ಒತ್ತುವರಿ ತೆರವಿಗೆ ಲೋಕಾಯುಕ್ತರ ಆದೇಶ

ಮಂಗಳವಾರ, ಏಪ್ರಿಲ್ 23, 2019
31 °C
ಹೊರಮಾವು– ಅಗರ, ಮಲ್ಲಸಂದ್ರ ಗುಡ್ಡೇಕೆರೆ ಅತಿಕ್ರಮಣ ಪ್ರಕರಣ

ಒತ್ತುವರಿ ತೆರವಿಗೆ ಲೋಕಾಯುಕ್ತರ ಆದೇಶ

Published:
Updated:

ಬೆಂಗಳೂರು: ಇಲ್ಲಿನ ಹೊರಮಾವು– ಅಗರ ಕೆರೆ ಹಾಗೂ ಯಶವಂತಪುರ ಹೋಬಳಿ ಮಲ್ಲಸಂದ್ರ ಗುಡ್ಡೇಕೆರೆ ಒತ್ತುವರಿ ಆಗಿದ್ದು, ಅದರ ತೆರವಿಗೆ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥಶೆಟ್ಟಿ ಸಂಬಂಧಪಟ್ಟ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಹಾಗೂ ನಮ್ಮ ಬೆಂಗಳೂರು ‍ಪ್ರತಿಷ್ಠಾನದ ಶ್ರೀಧರ್‌ ಪಬ್ಬಿಶೆಟ್ಟಿ ಅವರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಲೋಕಾಯುಕ್ತರು ಕೆರೆ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲಿಸಿದ್ದರು. 

ಹೊರಮಾವು– ಅಗರ ಕೆರೆ ಸರ್ವೆ ನಂಬರ್‌ 77 ಮತ್ತು 83ರಲ್ಲಿ 88 ಎಕರೆಗೂ ಹೆಚ್ಚು ಒತ್ತುವರಿಯಾಗಿದೆ. ಅತಿಕ್ರಮಣ ಜಾಗದಲ್ಲಿ ಖಾಸಗಿ ಬಡಾವಣೆ, ರಸ್ತೆ, ಕಾಂಪೌಂಡ್‌ ನಿರ್ಮಿಸಲಾಗಿದೆ. ಸ್ವಲ್ಪ ಜಾಗದಲ್ಲಿ ವ್ಯವಸಾಯ ಮಾಡಲಾಗುತ್ತಿದೆ. ಡಿಡಿಎಲ್‌ಆರ್‌ ನೀಡಿರುವ ವರದಿಯಲ್ಲಿ ಈ ಮಾಹಿತಿ ಇದ್ದು, ನಗರ ಜಿಲ್ಲಾಧಿಕಾರಿ, ಬೆಂಗಳೂರು ಪೂರ್ವ ತಹಶೀಲ್ದಾರ್‌ ಅವರಿಗೆ ಒತ್ತುವರಿ ತೆರವುಗೊಳಿಸುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ.

ಈ ಸಂಬಂಧ ಪ್ರಗತಿ ವರದಿ ಸಲ್ಲಿಸುವಂತೆ ಆದೇಶದಲ್ಲಿ ಸೂಚಿಸಲಾಗಿದ್ದು, ಪ್ರಕರಣದ ವಿಚಾರಣೆಯನ್ನು ಜೂನ್‌ 26ಕ್ಕೆ ಮುಂದೂಡಲಾಗಿದೆ. ಬಿಬಿಎಂಪಿ ಕಮಿಷನರ್‌ ಮತ್ತು ಮುಖ್ಯ ಎಂಜಿನಿಯರ್‌ (ಕೆರೆ) ಅವರಿಗೂ ನೋಟಿಸ್‌ ನೀಡಲಾಗಿದ್ದು ತ್ಯಾಜ್ಯ ನೀರು ಕೆರೆ ಸೇರದಂತೆ ಕ್ರಮ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಯಶವಂತಪುರ ಹೋಬಳಿ ಮಲ್ಲಸಂದ್ರದ ಗುಡ್ಡೇಕೆರೆಯ ಸರ್ವೆ ನಂಬರ್‌ 49 ಮತ್ತು 50ರಲ್ಲಿ 17.11 ಎಕರೆ ಒತ್ತುವರಿ ಆಗಿದೆ. ಈ ಕೆರೆ ಜಾಗದಲ್ಲಿ ಸ್ಮಶಾನ, ಸಣ್ಣಪುಟ್ಟ ಮನೆಗಳು ತಲೆ ಎತ್ತಿವೆ. ಈ ಒತ್ತುವರಿ ತೆರವಿಗೂ ಕ್ರಮ ಕೈಗೊಳ್ಳುವಂತೆ ಲೋಕಾಯುಕ್ತ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೆರೆಯನ್ನು ಮಾಡಲಾಗಿದ್ದು, ಅದರ ಉಳಿವು ಅಧಿಕಾರಿಗಳ ಕರ್ತವ್ಯ ಎಂದೂ ಹೇಳಿದ್ದಾರೆ.

ಸ್ಮಶಾನವನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. ಆರು ತಿಂಗಳಲ್ಲಿ ಪರ್ಯಾಯ ಜಮೀನು ಮಂಜೂರು ಮಾಡಿ ಸ್ಮಶಾನ ಸ್ಥಳಾಂತರ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಅರಕೆರೆ ಕೆರೆ ಒತ್ತುವರಿ ಮಾಡಲಾಗಿದ್ದು, ಈ ಸಂಬಂಧ ವ್ಯಾಜ್ಯ ಹೈಕೋರ್ಟ್‌ ವಿಚಾರಣೆಯಲ್ಲಿದೆ ಎಂಬ ಸಂಗತಿಯನ್ನು ಲೋಕಾಯುಕ್ತರು ಗಮನಕ್ಕೆ ತೆಗೆದುಕೊಂಡಿದ್ದು, ಮಾಹಿತಿ ಸಲ್ಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಚಿಕ್ಕಬಾಣಾವರ ಕೆರೆಯಲ್ಲಿ ದಿನಕ್ಕೆ ಐದು ದಶಲಕ್ಷ ಲೀಟರ್‌ ನೀರು ಶುದ್ಧೀಕರಣ ಘಟಕ ಹಾಕಲಾಗಿದ್ದು, ಇದರ ಅರ್ಧದಷ್ಟು ಮಾತ್ರ ಸಂಸ್ಕರಣೆ ಆಗುತ್ತಿದೆ ಎಂಬ ಅಂಶವನ್ನು ಲೋಕಾಯುಕ್ತರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಪ್ರದೇಶದಲ್ಲಿ ಒಳಚರಂಡಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ವಿಶ್ವನಾಥಶೆಟ್ಡಿ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !