ಶನಿವಾರ, ಡಿಸೆಂಬರ್ 7, 2019
21 °C
ಲೂಪ್‌ ಕಾಮಗಾರಿ ನಡೆಸಲು ಬಿಡಿಎ ಹಿಂದೇಟು

ಹೆಬ್ಬಾಳ ಮೇಲ್ಸೇತುವೆ: ಅನುದಾನ ಕೊಡಿ, ಇಲ್ಲವೇ ಬಿಬಿಎಂಪಿಗೆ ವಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಹೆಬ್ಬಾಳ ಮೇಲ್ಸೇತುವೆಗೆ ಇನ್ನೆರಡು ಲೂಪ್‌ ಸೇರ್ಪಡೆಗೊಳಿಸುವ ಕಾಮಗಾರಿಯನ್ನು ನಿರ್ವಹಿಸುವುದಕ್ಕೆ ಹಿಂದೇಟು ಹಾಕಿದೆ.

ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟನೆ ಸಮಸ್ಯೆ ನೀಗಿಸುವ ಸಲುವಾಗಿ ಎರಡು ಲೂಪ್‌ಗಳನ್ನು ಹೆಚ್ಚುವರಿಯಾಗಿ ಸೇರ್ಪಡೆಗೊಳಿಸಲಾಗುತ್ತಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಕಡೆಯಿಂದ ನಗರದ ಕಡೆಗೆ ಸಂಚರಿಸುವ ವಾಹನಗಳಿಗಾಗಿ ಒಂದು ಲೂಪ್‌ ಹಾಗೂ ಕೆ.ಆರ್‌.ಪುರ ಕಡೆಯಿಂದ ವಿಮಾನನಿಲ್ದಾಣ ಕಡೆಗೆ ಹೋಗುವ ವಾಹನಗಳಿಗಾಗಿ ಇನ್ನೊಂದು ಲೂಪ್‌ ನಿರ್ಮಾಣವಾಗಲಿದೆ. ಈ ಕಾಮಗಾರಿಗೆ ಅಂದಾಜು ₹ 145 ಕೋಟಿ ವೆಚ್ಚವಾಗುತ್ತದೆ.

ವಿಮಾನನಿಲ್ದಾಣ ಕಡೆಯಿಂದ ನಗರಕ್ಕೆ ಸಂಪರ್ಕ ಕಲ್ಪಿಸುವ ಲೂಪ್‌ನ ಪಿಲ್ಲರ್‌ಗಳ ತಳಪಾಯದ ಕಾಮಗಾರಿಯನ್ನು ಈಗಾಗಲೇ ಆರಂಭಿಸಲಾಗಿದೆ. ಈ ಕಾಮಗಾರಿ ಸಂಬಂಧ ಗುತ್ತಿಗೆದಾರರಿಗೆ ಬಿಲ್‌ ಪಾವತಿ ಬಾಕಿ ಇದೆ. ಹಾಗಾಗಿ ಅವರು ಕಾಮಗಾರಿಯನ್ನು ಸ್ಥಗಿತಗೊಳಿಸಿದ್ದಾರೆ.

ಈ ಕಾಮಗಾರಿಗೆ ಅನುದಾನ ಒದಗಿಸುವಂತೆ ಬಿಡಿಎ ಅಧಿಕಾರಿಗಳು ಇತ್ತೀಚೆಗೆ ಬಿಡಿಎ ಅಧ್ಯಕ್ಷ ಜಿ.ಪರಮೇಶ್ವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒತ್ತಾಯಿಸಿದ್ದರು. ಈ ವಿಚಾರದಲ್ಲಿ ಸರ್ಕಾರದಿಂದ ಸಕಾರಾತ್ಮಕ ಪ್ರತಿಕ್ರಿಯೆ ಬಾರದ ಕಾರಣ ಬಿಡಿಎ ನಗರಾಭಿವೃದ್ಧಿ ಇಲಾಖೆಗೆ ಪತ್ರ ಬರೆದಿದೆ. 

‘ಈ ಕಾಮಗಾರಿಯನ್ನು ನಿರ್ವಹಿಸುವುದಕ್ಕೆ ಅಗತ್ಯ ಅನುದಾನವನ್ನು ಒದಗಿಸಬೇಕು. ಇಲ್ಲದಿದ್ದರೆ ಈ ಕಾಮಗಾರಿಯನ್ನು ಬಿಬಿಎಂಪಿಗೆ ಹಸ್ತಾಂತರಿಸಬೇಕು’ ಎಂದು ಬಿಡಿಎ ಒತ್ತಾಯಿಸಿದೆ.

‘ಪ್ರಾಧಿಕಾರದ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ. ಸರ್ಕಾರ ನಮಗೆ ಅನುದಾನ ಒದಗಿಸಿದರೆ ಮಾತ್ರ ಕಾಮಗಾರಿ ಮುಂದುವರಿಸಬಹುದು’ ಎಂದು ಬಿಡಿಎ ಎಂಜಿನಿಯರಿಂಗ್‌ ಸದಸ್ಯ ಬಿ.ಎಸ್‌.ಶಿವಕುಮಾರ್ ತಿಳಿಸಿದರು.

2003ರಲ್ಲಿ ಈ ಮೇಲ್ಸೇತುವೆ ನಿರ್ಮಿಸಲಾಗಿತ್ತು. ಆ ಬಳಿಕ ಇದರ ನಿರ್ವಹಣೆಯನ್ನೂ ಬಿಡಿಎ ನೋಡಿಕೊಳ್ಳುತ್ತಿತ್ತು. ಇತ್ತೀಚೆಗೆ ಈ ಮೇಲ್ಸೇತುವೆಯಲ್ಲಿ ಬಿರುಕು ಕಾಣಿಸಿಕೊಂಡ ಬಳಿಕ ನಿರ್ವಹಣೆ ಬಗ್ಗೆ ಹೆಚ್ಚಿನ ಆಸ್ಥೆ ವಹಿಸಬೇಕಾದ ಒತ್ತಡವನ್ನು ಬಿಡಿಎ ಎದುರಿಸುತ್ತಿದೆ.

‘ನಗರದಲ್ಲಿ ಬಿಡಿಎ ನಿರ್ಮಿಸಿದ ಮೇಲ್ಸೇತುವೆಗಳ ನಿರ್ವಹಣೆಯನ್ನೂ ಬಿಬಿಎಂಪಿಗೆ ವಹಿಸಲಾಗಿದೆ. ಈ ಸೇತುವೆಯೂ ಬಿಬಿಎಂಪಿ ವ್ಯಾಪ್ತಿಯಲ್ಲಿದೆ. ಹಾಗಾಗಿ ಈ ಸೇತುವೆ ನಿರ್ವಹಣೆಯನ್ನೂ ಬಿಬಿಎಂಪಿಗೆ ವಹಿಸುವಂತೆ ಕೋರಿದ್ದೇವೆ’ ಎಂದು ಶಿವಕುಮಾರ್‌ ತಿಳಿಸಿದರು.

 **

ಮುಖ್ಯಾಂಶಗಳು

ಹೆಬ್ಬಾಳ ಮೇಲ್ಸೇತುವೆಗೆ ಎರಡು ಹೊಸ ಲೂಪ್‌ಗಳ ಸೇರ್ಪಡೆ

ಕಾಮಗಾರಿಗೆ ಅನುದಾನ ಬಿಡುಗಡೆ ಮಾಡದ ಸರ್ಕಾರ

ಗುತ್ತಿಗೆದಾರರಿಗೆ ಬಿಲ್‌ ಪಾವತಿ ಬಾಕಿ ಉಳಿಸಿಕೊಂಡ ಬಿಡಿಎ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು