

ವೇಗವಾಗಿ ಕಾರು ಚಾಲನೆ ಮಾಡಿದಶಕೀಬ್, ಹೆಸರುಘಟ್ಟದ ಸಿಪಿಡಿಒ ಜಂಕ್ಷನ್‌ನ ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡನು. ಇದರಿಂದ ಅಡ್ಡಾದಿಡ್ಡಿಯಾಗಿ ಸಾಗಿದ ಕಾರು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಯಿತು. ಶಕೀಬ್ ಹಾಗೂ ಆತನ ಪಕ್ಕದ ಸೀಟಿನಲ್ಲಿ ಕುಳಿತಿದ್ದ ವಿನಯ್ ಸೀಟ್ ಬೆಲ್ಟ್ ಧರಿಸಿದ್ದರಿಂದ ಹಾಗೂ ತಕ್ಷಣವೇ ಏರ್‌ಬ್ಯಾಗ್ ತೆರೆದುಕೊಂಡಿದ್ದರಿಂದ ಅವರಿಗೆ ಹೆಚ್ಚಿನ ತೊಂದರೆ ಆಗಲಿಲ್ಲ.

ಆದರೆ, ಹಿಂದಿನ ಸೀಟಿನಲ್ಲಿದ್ದ ಆಶೀಷ್ ಹಾಗೂ ಅಕೀಬ್, ಡಿಕ್ಕಿಯ ರಭಸಕ್ಕೆ ಸೀಟುಗಳ ಮಧ್ಯೆ ಸಿಲುಕಿಕೊಂಡರು. ದೇಹ ಅಪ್ಪಚ್ಚಿಯಾಗಿ ಆಶೀಷ್ ಸ್ಥಳದಲ್ಲೇ ಮೃತಪಟ್ಟರು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಅಕೀಬ್‌ನನ್ನು ಸಂಜೀವಿನಿ ಆಸ್ಪತ್ರೆಗೆ ಕರೆದೊಯ್ದರು. ಆತನ ಸ್ಥಿತಿಯೂ ಗಂಭೀರವಾಗಿದೆ. 

ಅಜಾಗರೂಕ ಚಾಲನೆ ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡು ಶಕೀಬ್‌ನನ್ನು ವಶಕ್ಕೆ ಪಡೆಯಲಾಗಿದೆ. ‘ಎಲ್ಲರೂ ಪೀಣ್ಯದಿಂದ ಸುತ್ತಾಟಕ್ಕೆ ಹೊರಟಿದ್ದೆವು. ಸ್ನೇಹಿತರು ವೇಗವಾಗಿ ಚಾಲನೆ ಮಾಡುವಂತೆ ಹೇಳಿದ್ದರಿಂದ 100 ಕಿ.ಮೀ ವೇಗದಲ್ಲಿ ಚಾಲನೆ ಮಾಡುತ್ತಿದ್ದೆ’ ಎಂದು ಆತ ಹೇಳಿಕೆ ಕೊಟ್ಟಿರುವುದಾಗಿ ಜಾಲಹಳ್ಳಿ ಸಂಚಾರ ಪೊಲೀಸರು ಮಾಹಿತಿ ನೀಡಿದರು.

ವಿನಯ್‌ನ ಹೊಸ ಕಾರು
ವಿನಯ್ ತಂದೆ ಓಂಕಾರ್ ನಾಯಕ್, ಸಣ್ಣ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದಾರೆ. ಇತ್ತೀಚೆಗೆ ಅವರು ಮಗನಿಗಾಗಿ ಹೊಸ ಕಾರನ್ನು ಖರೀದಿಸಿದ್ದರು. ಈಗಷ್ಟೇ ಚಾಲನೆ ಕಲಿಯುತ್ತಿರುವ ಆತ, ಸ್ನೇಹಿತರನ್ನೆಲ್ಲ ಸುತ್ತಾಟಕ್ಕೆ ಕರೆದಿದ್ದ. ಅಲ್ಲದೆ, ಶಕೀಬ್‌ಗೆ ಕಾರು ಚಾಲನೆ ಮಾಡುವಂತೆ ಅವನೇ ಹೇಳಿದ್ದ ಎಂದು ಪೊಲೀಸರು ಹೇಳಿದರು. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 2

  Sad
 • 4

  Frustrated
 • 2

  Angry

Comments:

0 comments

Write the first review for this !