ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೆಟ್‌ ಫೆಸ್ಟ್‌’ಗೆ ವೇದಿಕೆ ಸಜ್ಜು

Last Updated 29 ನವೆಂಬರ್ 2018, 19:47 IST
ಅಕ್ಷರ ಗಾತ್ರ

ಸಾಕುಪ್ರಾಣಿ ಪ್ರಿಯರು ತಮ್ಮ ನೆಚ್ಚಿನ ಪ್ರಾಣಿಗಳೊಂದಿಗೆ ವಾರಾಂತ್ಯ ಕಳೆಯಲು ‘ಪೆಟ್‌ಫೆಡ್‌’ ಸಂಸ್ಥೆ ಡಿಸೆಂಬರ್‌ 1 ಮತ್ತು 2ರಂದು ಉದ್ಯಾನನಗರಿಯಲ್ಲಿ ವೇದಿಕೆ ಸಜ್ಜುಗೊಳಿಸಿದೆ. ಇದಕ್ಕಾಗಿ ಅದು ಎರಡು ದಿನ ಮಾನ್ಯತಾ ಟೆಕ್‌ ಪಾರ್ಕ್‌ ಬಳಿಯ ಮಾನ್ಫೊ ಗ್ರೌಂಡ್ಸ್‌ನಲ್ಲಿ ‘ಪೆಟ್‌ ಫೆಸ್ಟಿವಲ್‌’ (ಸಾಕು ಪ್ರಾಣಿಗಳ ಉತ್ಸವ) ಹಮ್ಮಿಕೊಂಡಿದೆ.

ಇಲ್ಲಿನ ಮೂರು ಎಕರೆ ಪ್ರದೇಶದಲ್ಲಿ ನಡೆಯುವ ಈ ಉತ್ಸವ ಹಲವಾರು ಚಟುವಟಿಕೆಗಳಿಂದ ಕೂಡಿರುತ್ತದೆ. ‘ಸೆಕ್ಯುರಿಟಿ ಡಾಗ್‌ಶೋ’, ‘ಡಿಸ್ಕವರ್‌ ಡಾಗ್ಸ್‌ ಝೋನ್‌’, ಫ್ಯಾಷನ್‌ ಶೋ’, ‘ಕ್ಯಾಟ್‌ಝೋನ್‌’, ‘ಡಾಗ್‌ ಎಜಿಲಿಟಿ’, ‘ಫ್ಲೆ ಏರಿಯಾ’, ‘ಟೆಂಪ್ಟೇಷನ್‌ ಅಲೈ’, ‘ಅಡಾಪ್ಷನ್‌ ಕ್ಯಾಂಪ್‌’ಗಳು ಉತ್ಸವದ ಪ್ರಮುಖ ಆಕರ್ಷಣೆಗಳು.

ಡಿಸ್ಕವರ್‌ ಡಾಗ್ಸ್‌: ಈ ಕಾರ್ಯಕ್ರಮದಲ್ಲಿ ವಿವಿಧ ತಳಿಯ 50ಕ್ಕೂ ಹೆಚ್ಚಿನ ನಾಯಿಗಳು ಪಾಲ್ಗೊಳ್ಳುತ್ತವೆ. ಇದರಲ್ಲಿ ದೇಸಿ ನಾಯಿಗಳೂ ಇರುತ್ತವೆ. ವಿಭಿನ್ನ ನಾಯಿ ಬ್ರೀಡ್‌ಗಳು ಮತ್ತು ಅವುಗಳ ಅಗತ್ಯಗಳ ಬಗ್ಗೆ ಇಲ್ಲಿ ಮಾಹಿತಿ ಹಂಚಿಕೊಳ್ಳಲಾಗುತ್ತದೆ. ಮುದ್ದು ಪ್ರಾಣಿಗಳಿಗೆ ಅಗತ್ಯವಿರುವ ವಾತಾವರಣ, ಆಹಾರ, ಅವುಗಳಿಗೆ ಆಟವಾಡಲು ಸೂಚಿತ ಪ್ರದೇಶಗಳ ಕುರಿತು ಪ್ರಾಣಿ ಪ್ರಿಯರಿಗೆ ಈ ಕಾರ್ಯಕ್ರಮದಲ್ಲಿ ಮನದಟ್ಟು ಮಾಡಿಕೊಡಲಾಗುತ್ತದೆ.

ಕ್ಯಾಟ್‌ ಝೋನ್‌: ಮುದ್ದು ಪ್ರಾಣಿಗಳಲ್ಲಿ ಬೆಕ್ಕಿಗೂ ಪ್ರಮುಖ ಸ್ಥಾನವಿದೆ. ಇದು ಚುರುಕಿನ ಪ್ರಾಣಿ ಕೂಡ. ಸಾಕು ಬೆಕ್ಕುಗಳು ಮನೆಯಲ್ಲಿ ಬೇಕಾದ ಕಡೆ ಹತ್ತಿ, ಇಳಿದು ಮೋಜು ಮಾಡುವುದಕ್ಕೆ ಹಲವು ನಿರ್ಬಂಧಗಳನ್ನು ವಿಧಿಸಲಾಗಿರುತ್ತದೆ. ಹಾಗಾಗಿಯೇ ಈ ಉತ್ಸವದಲ್ಲಿ ಪ್ರತ್ಯೇಕ ‘ಕ್ಯಾಟ್‌ ಝೋನ್‌’ ರೂಪಿಸಲಾಗಿದೆ. ಈ ವಲಯದಲ್ಲಿ ಕ್ಯಾಟ್‌ ಟ್ರೀಗಳು ಮತ್ತು ಆಟಿಕೆಗಳನ್ನು ಇಟ್ಟು ಬೆಕ್ಕುಗಳು ಮೋಜು, ಮಸ್ತಿ ಮಾಡಲು ಅಗತ್ಯ ಏರ್ಪಾಡು ಮಾಡಲಾಗಿದೆ ಎನ್ನುತ್ತಾರೆ ಆಯೋಜಕರು.

ಸೆಕ್ಯೂರಿಟಿ ಡಾಗ್‌ ಶೋ: ಭದ್ರತಾ ನಾಯಿಗಳಿಂದ ಈ ಪ್ರದರ್ಶನ ನಡೆಯಲಿದೆ. ತೊಂದರೆಯಿದ್ದಾಗ ಎಚ್ಚರಿಕೆ ನೀಡಲು ಮತ್ತು ಅನುಮಾನಾಸ್ಪದ ಚಟುವಟಿಕೆ ತಡೆಯುವುದನ್ನು ಈ ಪ್ರದರ್ಶನದಲ್ಲಿ ನಾಯಿಗಳು ಮಾಡಲಿವೆ. ಅಪರಾಧಿ ಚಟುವಟಿಕೆಯನ್ನು ತಡೆಯಲು ಏರಿದ ಧ್ವನಿಯಲ್ಲಿ ಬೊಗಳುವಂತೆ ವಿಶೇಷವಾಗಿ ಭದ್ರತಾ ನಾಯಿಗಳಿಗೆ ತರಬೇತಿ ನೀಡಲಾಗಿರುತ್ತದೆ. ಅತಿಕ್ರಮ ಪ್ರವೇಶಿಸುವವರು, ಅಪರಿಚಿತರು ಮನೆ ಅಥವಾ ಆಸ್ತಿಯನ್ನು ಪ್ರವೇಶಿಸುವವರನ್ನು ಈ ನಾಯಿಗಳು ತಡೆಯುವ ಸಾಮರ್ಥ್ಯ ಹೊಂದಿವೆ. ಭದ್ರತಾ ನಾಯಿಗಳು ತಮ್ಮ ಈ ಚಾಕಚಕ್ಯತೆಯನ್ನು ಇಲ್ಲಿ ಪ್ರದರ್ಶಿಸಲಿವೆ.

ಫ್ಯಾಷನ್‌ ಶೋ: ಸಾಕು ಪ್ರಾಣಿಗಳ ಮಾಲೀಕರು ತಮ್ಮ ಮುದ್ದಿನ ಪ್ರಾಣಿಗಳೊಂದಿಗೆ ರ‍್ಯಾಂಪ್‌ ಮೇಲೆ ವಾಕಿಂಗ್‌ ಮಾಡಲು ಈ ಉತ್ಸವದಲ್ಲಿ ಅವಕಾಶ ಕಲ್ಪಿಸಲಾಗಿದೆ. ನಟ ಡೀನು ಮೋರಿಯಾ ಕೂಡ ಇದರಲ್ಲಿ ಭಾಗವಹಿಸುತ್ತಿರುವುದು ವಿಶೇಷ.

ಅಡಾಪ್ಷನ್‌ ಕ್ಯಾಂಪ್‌: ಮುದ್ದಿನ ಪ್ರಾಣಿಗಳನ್ನು ಖರೀದಿಸುವ ಬದಲಿಗೆ ದತ್ತು ಪಡೆಯುವುದನ್ನು ಪ್ರೋತ್ಸಾಹಿಸಲು ಈ ಉತ್ಸವದಲ್ಲಿ ದತ್ತು ಪಡೆಯುವ ಶಿಬಿರವನ್ನೂ ಆಯೋಜಿಸಲಾಗಿದೆ. ಕ್ಯೂಪ, ಕೇರ್‌ ಮತ್ತು ಇತರೆ ಸರ್ಕಾರೇತರ ಸಂಸ್ಥೆಗಳೊಂದಿಗೆ ‘ಪೆಡ್‌ಫೆಡ್‌’ ಒಪ್ಪಂದ ಮಾಡಿಕೊಂಡಿದ್ದು, ಈ ಉತ್ಸವದಲ್ಲಿ ಆ ಸಂಸ್ಥೆಗಳು ಪಾಲ್ಗೊಳ್ಳಲಿವೆ. ಅಲ್ಲದೆ ಅವುಗಳು ಮುದ್ದಿನ ಪ್ರಾಣಿಗಳನ್ನು ದತ್ತು ನೀಡಲಿವೆ.

ಇವುಗಳ ಜತೆಗೆ ದೇಶ, ವಿದೇಶಗಳ 120ಕ್ಕೂ ಹೆಚ್ಚಿನ ಬ್ರ್ಯಾಂಡ್‌ಗಳ ಉತ್ಪನ್ನಗಳು ಮತ್ತು ಸೇವೆಗಳು ಈ ಉತ್ಸವದಲ್ಲಿ ದೊರೆಯಲಿವೆ.

‘ಸಾಕು ಪ್ರಾಣಿಗಳು ತಮ್ಮ ಜೀವನವೆಲ್ಲವನ್ನೂ ನಮಗೆ ನೀಡುತ್ತವೆ. ನಾವು ಅವುಗಳಿಗಾಗಿ ಎರಡು ದಿನ ಮೀಸಲಿಡುವ ಸಮಯ ಇದು. ಆ ಪ್ರಾಣಿಗಳು ಹೆಚ್ಚಾಗಿ ಆನಂದಿಸಬೇಕು ಎಂಬ ಉದ್ದೇಶದಿಂದಲೇ ಈ ಉತ್ಸವ ಆಯೋಜಿಸಿದ್ದೇವೆ. ಇಲ್ಲಿ ಭಾರತೀಯ ಸಾಕು ಪ್ರಾಣಿಗಳ (ಇಂಡೀ ಪೆಟ್ಸ್‌) ದತ್ತು ತೆಗೆದುಕೊಳ್ಳುವುದನ್ನು ಪ್ರೋತ್ಸಾಹಿಸಲಿದ್ದೇವೆ. ಅದಕ್ಕಾಗಿ ಸ್ವದೇಶಿ ಪೆಟ್‌ಗಳನ್ನು ಹೊಂದಿರುವವರಿಗೆ ಪ್ರವೇಶ ಸಂಪೂರ್ಣ ಉಚಿತ’ ಎನ್ನುತ್ತಾರೆ ‘ಪೆಟ್‌ಫೆಡ್‌’ನ ಸ್ಥಾಪಕ ಅಕ್ಷಯ್‌ ಗುಪ್ತಾ.

ಮಾಹಿತಿಗೆ www.petfed.org

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT