ಕೆಐಎಎಲ್ ಅಧಿಕಾರಿಗಳ ಬಲೆಗೆ ಬಾಂಗ್ಲಾ ಪ್ರಜೆ

7

ಕೆಐಎಎಲ್ ಅಧಿಕಾರಿಗಳ ಬಲೆಗೆ ಬಾಂಗ್ಲಾ ಪ್ರಜೆ

Published:
Updated:

ಬೆಂಗಳೂರು: ಅಕ್ರಮವಾಗಿ ಭಾರತ ಪ್ರವೇಶಿಸಿದ್ದ ಬಾಂಗ್ಲಾದೇಶದ ಪ್ರಜೆಯೊಬ್ಬ, ಏಜೆಂಟ್‌ಗಳ ನೆರವಿನಿಂದ ಪಾಸ್‌ಪೋರ್ಟ್ ಮಾಡಿಸಿಕೊಂಡು ದೇಶ–ವಿದೇಶ ಸುತ್ತುತ್ತಿದ್ದ. ಸೆ.30ರ ರಾತ್ರಿ ದುಬೈನಿಂದ ‘6–ಇ–95’ ವಿಮಾನದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎಎಲ್‌) ಬಂದಿಳಿದ ಆತ, ದಾಖಲೆ ಪರಿಶೀಲನೆ ವೇಳೆ ವಲಸೆ ವಿಭಾಗದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ.

ನಾಲ್ಕು ವರ್ಷಗಳ ಹಿಂದೆ ಭಾರತಕ್ಕೆ ಬಂದಿರುವ ಅಫ್ಜರ್ ಮಿಯಾನ್ (ತಂದೆ ಕದುಷ್ ಮಿಯಾನ್), ಒಡಿಶಾದ ಭುವನೇಶ್ವರದಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಈತನ ವಿರುದ್ಧ ವಲಸೆ ವಿಭಾಗದ ಅಧಿಕಾರಿ ಕೆ.ಚಂದ್ರನ್ ಅವರು ಕೆಐಎಎಲ್ ಠಾಣೆಗೆ ದೂರು ಕೊಟ್ಟಿದ್ದಾರೆ. ವಂಚನೆ (ಐಪಿಸಿ 420), ನಕಲಿ ದಾಖಲೆ ಸೃಷ್ಟಿ (465,471), ವಿದೇಶಿಯರ ಕಾಯ್ದೆ ಹಾಗೂ ಪಾಸ್‌ಪೋರ್ಟ್ ಕಾಯ್ದೆ ಉಲ್ಲಂಘನೆ ಆರೋಪಗಳಡಿ ಎಫ್‌ಐಆರ್ ದಾಖಲಾಗಿದೆ.

‘ನಕಲಿ ದಾಖಲೆಗಳನ್ನು ಸಲ್ಲಿಸಿ ಅಬ್ಸರ್ ಅಲಿ (ತಂದೆ ಹೆಸರನ್ನು ಮೊಹಮದ್ ಕದುಷ್ ಎಂದು ಬದಲಿಸಿದ್ದ) ಹೆಸರಿನಲ್ಲಿ ಮತದಾರರ ಗುರುತಿನ ಚೀಟಿ, ಪ್ಯಾನ್‌ಕಾರ್ಡ್‌, ಆಧಾರ್‌ ಕಾರ್ಡ್ ಮಾಡಿಸಿಕೊಂಡಿದ್ದ ಆರೋಪಿಯು ಆ ದಾಖಲೆಗಳನ್ನೇ ಸಲ್ಲಿಸಿ ಭುವನೇಶ್ವರದಲ್ಲಿ ಪಾಸ್‌ಪೋರ್ಟ್ ಕೂಡ ಮಾಡಿಸಿಕೊಂಡಿದ್ದ. ಬಳಿಕ 2015ರ ಸೆ.31ರಂದು ದುಬೈಗೆ ತೆರಳಿ, ಎರಡೂವರೆ ವರ್ಷ ಅಲ್ಲೇ ವ್ಯಾಪಾರಮಾಡಿಕೊಂಡಿದ್ದ. 2018ರ ಮಾರ್ಚ್ 5ರಂದು ಪುನಃ ಭುವನೇಶ್ವರಕ್ಕೆ ಮರಳಿದ್ದ’ ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಅದೇ ತಿಂಗಳು ಮಲೇಷ್ಯಾಕ್ಕೆ ತೆರಳಿದಾಗ ಆರೋಪಿಯನ್ನು ವಶಕ್ಕೆ ಪಡೆದಿದ್ದ ಅಲ್ಲಿನ ಏರ್‌ಪೋರ್ಟ್ ಅಧಿಕಾರಿಗಳು, ದಾಖಲೆಗಳು ಸರಿ ಇಲ್ಲವೆಂದು ಭಾರತಕ್ಕೆ ಗಡಿಪಾರು ಮಾಡಿದ್ದರು. ಪುನಃ ಸಂಬಂಧಿಯ ಸಹಾಯದಿಂದ ಇನ್ನೊಂದು ಪಾಸ್‌ಪೋರ್ಟ್ ಮಾಡಿಸಿಕೊಂಡು, ದುಬೈಗೆ ಹಾರಿದ್ದ’ ಎಂದು ಮಾಹಿತಿ ನೀಡಿದ್ದಾರೆ.

ಆರೋಪಿಯು ಕೆಲಸದ ನಿಮಿತ್ತ ಸೆ.30ರಂದು ಬೆಂಗಳೂರಿಗೆ ಬಂದಿದ್ದ. ದಾಖಲೆ ಪರಿಶೀಲನೆ ವೇಳೆ ಆತನ ವರ್ತನೆ ಗಮನಿಸಿ ಸಂಶಯಗೊಂಡ ಅಧಿಕಾರಿಗಳು, ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪ‍ಡಿಸಿದಾಗ ತಾನು ಬಾಂಗ್ಲಾ ಪ್ರಜೆಯೆಂದು ತಪ್ಪೊಪ್ಪಿಕೊಂಡಿದ್ದಾನೆ. ಅಫ್ಜರ್‌ನನ್ನು ಗಡಿಪಾರು ಮಾಡುವ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಕೆಐಎಎಲ್ ಅಧಿಕಾರಿಗಳು ಎಫ್‌ಆರ್‌ಆರ್‌ಒಗೆ ಪತ್ರ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !