ಶನಿವಾರ, ಜನವರಿ 25, 2020
22 °C

ಜಾತಿ, ಧರ್ಮ ಮೀರಿದ ಸಮಾಜಮುಖಿ ಜಿಎಸ್ಎಸ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಕವಿ ಶಿವರುದ್ರಪ್ಪ ಜಾತಿ, ಧರ್ಮಗಳ ಮೀರಿ ಸಾಮಾಜ ಮುಖಿಯಾಗಿದ್ದರು. ಮೌಢ್ಯದ ಗೋಡೆಗಳನ್ನು ಕೆಡವಿ ಬದುಕು ಪ್ರೀತಿಸಿದರು ಎಂದು ಸಹ್ಯಾದ್ರಿ ಕಾಲೇಜಿನ ಭಾಷಾ ವಿಭಾಗದ ಅಧ್ಯಾಪಕ ಡಾ.ಮಲ್ಲಿಕಾರ್ಜುನ ಮೇಟಿ ಪ್ರತಿಪಾದಿಸಿದರು.

ಪ್ರಥಮ ದರ್ಜೆ ಕಾಲೇಜಿನಲ್ಲಿ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಪ್ರತಿಷ್ಠಾನ, ಕುವೆಂಪು ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಗುರುವಾರ ಜಿ.ಎಸ್.ಎಸ್. ಅವರ ಕಾವ್ಯಗಳ ವಾಚನ, ಗಾಯನ ಹಾಗೂ ವ್ಯಾಖ್ಯಾನ ಕುರಿತು ಆಯೋಜಿಸಿದ್ದ ‘ಬೆಳಕು’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಶಿವರುದ್ರಪ್ಪ ಅವರು ನವೋದಯ ಮತ್ತು ನವ್ಯ ಕಾಲಘಟ್ಟದಲ್ಲಿ ಕಾವ್ಯಗಳನ್ನು ಬರೆದಿದ್ದರೂ, ಅದರ ಆಚೆ ಕಾವ್ಯದ ಬೆಳಕಿನ ಮೂಲಕ ಬದುಕಿನ ಪ್ರೀತಿ ಹೇಳಿದವರು. ಅವರ ಬದುಕು ಮತ್ತು ಬರಹ ಎರಡೂ ಒಂದೇ ರೀತಿ ಇತ್ತು. ಕಾವ್ಯ ರಸಾನುಭಾವ ಅಥವಾ ಉಪಮೆಗಳಿಗೆ ಸೀಮಿತವಾಗಿರಲಿಲ್ಲ. ಅದು ಜನರ ಉದ್ಧಾರಕ್ಕೆ ಬೆಳಕಾಗಿತ್ತು. ಸಾಹಿತ್ಯ ಸಮಾಜಮುಖಿಯಾಗಿತ್ತು. ಬರಹದಂತೆಯೇ ಬಾಳಿದವರು ಎಂದು ಸ್ಮರಿಸಿದರು.

ಅವರ ಕವಿತೆಗಳನ್ನು ಅರ್ಥಮಾಡಿಕೊಂಡರೆ ಅವರ ಬದುಕು ಅರ್ಥಮಾಗುತ್ತದೆ. ಅವರ ಕವಿತೆಗಳಲ್ಲಿ ವಿಸ್ಮಯ ಕಾಣಬಹುದು. ಕಾವ್ಯದ ಶಕ್ತಿ, ಕಾವ್ಯದ ಬೆಳಕಾಗಿದ್ದರು ಎಂದರು.

ಜಿ.ಎಸ್.ಎಸ್.ಪ್ರತಿಷ್ಠಾನದ ಅಧ್ಯಕ್ಷೆ ಪ್ರೊ.ಕಿರಣ್ ದೇಸಾಯಿ ಮಾತನಾಡಿ, ಜಿ.ಎಸ್.ಎಸ್.ಅವರ ಕಾವ್ಯದ ವಿಚಾರಧಾರೆಗಳು, ಆಶಯಗಳು ವಿದ್ಯಾರ್ಥಿಗಳಿಗೆ ದಾರಿದೀಪ. ಹಾಗಾಗಿಯೇ ದತ್ತಿ ಕಾರ್ಯಕ್ರಮಕ್ಕೆ ಬೆಳಕು ಎಂದು ಹೆಸರಿಸಲಾಗಿದೆ. ಅವರು ಹಚ್ಚಿಟ್ಟ ಹಣತೆ. ಅವರ ಕವಿತೆ ಯಾವಾಗಲೂ ಬೆಳಗುತ್ತಲೇ ಇರುತ್ತವೆ ಎಂದರು.

ಕುವೆಂಪು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಡಾ.ಚೆನ್ನೇಶ್ ಹೊನ್ನಾಳಿ ಪ್ರಸ್ತಾವಿಕ ಮಾತನಾಡಿದರು.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಡಿ.ಬಿ.ಶಂಕರಪ್ಪ, ಜಿಎಸ್ಎಸ್ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಈಶ್ವರಪ್ಪ, ಪ್ರಾಂಶುಪಾಲ ಬಿ.ಆರ್.ಧನಂಜಯ, ಪ್ರಾಧ್ಯಾಪಕ ಜಿ.ಬಸವರಾಜು, ಡಾ.ಎಸ್.ಆರ್.ಸೀಮಾ, ರುದ್ರಮುನಿ ಎಸ್.ಸಜ್ಜನ್, ಕರಿಸಿದ್ದಪ್ಪ, ಸೋಮಶೇಖರ್ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)