ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಗಡಣೆಗೆ ಮನಸ್ಸಿಲ್ಲ; ವಿಲೇವಾರಿಗೆ ವೇಗವಿಲ್ಲ!

ಕುಸಿತಗೊಂಡ ಮೂಲದಲ್ಲೇ ಕಸ ಪ್ರತ್ಯೇಕಿಸುವ ‍ಪ್ರಮಾಣ * ಸಮಸ್ಯೆ ಹೆಚ್ಚಿಸಿದ ಪೌರಕಾರ್ಮಿಕರ ಕಡಿತ
Last Updated 19 ಮಾರ್ಚ್ 2019, 19:59 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಿಧಾನವಾಗಿ ಚುನಾವಣೆ ಕಾವು ಏರುತ್ತಿದ್ದಂತೆಯೇ ಕಸ ವಿಲೇವಾರಿ ಸಮಸ್ಯೆಯೂ ಬಿಗಡಾಯಿಸಿದೆ. ಮೂಲದಲ್ಲಿ ಕಸ ವಿಂಗಡಣೆ ಮಾಡುತ್ತಿದ್ದ ಪ್ರಮಾಣದಲ್ಲಿ ಇಳಿಕೆಯಾಗಿರುವುದು, ಬೆಳ್ಳಹಳ್ಳಿ ತ್ಯಾಜ್ಯ ಸಂಗ್ರಹ ಘಟಕದಲ್ಲಿ ಅಗ್ನಿ ಅನಾಹುತ ಸಂಭವಿಸಿರುವುದು ಹಾಗೂ ಕೆಲವು ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರ ಸಂಖ್ಯೆಯನ್ನು ಕಡಿತಗೊಳಿಸಿರುವುದು ಸಮಸ್ಯೆ ಗಂಭೀರ ಸ್ವರೂಪ ತಾಳಲು ಕಾರಣವಾಗಿದೆ.

ಬಿಬಿಎಂಪಿ ಕೈಗೊಂಡ ಕೆಲವು ಕಟ್ಟುನಿಟ್ಟಿನ ಕ್ರಮಗಳ ಪರಿಣಾಮವಾಗಿ ಮೂಲದಲ್ಲೇ ಕಸ ವಿಂಗಡಣೆ ಪ್ರಮಾಣ ಶೇ 50ರವರೆಗೆ ತಲುಪಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಮಿಶ್ರಕಸ ಕೊಡುವ ಪ್ರವೃತ್ತಿ ಮತ್ತೆ ಹೆಚ್ಚಾಗಿದ್ದರಿಂದ ವಿಂಗಡಣೆ ಪ್ರಮಾಣ ಈಗ ಶೇ 40ಕ್ಕೆ ಕುಸಿದಿದೆ.

ನಗರದಲ್ಲಿ ನಿತ್ಯ ಉತ್ಪಾದನೆಯಾಗುವ ಕಸದಲ್ಲಿ ಶೇ 64ರಷ್ಟು ಹಸಿಕಸವೇ ಇದ್ದು, ಮೂಲದಲ್ಲಿ ಬೇರ್ಪಡಿಸಿ ಕೊಟ್ಟರೆಅದನ್ನು ಕರಗಿಸಲು ಸಾಧ್ಯ. ಜೈವಿಕ ಕ್ರಿಯೆಯಲ್ಲಿ ಇದು ಸುಲಭವಾಗಿ ಕರಗುವುದರಿಂದ ತ್ಯಾಜ್ಯದ ಬೆಟ್ಟಗಳನ್ನು ಸುಲಭವಾಗಿ ಇಲ್ಲವಾಗಿಸಬಹುದು ಎನ್ನುವುದು ತಜ್ಞರ ಅಭಿಪ್ರಾಯವಾಗಿತ್ತು. ಆದರೆ, ಈಗ ಮಿಶ್ರಕಸದ ಪ್ರಮಾಣ ಹೆಚ್ಚುತ್ತಿರುವುದರಿಂದ ವಿಲೇವಾರಿ ಸಮಸ್ಯೆಯಾಗಿದೆ.

ಬೆಳ್ಳಹಳ್ಳಿಯ ತ್ಯಾಜ್ಯ ಘಟಕದಲ್ಲಿ ಮಾರ್ಚ್‌ 14ರಂದು ಬೆಂಕಿ ಅನಾಹುತ ಸಂಭವಿಸಿದ್ದರಿಂದ ಕೆಲವು ದಿನಗಳವರೆಗೆ ಅಲ್ಲಿಗೆ ಕಸ ಸಾಗಿಸುವುದನ್ನೇ ನಿಲ್ಲಿಸಲಾಗಿತ್ತು. ಅದಕ್ಕಿಂತ ಮುಂಚೆ ನಿತ್ಯ ಈ ಘಟಕಕ್ಕೆ 300ಕ್ಕೂ ಹೆಚ್ಚು ವಾಹನಗಳು ಕಸ ಸಾಗಾಟ ಮಾಡುತ್ತಿದ್ದವು.

ಬೆಳ್ಳಹಳ್ಳಿ ಘಟಕದಲ್ಲಿ ಕಾಣಿಸಿಕೊಂಡ ಸಮಸ್ಯೆಯಿಂದ ನಗರದ ದಕ್ಷಿಣ ಭಾಗದ ಹಲವು ವಾರ್ಡ್‌ಗಳಲ್ಲಿ ಕಸ ಹೊರಹೋಗದೆ ಮನೆ–ಮನೆಗಳಲ್ಲಿಯೇ ಕೊಳೆಯುತ್ತಾ ಬಿದ್ದಿತ್ತು. ಈಗ ವಾತಾವರಣ ತಿಳಿಗೊಂಡಿದ್ದರಿಂದ ಮಂಗಳವಾರದಿಂದ ಕಸ ವಿಲೇವಾರಿ ಶುರುವಾಗಿದೆ.

ಪುಟ್ಟೇನಹಳ್ಳಿ, ಜೆ.ಪಿ.ನಗರ ಮತ್ತು ನಗರದಇತರೆ ವಾರ್ಡ್‌ಗಳಲ್ಲಿ ಕಸ ವಿಲೇವಾರಿ ಕಾರ್ಯ ಕೆಲ ದಿನಗಳವರೆಗೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಪ್ರತಿ ವಾರ್ಡ್‌ನಲ್ಲಿ ನಿತ್ಯ ಸರಾಸರಿ 25 ಟನ್‌ಗಳಷ್ಟು ಕಸ ಉತ್ಪಾದನೆಯಾದ ಸ್ಥಳದಲ್ಲಿಯೇ ಗುಡ್ಡೆ ಬಿದ್ದಿತ್ತು. ನಿಧಾನವಾಗಿ ಕಸ ಹೊರಹೋಗುತ್ತಿದ್ದರೂ ವಿಲೇವಾರಿ ಕಾರ್ಯ ಈಗಲೂ ನಿಯಮಿತವಾಗಿ ನಡೆಯುತ್ತಿಲ್ಲ.

‘ನಮ್ಮ ಮನೆಯಲ್ಲಿ 4–5 ದಿನಗಳವರೆಗೆ ಕೊಳೆಯುತ್ತಾ ಬಿದ್ದ ಕಸದಿಂದ ಸೊಳ್ಳೆಗಳು ರಾಶಿ ರಾಶಿಯಾಗಿ ಉತ್ಪತ್ತಿಯಾಗಿದ್ದವು. ಕಸ ವಿಲೇವಾರಿ ನಿಯಮಿತವಾಗಿ ನಡೆಯುವಂತೆ ನೋಡಿಕೊಳ್ಳುವುದು ವಾರ್ಡ್‌ ಸಮಿತಿಗಳ ಹೊಣೆಯಾಗಿದೆ. ಆದರೆ, ವಾರ್ಡ್‌ ಸಮಿತಿ ಸಭೆಗಳೇ ನಿಯಮಿತವಾಗಿ ನಡೆಯದಿರುವಾಗ ಸಮಸ್ಯೆಯನ್ನು ಬಗೆಹರಿಸಲು ಯಾರು ನೆರವಿಗೆ ಬರುತ್ತಾರೆ’ ಎನ್ನುವುದು ಪುಟ್ಟೇನಹಳ್ಳಿ ನಿವಾಸಿ ಡಿ.ಪಿ. ಅಶ್ವಿನ್‌ಕುಮಾರ್‌ ಅವರ ಪ್ರಶ್ನೆ.

‘ನಗರದಲ್ಲಿ ಕಸ ವಿಂಗಡಣೆ ಕಾರ್ಯ ನಿಯಮಿತವಾಗಿ ನಡೆಯುತ್ತಿಲ್ಲ ಎನ್ನುವುದು ಸಾಮಾನ್ಯವಾಗಿ ಕೇಳಿಬರುವ ದೂರು. ಹೌದು, ಎಲ್ಲರೂ ಕಸವನ್ನು ಮೂಲದಲ್ಲಿ ಬೇರ್ಪಡಿಸುತ್ತಿಲ್ಲ. ಆದರೆ, ವಿಂಗಡಿಸಿ ಕೊಟ್ಟರೂ ಕಾರ್ಮಿಕರು ಅದನ್ನು ಮಿಶ್ರಣಗೊಳಿಸಿ ಒಯ್ಯುತ್ತಾರಲ್ಲ? ಅಧಿಕಾರಿಗಳು ಈ ಪರಿಪಾಟ ತಪ್ಪಿಸಲು ಏನು ಕ್ರಮ ಕೈಗೊಂಡಿದ್ದಾರೆ’ ಎಂದು ಕೇಳುತ್ತಾರೆ ಜೆ.ಪಿ.ನಗರದ ನಿವಾಸಿಗಳು.

‘ನಮ್ಮ ವಾರ್ಡ್‌ನಲ್ಲಿ ಗುತ್ತಿಗೆದಾರರು ಸುಮಾರು 30 ಜನ ಪೌರಕಾರ್ಮಿಕರನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ. ಇದರಿಂದ ಕಸ ವಿಲೇವಾರಿಯಲ್ಲಿ ಸಮಸ್ಯೆಯಾಗಿದೆ. ಈ ಸಂಬಂಧ ನಾನು ಈಗಾಗಲೇ ಹಿರಿಯ ಅಧಿಕಾರಿಗಳ ಜತೆ ಮಾತನಾಡಿದ್ದೇನೆ’ ಎಂದು
ಜೆ.ಪಿ.ನಗರ ಭಾಗದಲ್ಲಿ ತ್ಯಾಜ್ಯ ಸಮಸ್ಯೆ ಬಿಗಡಾಯಿಸಿರುವುದಕ್ಕೆ ಕಾರಣ ನೀಡುತ್ತಾರೆ ಕಾರ್ಪೊರೇಟರ್‌ ಲಕ್ಷ್ಮಿ ನಟರಾಜ್‌.

ಬಿಬಿಎಂಪಿಯಿಂದ ಬಾಕಿ ಮೊತ್ತ ಪಾವತಿಸುವಂತೆ ಮಾಡಲು ಕೆಲವು ಗುತ್ತಿಗೆದಾರರು ಕಸ ವಿಲೇವಾರಿಯಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ ಎಂದೂ ದೂರಲಾಗಿದೆ.

ಅಂಕಿ–ಅಂಶಗಳು

1,0207,063 - ನಗರ ಜನಸಂಖ್ಯೆ

0.564 - ಒಬ್ಬ ವ್ಯಕ್ತಿಯಿಂದ ಉತ್ಪತ್ತಿಯಾಗಿತ್ತಿರುವ ಕಸ

5760 ಟನ್‌ -ಪ್ರತಿ ದಿನ ಉತ್ಪತ್ತಿಯಾಗುವ ಕಸ

**

ವಿಷಯ ಹಸಿಕಸ ಒಣಕಸ ಅಪಾಯಕಾರಿತ್ಯಾಜ್ಯ ತಿರಸ್ಕೃತತ್ಯಾಜ್ಯ

ಮನೆಕಸ 2669.04 1175.87 149.03 284.18

ಸಗಟುಕಸ 1018.15 423.03 12.07 66.82

ಒಟ್ಟುಕಸ(ಶೇ)64 28 3 6
**

ಬೆಳ್ಳಹಳ್ಳಿ ಘಟಕದಲ್ಲಿ ಬೆಂಕಿ ಬಿದ್ದಿದ್ದರಿಂದ ಕಸ ಸಾಗಾಟ ಸಾಧ್ಯವಾಗಿರಲಿಲ್ಲ. ಈಗ ಪರಿಸ್ಥಿತಿ ಸುಧಾರಿಸಿದ್ದು, ತ್ಯಾಜ್ಯ ಸಾಗಾಟ ಎಂದಿನಂತೆ ನಡೆದಿದೆ
- ವಿಕ್ರಂ, ಪುಟ್ಟೇನಹಳ್ಳಿ ಭಾಗದ ಕಸ ವಿಲೇವಾರಿ ಗುತ್ತಿಗೆದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT