ಸೋಮವಾರ, ನವೆಂಬರ್ 18, 2019
25 °C
‘ಅನಾಹುತಕ್ಕೆ ಅವಕಾಶ ನೀಡದಿರಿ’

ಮಳೆ, ಮುನ್ನೆಚ್ಚರಿಕೆ ವಹಿಸಿ: ಅಧಿಕಾರಿಗಳಿಗೆ ಮೇಯರ್‌ ಸೂಚನೆ

Published:
Updated:
Prajavani

ಬೆಂಗಳೂರು: ಮಳೆ ಬಿದ್ದು ಅನಾಹುತ ಸಂಭವಿಸಿದ ಬಳಿಕ ಎಚ್ಚೆತ್ತುಕೊಳ್ಳುವ ಬದಲು, ಅವುಗಳನ್ನು ತಡೆಯಲು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮೇಯರ್‌ ಎಂ.ಗೌತಮ್‌ ಕುಮಾರ್‌ ಬಿಬಿಎಂಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಇನ್ನು ಮೂರು ದಿನ ಭಾರಿ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ, ಮಳೆ ಸಿದ್ಧತೆ ಪರಿಶೀಲಿಸುವ ಸಲುವಾಗಿ ಅವರು ಮಂಗಳವಾರ ಅಧಿಕಾರಿಗಳ ಸಭೆ ನಡೆಸಿದರು.

‘ಮಳೆ ಬರುವ ಮುನ್ಸೂಚನೆ ಇದ್ದರೆ ಕಾರ್ಯಪಾಲಕ ಎಂಜಿನಿಯರ್‌ಗಳು ಕಚೇರಿಯಲ್ಲಿದ್ದು ಸಿಬ್ಬಂದಿಗೆ ನಿರ್ದೇಶನ ನೀಡಬೇಕು. ರಾಜಕಾಲುವೆಯ ನೀರು ವ್ಯಾಪಿಸಿ ಕೆಲ ಪ್ರದೇಶಗಳು ಜಲಾವೃತಗೊಳ್ಳುತ್ತಿವೆ. ಅಂತಹ ಪ್ರದೇಶಗಳನ್ನು ಗುರುತಿಸಿ ಅಲ್ಲಿ ಪಂಪ್‌ಸೆಟ್‌ಗಳನ್ನು ಸನ್ನದ್ಧವಾಗಿಟ್ಟುಕೊಳ್ಳಬೇಕು’ ಎಂದು ಸೂಚಿಸಿದರು. 

ಸಿಬ್ಬಂದಿಗೆ ರಜೆ ಇಲ್ಲ: ‘ಮಳೆ ವೇಳೆ ಅವಘಡ ಸಂಭವಿಸಿದರೆ ದಿನದ 24 ತಾಸು ಸ್ಪಂದಿಸಲು 8 ವಲಯಗಳಲ್ಲಿ ಶಾಶ್ವತ ನಿಯಂತ್ರಣ ಕೊಠಡಿಗಳಿವೆ. ಇದಲ್ಲದೇ ತಾತ್ಕಾಲಿಕವಾಗಿ 63 ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ಮೂರು ದಿನ ರಜೆ ಹಾಕುವಂತಿಲ್ಲ. ಜಂಟಿ ಆಯುಕ್ತರು, ಅಗ್ನಿಶಾಮಕ ದಳ, ಜಲಮಂಡಳಿ, ಪೌರ ರಕ್ಷಣಾದಳ, ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಹಾಗೂ ಸಂಚಾರ ಪೊಲೀಸ್ ಸಿಬ್ಬಂದಿ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಸೂಚನೆ ನೀಡಲಾಗಿದೆ’ ಎಂದು ಸಭೆ ಮುಗಿದ ಬಳಿಕ ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ತಿಳಿಸಿದರು.

‘ರಸ್ತೆ ಇಕ್ಕೆಲಗಳಲ್ಲಿರುವ ಚರಂಡಿಗಳ ಹೂಳೆತ್ತಲಾಗಿದೆ. ನೀರು ಹೊರಹಾಕಲು ಪ್ರತಿ ವಲಯಕ್ಕೆ ತಲಾ ಒಂದು 47 ಅಶ್ವಶಕ್ತಿ ಸಾಮರ್ಥ್ಯದ ಪಂಪ್ ಖರೀದಿಸಲಾಗುತ್ತಿದೆ. ಪ್ರವಾಹ ಸಾಧ್ಯತೆ ಇರುವೆಡೆ ಜನರಿಗೆ ತುರ್ತು ಆಶ್ರಯ ಕಲ್ಪಿಸಲು ಪಾಲಿಕೆ ಶಾಲೆ, ಸಮುದಾಯ ಭವನಗಳ ಪಟ್ಟಿ ಸಿದ್ದಪಡಿಸಲಾಗಿದೆ’ ಎಂದರು.

‘ಕೆರೆಗಳಿಗೆ ಆಯಾ ವಲಯದ ಜಂಟಿ ಆಯುಕ್ತರು, ಕೆರೆ ವಿಭಾಗದ ಅಧಿಕಾರಿ
ಗಳು ಹಾಗೂ ಮುಖ್ಯ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲಿಸಬೇಕು. ಕೆರೆ ದಂಡೆ ಒಡೆಯದಂತೆ ಮುಂಜಾಗ್ರತೆವಹಿಸಬೇಕು. ದಂಡೆ ಶಿಥಿಲಗೊಂಡಿದ್ದರೆ ಮರಳು ಮೂಟೆಗಳನ್ನು ಜೋಡಿಸಿ ತಾತ್ಕಾಲಿಕವಾಗಿ ಬಲಪಡಿಸಬೇಕು. ನೀರಿನ ಸಂಗ್ರಹ ಹೆಚ್ಚಾದಾಗ ನೀರು ಸರಾಗವಾಗಿ ಹೊರ ಹರಿಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದ್ದೇನೆ’ ಎಂದು ಹೇಳಿದರು.

ನೆಲಕ್ಕುರುಳಿದ ನಾಲ್ಕು ಮರ

ನಗರದ ಹಲವೆಡೆ ಮಂಗಳವಾರವೂ ಮಳೆ ಆರ್ಭಟ ಜೋರಾಗಿತ್ತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಅದರ ಜೊತೆಯೇ ಮಳೆಯು ಜೋರಾಗಿ ಸುರಿಯಿತು.

ಸೋಮವಾರ ಸಂಜೆ ಹಾಗೂ ರಾತ್ರಿ ಹಲವೆಡೆ ಮಳೆ ಆಗಿತ್ತು. ಪ್ರಮುಖ ರಸ್ತೆಗಳಲ್ಲಿ ನೀರು ನಿಂತುಕೊಂಡಿತ್ತು. ಬಿಬಿಎಂಪಿ ಸಿಬ್ಬಂದಿ ನೀರಿನ ತೆರವು ಕಾರ್ಯಾಚರಣೆ ಕೈಗೊಂಡಿದ್ದಾಗಲೇ ಪುನಃ ಮಳೆ ಸುರಿಯಲಾರಂಭಿಸಿತ್ತು.

ಮಳೆ ಸಂದರ್ಭದಲ್ಲೇ ಗಾಳಿಯು ಜೋರಾಗಿ ಬೀಸಿತು. ಮೂಡಲಪಾಳ್ಯ, ಜಯನಗರ 1ನೇ ಹಂತ, ಎನ್‌ಜಿಇಎಫ್ ಲೇಔಟ್ ಹಾಗೂ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ತಲಾ ಒಂದು ಮರ ನೆಲಕ್ಕುರುಳಿತ್ತು. ಅಲ್ಲೆಲ್ಲ ಪೊಲೀಸರು ಹಾಗೂ ಬಿಬಿಎಂಪಿ ಸಿಬ್ಬಂದಿ ಮರವನ್ನು ತೆರವು ಮಾಡುವುದರಲ್ಲಿ ನಿರತರಾಗಿದ್ದರು. ಮೈಸೂರು ರಸ್ತೆ, ತುಮಕೂರು ರಸ್ತೆ, ಬಳ್ಳಾರಿ ರಸ್ತೆ ಹಾಗೂ ಕನಕಪುರ ರಸ್ತೆಯ ಪ್ರದೇಶಗಳಲ್ಲಿ ಮಳೆ ಜೋರಾಗಿತ್ತು. ಅಲ್ಲೆಲ್ಲ ರಸ್ತೆ ಮೇಲೆಯೇ ನೀರು ಹರಿದು ವಾಹನಗಳ ಸಂಚಾರಕ್ಕೆ ತೊಂದರೆ ಆಯಿತು. ಹಲಸೂರು, ಎಂ.ಜಿ.ರಸ್ತೆ, ಮಲ್ಲೇಶ್ವರ, ಯಶವಂತಪುರ, ಬಸವೇಶ್ವರ ನಗರ, ಗಾಯತ್ರಿನಗರ, ಮಹಾಲಕ್ಷ್ಮಿ ಲೇಔಟ್, ವಿಜಯನಗರ, ಗೊರಗುಂಟೆಪಾಳ್ಯ, ಜಾಲಹಳ್ಳಿ, ಶಾಂತಿನಗರ, ಬಸವನಗುಡಿ, ಜೆ.ಪಿ. ನಗರ, ಬನಶಂಕರಿ, ಹನುಮಂತನಗರ, ಮಡಿವಾಳ, ಕೋರಮಂಗಲ, ಕೆಂಗೇರಿ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲೂ ಮಳೆ ಇತ್ತು.

‘ಗುಂಡಿ ಮುಚ್ಚಲು ನ.10ರ ಗಡುವು’

‘ಪಾಲಿಕೆ ವ್ಯಾಪ್ತಿಯ ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳು ಸೇರಿದಂತೆ ಎಲ್ಲಾ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ನ.10ರ ಒಳಗಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಗಡುವು ನೀಡಲಾಗಿದೆ. ಒಂದು ವೇಳೆ ರಸ್ತೆ ಗುಂಡಿ ಮುಚ್ಚದಿದ್ದಲ್ಲಿ ಸಂಬಂಧಪಟ್ಟ ಎಂಜಿನಿಯರ್‌ಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು’ ಎಂದು ಪಾಲಿಕೆ ಆಯುಕ್ತರು ತಿಳಿಸಿದರು.

ಪ್ರತಿಕ್ರಿಯಿಸಿ (+)