ಅಂಬೇಡ್ಕರ್ ಕಥೆಗೆ ಪುರಾಣ ರೂಪ!

ಸೋಮವಾರ, ಮೇ 27, 2019
24 °C
ಬಾಬಾ ಸಾಹೇಬರ ಬದುಕನ್ನು ಜನಸಾಮಾನ್ಯರಿಗೆ ಮುಟ್ಟಿಸುವ ಪ್ರಯತ್ನ

ಅಂಬೇಡ್ಕರ್ ಕಥೆಗೆ ಪುರಾಣ ರೂಪ!

Published:
Updated:
Prajavani

ಬಾಗಲಕೋಟೆ: ಬಾಬಾ ಸಾಹೇಬ ಅಂಬೇಡ್ಕರ್ ಅವರ ಜನನ, ಬಾಲ್ಯ, ಹೋರಾಟದ ಬದುಕನ್ನು ಪುರಾಣ ರೂಪದಲ್ಲಿ ಜನ ಸಾಮಾನ್ಯರಿಗೆ ತಲುಪಿಸುವ ವಿಶಿಷ್ಟ ಪ್ರಯತ್ನ ಹುನಗುಂದ ತಾಲ್ಲೂಕಿನ ಗೊರಜನಾಳದಲ್ಲಿ ಮಾರ್ಚ್ 25ರಿಂದ ಏಪ್ರಿಲ್ 6ರವರೆಗೆ ನಡೆಯಿತು.

ಗ್ರಾಮದ ಮಾರುತೇಶ್ವರ ಹಾಗೂ ವೆಂಕಟೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ ಆಯೋಜಿಸಿದ್ದ ಪುರಾಣ ಪ್ರವಚನಕ್ಕೆ ಇದೇ ಮೊದಲ ಬಾರಿಗೆ ಅಂಬೇಡ್ಕರ್ ಬದುಕನ್ನು ಆರಿಸಿಕೊಳ್ಳಲಾಗಿತ್ತು. ಗುಳೇದಗುಡ್ಡ ತಾಲ್ಲೂಕಿನ ಇಂಜನವಾರಿಯ ಒಪ್ಪತ್ತೇಶ್ವರ ಸ್ವಾಮೀಜಿ ಬಾಬಾಸಾಹೇಬರ ಕಥನವನ್ನು ಪುರಾಣ ರೂಪದಲ್ಲಿ ಕೇಳುಗರಿಗೆ ಉಣಬಡಿಸಿದರು. ಪ್ರತಿ ದಿನ ರಾತ್ರಿ 8ರಿಂದ 9ರವರೆಗೆ ಮಾರುತೇಶ್ವರ ದೇವಸ್ಥಾನದ ಆವರಣದಲ್ಲಿ ಕಾರ್ಯಕ್ರಮ ನಡೆಯಿತು. 

‘ಕಳೆದ 11 ವರ್ಷಗಳಿಂದ ಜಾತ್ರೆ ಅಂಗವಾಗಿ ಬೇರೆ ಬೇರೆ ಸಿದ್ಧಿಪುರುಷರು, ಧಾರ್ಮಿಕ ನಾಯಕರು, ದಾರ್ಶನಿಕರ ಪುರಾಣ ಆಯೋಜಿಸುತ್ತಿದ್ದೇವೆ. ಈ ಬಾರಿ ಗ್ರಾಮದ ಹಿರಿಯರೆಲ್ಲ ಸೇರಿ ಅಂಬೇಡ್ಕರ್‌ ಬದುಕನ್ನೇ ಪುರಾಣದ ವಿಷಯವಾಗಿಸಲು ತೀರ್ಮಾನಿಸಿದ್ದರು’ ಎಂದು ವಕೀಲ ರಮೇಶ ಬದನೂರ ಹೇಳುತ್ತಾರೆ.

ಇದು ಭೀಮ ಪುರಾಣ: ‘ಗದುಗಿನ ತೋಂಟದಾರ್ಯ ಮಠದ ಹಿಂದಿನ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಅವರ ಒತ್ತಾಸೆಯಿಂದ ಅಲ್ಲಿನ ಬೆಟಗೇರಿಯ ನಿವಾಸಿ ರಾಮಣ್ಣ ಬ್ಯಾಟಿ 35 ಸಂಧಿಗಳನ್ನು (ಅಧ್ಯಾಯ) ಒಳಗೊಂಡ ‘ಭೀಮ ಪುರಾಣ’ ಬರೆದಿದ್ದಾರೆ. ಹರಿಶ್ಚಂದ್ರ ಕಾವ್ಯ, ಬಸವ ಪುರಾಣದ ರೀತಿಯೇ ಅಂಬೇಡ್ಕರ್ ಜೀವನ ಚರಿತ್ರೆಯನ್ನು ರಾಮಣ್ಣ ಪುರಾಣ ರೂಪಕ್ಕೆ ಒಗ್ಗಿಸಿದ್ದಾರೆ. ಅದನ್ನು ಪುಸ್ತಕ ರೂಪದಲ್ಲಿ ಮುದ್ರಿಸಲಾಗಿದೆ. ಇದು ಗದ್ಯ ಹಾಗೂ ಪದ್ಯ ಎರಡೂ ಶೈಲಿಯನ್ನು ಒಳಗೊಂಡಿದೆ. ಈ ಹಿಂದೆ ಪುಸ್ತಕ ಬಿಡುಗಡೆ ವೇಳೆ ತೋಂಟದಾರ್ಯ ಮಠದಲ್ಲಿಯೇ ಪ್ರಾಯೋಗಿಕವಾಗಿ ಪುರಾಣ ಹೇಳಲಾಗಿತ್ತು. ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾರ್ಯಕ್ರಮ ನಡೆಸಿಕೊಟ್ಟಿದ್ದೇನೆ’ ಎಂದು ಒಪ್ಪತ್ತೇಶ್ವರ ಸ್ವಾಮೀಜಿ ಹೇಳುತ್ತಾರೆ.

‘ನಮ್ಮ ಮುಂದಿನ ಪೀಳಿಗೆಯನ್ನು ಪ್ರೀತಿ, ತಾಳ್ಮೆಯಿಂದ ಸಾಮರಸ್ಯದ ನೆಲೆಯಲ್ಲಿ ಕಟ್ಟಬೇಕಿದೆ. ಹಾಗಾಗಿ ಅಂಬೇಡ್ಕರ್ ಬದುಕು ನಮ್ಮೂರಿನ ಮಕ್ಕಳಿಗೂ ಏಕೆ ಸ್ಫೂರ್ತಿಯಾಗಬಾರದು’ ಎಂದು ಒಪ್ಪತ್ತೇಶ್ವರ ಶ್ರೀಗಳು
ಪ್ರಶ್ನಿಸುತ್ತಾರೆ.

‘ಪುರಾಣ ಬರೆದ ರಾಮಣ್ಣ, ನೇಕಾರ ಸಮುದಾಯದವರು. ಹುಟ್ಟು ಕುರುಡರು. ಅವರು ಹೇಳಿದಂತೆ ಬೇರೆಯವರು ಬರೆದಿದ್ದಾರೆ’
ಎಂದರು.

ಅತಿಮಾನವರಂತೆ ಚಿತ್ರಿಸಿಲ್ಲ...

‘ಪುರಾಣದ ಕಥನದಲ್ಲಿ ಅಂಬೇಡ್ಕರ್ ಅವರನ್ನು ಎಲ್ಲಿಯೂ ದೈವಿ ಶಕ್ತಿ ಸ್ವರೂಪರಂತೆ, ಸಿದ್ಧಿಪುರುಷರಂತೆ ಚಿತ್ರಿಸಿಲ್ಲ. ಅವರನ್ನು ದೇವರಾಗಿಸುವ ಪ್ರಯತ್ನವೂ ಇದಲ್ಲ. ಸಾಮಾನ್ಯ ಮನುಷ್ಯ ಅಸಾಮಾನ್ಯನಾಗಿ ಬೆಳೆದು ಸಮಾನತೆಯ ದೀವಿಗೆಯನ್ನು ಬೆಳಗಿದ ಬಗೆಯನ್ನು ಹೇಳಲಾಗಿದೆ.

ಸಹಜವಾಗಿಯೇ ಜನರಿಗೆ ಅರ್ಥವಾಗುವ ಭಾಷೆಯಲ್ಲಿಯೇ ಅಂಬೇಡ್ಕರ್‌ ಅವರ ಹೋರಾಟದ ಬದುಕು, ಸಂವಿಧಾನ ಬರೆಯಲು ಪ್ರೇರಣೆಯಾದ ಸಂಗತಿ ಪುರಾಣದಲ್ಲಿ ಕಟ್ಟಿಕೊಡಲಾಗಿದೆ. ಗೊರಜನಾಳ ಜಾತ್ರೆಯಲ್ಲಿ 11 ದಿನ ಪ್ರವಚನ ಇದ್ದ ಕಾರಣ 35 ಸಂಧಿಗಳನ್ನು ಅಷ್ಟು ದಿನಗಳಿಗೆ ಅನುಕೂಲವಾಗುವಂತೆ ಒಗ್ಗಿಸಿಕೊಂಡಿದ್ದೆ’ ಎಂದು ಒಪ್ಪತ್ತೇಶ್ವರ ಶ್ರೀಗಳು ತಿಳಿಸಿದರು.

***

ಜಾತ್ರೆಯಲ್ಲಿ ಪ್ರತಿ ವರ್ಷ ಒಬ್ಬೊಬ್ಬ ಮಹನೀಯರ ಪುರಾಣ ಆಯೋಜಿಸುತ್ತೇವೆ. ಈ ಹಿಂದೆ ಹೇಮರಡ್ಡಿ ಮಲ್ಲಮ್ಮ, ಸಿದ್ಧಾರೂಢರು, ಹಾನಗಲ್ ಕುಮಾರಸ್ವಾಮಿಗಳ ಪುರಾಣ ನಡೆದಿದೆ. ಈ ಬಾರಿ ಅಂಬೇಡ್ಕರ್ ಪುರಾಣ ನಡೆದಿದೆ.

-ರಮೇಶ ಬದನೂರ, ವಕೀಲ, ಗೊರಜನಹಾಳ

ಬರಹ ಇಷ್ಟವಾಯಿತೆ?

 • 7

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !