ಮಂಗಳವಾರ, ನವೆಂಬರ್ 19, 2019
29 °C

ಪೊಲೀಸ್‌ ಕಸ್ಟಡಿಯಲ್ಲಿ ಕುಲಪತಿ ವಿ.ವಿ ವಿದ್ಯಾರ್ಥಿಗಳಲ್ಲಿ ಆತಂಕ

Published:
Updated:

ಬೆಂಗಳೂರು: ಅಲಯನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಸಹ ಕುಲಪತಿ ಅಯ್ಯಪ್ಪ ದೊರೆ ಕೊಲೆ ಪ್ರಕರಣದಡಿ ಕುಲಪತಿ ಸುಧೀರ್ ಅಂಗೂರ್‌ ಪೊಲೀಸ್‌ ಕಸ್ಟಡಿಯಲ್ಲಿರುವ ಕಾರಣ ವಿದ್ಯಾರ್ಥಿಗಳು ಆತಂಕಗೊಂಡಿದ್ದು, ನವೆಂಬರ್‌ 3ರ ಘಟಿಕೋತ್ಸವ ನಡೆಯಲಿದೆಯೇ, ಇಲ್ಲವೇ ಎಂಬ ಮಾಹಿತಿಗಾಗಿ ತಡಕಾಡುತ್ತಿದ್ದಾರೆ.

‘ಕುಲಸಚಿವ ಮಧುಸೂದನ್‌ ಮಿಶ್ರಾ ಅವರು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ. ಘಟಿಕೋತ್ಸವದ ಬಗ್ಗೆ ಶೀಘ್ರ ಮಾಹಿತಿ ನೀಡಲಾಗುವುದು’ ಎಂದು ವಿಶ್ವವಿದ್ಯಾಲಯದ ಮೂಲಗಳು ತಿಳಿಸಿವೆ. ಸದ್ಯ ಡಾ. ಅನುಭಾ ಸಿಂಗ್ ಅವರು ಪ್ರಭಾರ ಕುಲಪತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

‘ಕುಲಪತಿ ಈಗ ಕಸ್ಟಡಿಯಲ್ಲಿದ್ದಾರೆ. ನಮಗೆ ನೀಡುವ ಪದವಿ ಪ್ರಮಾಣಪತ್ರಕ್ಕೆ ಯಾರು ಸಹಿ ಹಾಕುತ್ತಾರೆ? ಒಂದು ವೇಳೆ ಈಗಾಗಲೇ ಅವರು ಸಹಿ ಹಾಕಿದ್ದರೆ, ಕೊಲೆ ಆರೋಪಿ ನೀಡಿದ ಪ್ರಮಾಣಪತ್ರ ಎಂಬ ಕಾರಣಕ್ಕೆ ಉದ್ಯೋಗ ನೀಡಲು ಹಿಂದೇಟು ಹಾಕುವ ಅಪಾಯ ಇದೆ’ ಎಂದು ಕೆಲವು ವಿದ್ಯಾರ್ಥಿಗಳು ಹೇಳಿಕೊಂಡಿದ್ದಾರೆ.

ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಕುಲಸಚಿವ ಮಧುಸೂದನ್‌ ಮಿಶ್ರಾ ಅವರ ಹೇಳಿಕೆಯೊಂದನ್ನು ಪ್ರಕಟಿಸಿದ್ದು, ಸದ್ಯದ ಸನ್ನಿವೇಶದಲ್ಲಿ ಯಾರೂ ತಮ್ಮ ಹಿತಾಸಕ್ತಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನೀಡುವ ಹೇಳಿಕೆಗಳನ್ನು ಪ್ರಕಟಿಸಬಾರದು ಎಂದು ವಿನಂತಿಸಿದೆ.

ವಿಶ್ವವಿದ್ಯಾಲಯದ ಮಾಜಿ ಕುಲಪತಿ ಮಧುಕರ್‌ ಅಂಗೂರ್‌ ಅವರ ಹೇಳಿಕೆಗಳಿಗೆ ಮಾಧ್ಯಮಗಳು ಮಹತ್ವ ನೀಡಬಾರದು. ಪ್ರಕರಣದಲ್ಲಿ ಸುಧೀರ್‌ ಅಂಗೂರ್ ಅವರ ಪಾತ್ರದ ಬಗೆಗೆ ಯಾವುದೇ ಹೇಳಿಕೆ ನೀಡುವುದು ಸರಿಯಾಗುವುದಿಲ್ಲ. ಮಧುಕರ್‌, ಬಿ. ಎಸ್‌. ಪ್ರಿಯಾಂಕಾ ಮತ್ತು ಇತರರು ವಿಶ್ವವಿದ್ಯಾಲಯ ಕ್ಯಾಂಪಸ್‌ ಪ್ರವೇಶಿಸುವುದಕ್ಕೆ ಮತ್ತು ವಿಶ್ವವಿದ್ಯಾಲಯದ ಆಡಳಿತ ನಿರ್ವಹಣೆಯಲ್ಲಿ ಮಧ್ಯಪ್ರವೇಶ ಮಾಡುವುದರ ವಿರುದ್ಧ ಸಿಟಿ ಸಿವಿಲ್‌ ನ್ಯಾಯಾಲಯದಿಂದ ತಡೆಯಾಜ್ಞೆ ಇದೆ. ಹೈಕೋರ್ಟ್‌ ಸಹ ಈ ತಡೆಯಾಜ್ಞೆಯನ್ನು ಎತ್ತಿ ಹಿಡಿದಿದೆ ಎಂದು ತಿಳಿಸಲಾಗಿದೆ.

ಪ್ರತಿಕ್ರಿಯಿಸಿ (+)