ಅಪಘಾತ; ಯುವಕ ದುರ್ಮರಣ

ಬುಧವಾರ, ಜೂನ್ 19, 2019
23 °C
ಮಗುವನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಅವಘಡ * ಚಾಲಕ ವಶಕ್ಕೆ

ಅಪಘಾತ; ಯುವಕ ದುರ್ಮರಣ

Published:
Updated:
Prajavani

ಬೆಂಗಳೂರು: ರಾಜಾಜಿನಗರದ ನವರಂಗ್ ವೃತ್ತದಲ್ಲಿ ಕಾರೊಂದಕ್ಕೆ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದ್ದರಿಂದ ರವಿಕಿರಣ್‌ (19) ಎಂಬುವರು ದುರ್ಮರಣಕ್ಕೀಡಾಗಿದ್ದು, ಮೂರು ವರ್ಷದ ಮಗು ಸೇರಿ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ.

ಮೃತ ರವಿಕಿರಣ್, ಲಗ್ಗೆರೆ ನಿವಾಸಿ. ಸ್ಥಳೀಯ ಫ್ಯಾಬ್ರಿಕೇಷನ್ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರ ಜೊತೆ ಕಾರಿನಲ್ಲಿದ್ದ ನೆರಮನೆಯ ನಿವಾಸಿ ಗಂಗಾಧರ್, ಅವರ ಪತ್ನಿ ವರಲಕ್ಷ್ಮಿ, ಮಗು ಸುಮಂತ್ (3) ಹಾಗೂ ಚಾಲಕ ಪುನೀತ್‌ ಎಂಬುವರು ಗಾಯಗೊಂಡಿದ್ದಾರೆ. ಅವರನ್ನು ಫೋರ್ಟಿಸ್ ಹಾಗೂ ಕೆ.ಸಿ.ಜನರಲ್ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

‘ಶನಿವಾರ ನಸುಕಿನ 3 ಗಂಟೆಯ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕೆಎಸ್‌ಆರ್‌ಟಿಸಿ ಚಾಲಕ, ನವರಂಗ್ ವೃತ್ತದಲ್ಲಿರುವ ಸಿಗ್ನಲ್‌ ಜಂಪ್ ಮಾಡಿ ಮುಂದೆ ಬಂದಿದ್ದೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಗೊತ್ತಾಗಿದೆ. ಚಾಲಕ ಪ್ರಕಾಶ್ ನಾಯಕ್‌ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮಲ್ಲೇಶ್ವರ ಸಂಚಾರ ಪೊಲೀಸರು ಹೇಳಿದರು.

ಜ್ವರದಿಂದ ಬಳಲುತ್ತಿದ್ದ ಮಗು; ‘ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಗಂಗಾಧರ್, ಪತ್ನಿ ವರಲಕ್ಷ್ಮಿ ಹಾಗೂ ಮಗು ಸುಮಂತ್ ಜೊತೆ ಲಗ್ಗೆರೆಯಲ್ಲಿ ವಾಸವಿದ್ದಾರೆ. ಶುಕ್ರವಾರ ರಾತ್ರಿಯಿಂದ ಸುಮಂತ್, ಜ್ವರದಿಂದ ಬಳಲುತ್ತಿದ್ದ. ಶನಿವಾರ ನಸುಕಿನಲ್ಲಿ ಜ್ವರ ಹೆಚ್ಚಾಗಿ ಅಳಲಾರಂಭಿಸಿದ್ದ. ಸ್ಥಳೀಯವಾಗಿ ಯಾವುದೇ ವೈದ್ಯರೂ ಲಭ್ಯರಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ವಾಹನ ಇಲ್ಲದಿದ್ದರಿಂದ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಲು ಆಗಿರಲಿಲ್ಲ. ಆಗ ಗಂಗಾಧರ್, ಪಕ್ಕದ ಮನೆಯ ರವಿಕಿರಣ್‌ ಅವರ ಸಹಾಯ ಕೋರಿದ್ದರು. ಅದಕ್ಕೆ ಸ್ಪಂದಿಸಿದ್ದ ರವಿಕಿರಣ್, ಸ್ನೇಹಿತ ಪುನೀತ್‌ ಅವರಿಗೆ ಕರೆ ಮಾಡಿ ಕಾರು ತರಿಸಿದ್ದರು. ನಾಲ್ವರು ಸೇರಿಯೇ ಮಗುವನ್ನು ಕರೆದುಕೊಂಡು ಕಾರಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆಯತ್ತ ತೆರಳುತ್ತಿದ್ದರು.’

‘ಪಶ್ಚಿಮ ಕಾರ್ಡ್‌ ರಸ್ತೆಯಿಂದ ಕೆ.ಸಿ.ಜನರಲ್ ಆಸ್ಪತ್ರೆಯತ್ತ ಕಾರು ಹೊರಟಿತ್ತು. ನವರಂಗ್ ವೃತ್ತದ ಸಿಗ್ನಲ್‌ನಲ್ಲಿ ಹಸಿರು ಬಣ್ಣದ ದೀಪ ಹೊತ್ತಿದ್ದರಿಂದ ಪುನೀತ್ ಕಾರು ಚಲಾಯಿಸಿಕೊಂಡು ಮುಂದಕ್ಕೆ ತೆರಳುತ್ತಿದ್ದರು. ಅದೇ ಸಂದರ್ಭದಲ್ಲೇ ಬ್ಯಾಡಗಿಯಿಂದ ಬಂದು ಯಶವಂತಪುರ ಮಾರ್ಗವಾಗಿ ಮೆಜೆಸ್ಟಿಕ್‌ನತ್ತ ಹೊರಟಿದ್ದ ಕೆಎಸ್‌ಆರ್‌ಟಿಸಿ ಬಸ್‌, ಸಿಗ್ನಲ್ ಜಂಪ್ ಮಾಡಿ ವೇಗವಾಗಿ ಬಂದು ಕಾರಿಗೆ ಡಿಕ್ಕಿ ಹೊಡೆದಿತ್ತು’ ಎಂದು ಪೊಲೀಸರು ಹೇಳಿದರು. 

‘ಅಪಘಾತದಿಂದ ಕಾರು ಜಖಂಗೊಂಡು, ಒಳಗಿದ್ದವರೆಲ್ಲ ನರಳಾಡುತ್ತಿದ್ದರು. ಸ್ಥಳೀಯರೇ ಐವರನ್ನು ಹೊರಗೆ ತೆಗೆದು ಆಸ್ಪತ್ರೆಗೆ ಕಳುಹಿಸಿಕೊಟ್ಟರು. ಚಿಕಿತ್ಸೆಗೆ ಸ್ಪಂದಿಸದೇ ರವಿಕಿರಣ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಉಳಿದವ
ರು ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಹೇಳಿಕೆ ಆಧರಿಸಿ ಕೆಎಸ್‌ಆರ್‌ಟಿಸಿ ಚಾಲ
ಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !