ಬುಧವಾರ, ಅಕ್ಟೋಬರ್ 23, 2019
23 °C

ಭಾರಿ ಮಳೆ: ನೆಲಕ್ಕುರುಳಿ ಮರ

Published:
Updated:
Prajavani

ಬೆಂಗಳೂರು: ನಗರದಲ್ಲಿ ಮಂಗಳವಾರ ರಾತ್ರಿ ಗುಡುಗು, ಸಿಡಿಲು, ಗಾಳಿ ಸಹಿತ ಸುರಿದ ಭಾರಿ ಮಳೆಗೆ ನಾಲ್ಕು ಕಡೆ ಮರಗಳು ನೆಲಕ್ಕುರುಳಿವೆ.

ಕೋರಮಂಗಲದ ಜ್ಯೋತಿನಿವಾಸ ಕಾಲೇಜು ಬಳಿ, ಜೆಪಿ ನಗರ ಏಳನೇ ಹಂತದ ಆರ್‌ಬಿಐ ಕಾಲೊನಿಯಲ್ಲಿ ತಲಾ ಒಂದು ಮರ ಮತ್ತು ಬಸವನಗುಡಿಯ ರಾಮಕೃಷ್ಣ ಆಶ್ರಮ ಸಮೀಪದ ಎರಡು ಮರಗಳು ನೆಲಕ್ಕೆ ಉರುಳಿವೆ. ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಸಿಬ್ಬಂದಿ, ತೆರವು ಕಾರ್ಯಾಚರಣೆ ಕೈಗೊಂಡರು.

ಅನಿರೀಕ್ಷಿತವಾಗಿ ಮಳೆ ಬಂದಿದ್ದರಿಂದ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಪರದಾಡಿದರು. ಬೈಕ್, ಸ್ಕೂಟರ್ ಸವಾರರು ರಸ್ತೆ ಬದಿಯಲ್ಲಿ ರಕ್ಷಣೆ ಪಡೆದರು. ಪಾದಚಾರಿಗಳು ಮಳಿಗೆಗಳು, ಬಸ್ ತಂಗುದಾಣಗಳಲ್ಲಿ ಆಶ್ರಯ ಪಡೆದರು. ಕೆಲವು ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ನೀರು ನಿಂತು ಸಂಚಾರ ದಟ್ಟಣೆ ಉಂಟಾಯಿತು. ಕೆಲವು ಕಡೆ ರಾತ್ರಿ 9 ಗಂಟೆಯ ಬಳಿಕ ಧಾರಾಕಾರವಾಗಿ ಮಳೆ ಸುರಿಯಿತು.

ಮುಂಗಾರು ಅವಧಿ ಮುಗಿದಿದ್ದರೂ ದಟ್ಟ ಮೋಡಗಳಿರುವುದರಿಂದ ಇನ್ನೂ ಕೆಲವು ದಿನ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕೆಲವು ದಿನಗಳಿಂದ ತಾಪಮಾನದಲ್ಲಿ ಏರಿಕೆ ಉಂಟಾಗಿತ್ತು. ಮಂಗಳವಾರ ಹಗಲಿನಲ್ಲಿ
ಬಿಸಿಲಿನ ಧಗೆಯೂ ಹೆಚ್ಚಿತ್ತು. ಆದರೆ, ಸಂಜೆಯಾಗುತ್ತಿದ್ದಂತೆ ಸುರಿದ ಮಳೆ ವಾತಾವರಣವನ್ನು ತಂಪು ಮಾಡಿದೆ.

ಎಲ್ಲಿ, ಎಷ್ಟು ಮಳೆ?

ಕೆಂಗೇರಿಯಲ್ಲಿ 30 ಮಿ.ಮೀ., ಸೊಂಡೆಕೊಪ್ಪದಲ್ಲಿ 28 ಮಿ.ಮೀ., ದೊಡ್ಡ ಜಾಲದಲ್ಲಿ 25 ಮಿ.ಮೀ., ಚಾಮರಾಜಪೇಟೆ, ವಿದ್ಯಾಪೀಠದಲ್ಲಿ 22 ಮಿ.ಮೀ., ಜ್ಞಾನಭಾರತಿಯಲ್ಲಿ 21 ಮಿ.ಮೀ., ಬ್ಯಾಟರಾಯನಪುರ, ಕೋಣನಕುಂಟೆಯಲ್ಲಿ 19 ಮಿ.ಮೀ. ಮಳೆ ಸುರಿದಿದೆ.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)