ಪಾಲಿಕೆ: ನಗರ ಯೋಜನೆ ಸಮಿತಿಗೆ ನಾಗರಾಜ್‌ ಅಧ್ಯಕ್ಷ?

7
ಸ್ಥಾಯಿ ಸಮಿತಿ ಅಧ್ಯಕ್ಷರ ಆಯ್ಕೆ

ಪಾಲಿಕೆ: ನಗರ ಯೋಜನೆ ಸಮಿತಿಗೆ ನಾಗರಾಜ್‌ ಅಧ್ಯಕ್ಷ?

Published:
Updated:

ಬೆಂಗಳೂರು: ಬಿಬಿಎಂಪಿಯ 12 ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಇದೇ 17ರಂದು ನಡೆಯಲಿದೆ. ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ಜಂಗಿ ಕುಸ್ತಿಗೆ ಕಾರಣವಾಗಿದ್ದ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ ವಿಜ್ಞಾನನಗರ ವಾರ್ಡ್‌ನ ಎಸ್‌.ಜಿ.ನಾಗರಾಜ್‌ ಅಧ್ಯಕ್ಷರಾಗುವುದು ಬಹುತೇಕ ಖಚಿತ.

12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಗೆ 2018ರ ಡಿಸೆಂಬರ್‌ 5ರಂದು ಚುನಾವಣೆ ನಡೆದಿತ್ತು. 11 ಸ್ಥಾಯಿ ಸಮಿತಿಗಳಿಗೆ ಪೂರ್ಣಪ್ರಮಾಣದಲ್ಲಿ ( ತಲಾ 11 ಮಂದಿ ) ಸದಸ್ಯರು ಆಯ್ಕೆಯಾಗಿದ್ದರು. ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಗೆ 9 ಸದಸ್ಯರು ಮಾತ್ರ ಆಯ್ಕೆ ಆಗಿದ್ದರು. ಕೊನೇನ ಅಗ್ರಹಾರ ವಾರ್ಡ್‌ ಸದಸ್ಯ ಎಂ.ಚಂದ್ರಪ್ಪ ರೆಡ್ಡಿ ಅವರನ್ನು ಈ ಸ್ಥಾಯಿ ಸಮಿತಿಗೆ ಅಧ್ಯಕ್ಷರನ್ನಾಗಿಸಲು ಮೈತ್ರಿಕೂಟವು ನಿರ್ಧರಿಸಿತ್ತು. ಆದರೆ, ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದರಿಂದ ಆಯ್ಕೆ ಆಗಿರಲಿಲ್ಲ.

ಸಮಿತಿಗಳಿಗೆ ಅಧ್ಯಕ್ಷರ ಆಯ್ಕೆ ನಡೆಸಲು ಡಿಸೆಂಬರ್‌ 14ರಂದು ಸಭೆ ನಡೆದಿತ್ತು. ಬಿಜೆಪಿಯ ಉಚ್ಚಾಟಿತ ಸದಸ್ಯ ಬೈರಸಂದ್ರ ವಾರ್ಡ್‌ನ ಎನ್‌.ನಾಗರಾಜು ಅವರನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರನ್ನಾಗಿಸಲು ಕಾಂಗ್ರೆಸ್‌– ಜೆಡಿಎಸ್‌ ಮೈತ್ರಿಕೂಟ ಬಯಸಿತ್ತು. ಇದಕ್ಕೂ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.

‘ನಾಗರಾಜು ಅವರನ್ನು ಅಧ್ಯಕ್ಷರನ್ನಾಗಿಸುವುದಾದರೆ ನಾವೂ ಅಭ್ಯರ್ಥಿ ಕಣಕ್ಕಿಳಿಸುತ್ತೇವೆ’ ಎಂದು ಬಿಜೆಪಿ ನಾಯಕರು ಹೇಳಿದ್ದರು. ವಿರೋಧ ಪಕ್ಷದವರಿಂದ ಸಹಕಾರ ಸಿಗದ ಕಾರಣ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಮೇಯರ್‌ ಗಂಗಾಂಬಿಕೆ ಮುಂದೂಡಿದ್ದರು. ‘ಎಸ್‌.ಜಿ.ನಾಗರಾಜ್‌ ಆಯ್ಕೆಗೆ ಬಿಜೆಪಿಯವರು ಸಹಕರಿಸುವುದಾಗಿ ಹೇಳಿದ್ದಾರೆ. ಸ್ಥಾಯಿ ಸಮಿತಿಗಳ ಅಧ್ಯಕ್ಷರ ಆಯ್ಕೆ ಸಾಂಗವಾಗಿ ನಡೆಯಲಿದೆ’ ಎಂದು ಕಾಂಗ್ರೆಸ್‌ನ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !