ಕೆಆರ್‌ಎಸ್‌ನಲ್ಲಿ ಬೃಹತ್‌ ಕಾವೇರಿ ಪ್ರತಿಮೆ

7
360 ಅಡಿ ಮ್ಯೂಸಿಯಂ, 125 ಅಡಿ ಕಾವೇರಿ ಪ್ರತಿಮೆ

ಕೆಆರ್‌ಎಸ್‌ನಲ್ಲಿ ಬೃಹತ್‌ ಕಾವೇರಿ ಪ್ರತಿಮೆ

Published:
Updated:
Deccan Herald

ಬೆಂಗಳೂರು: ವಿಶ್ವವಿಖ್ಯಾತ ಬೃಂದಾವನ ಉದ್ಯಾನದಲ್ಲಿ (ಕೆಆರ್‌ಎಸ್‌) 125 ಅಡಿ ಎತ್ತರದ ಬೃಹತ್‌ ಕಾವೇರಿ ಮಾತೆ ಪ್ರತಿಮೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ.

ಕಾವೇರಿ ಪ್ರತಿಮೆಯ ಜೊತೆಗೆ 360 ಅಡಿ ಎತ್ತರದ ವಸ್ತು ಸಂಗ್ರಹಾಲಯವೂ ನಿರ್ಮಾಣ ಆಗಲಿದೆ. ಈ ಸಮುಚ್ಚಯದಲ್ಲಿ ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್ ಸ್ಟಾಂಡ್, ಒಳಾಂಗಣ ಕ್ರೀಡಾಂಗಣ ಮತ್ತು ಇತಿಹಾಸ ಪರಿಚಯಿಸುವ ಗ್ಯಾಲರಿಯೂ ಇರುತ್ತದೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಲಸಂಪನ್ಮೂಲ ಮತ್ತು ಪ್ರವಾಸೋದ್ಯಮ ಇಲಾಖೆಯ ಉನ್ನತ ಅಧಿಕಾರಿಗಳ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇಡೀ ಪ್ರದೇಶವನ್ನು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲಾಗುವುದು. ಇದಕ್ಕೆ ಒಟ್ಟು ₹ 1,200 ಕೋಟಿ ವೆಚ್ಚ ಆಗಲಿದೆ. ಜಾಗತಿಕ ಟೆಂಡರ್‌ ಮೂಲಕ ವಿಶ್ವ ಮಟ್ಟದ ಸಂಸ್ಥೆಗೆ ಯೋಜನೆಯ ಗುತ್ತಿಗೆ ವಹಿಸಿಕೊಡಲಾಗು ವುದು. ನಿರ್ಮಾಣಕ್ಕೆ ಸರ್ಕಾರ ಜಮೀನು ಬಿಟ್ಟುಕೊಡಲಿದೆ. ಆದರೆ, ಸರ್ಕಾರದಿಂದ ಒಂದು ಪೈಸೆ ಬಂಡವಾಳ ಹೂಡುವುದಿಲ್ಲ ಎಂದು ಡಿ.ಕೆ.ಶಿವಕುಮಾರ್‌ ಸುದ್ದಿಗಾರರಿಗೆ ತಿಳಿಸಿದರು.

‌ಈಗಿರುವ ದೋಣಿ ವಿಹಾರ ಸರೋವರದ ಪಕ್ಕದಲ್ಲೇ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯದಲ್ಲಿ ಮ್ಯೂಸಿಯಂ ಸಮುಚ್ಚಯ ನಿರ್ಮಿಸಲಾಗುವುದು. ಮ್ಯೂಸಿಯಂ ಮೇಲ್ಭಾಗದಲ್ಲಿ ಕಾವೇರಿ ಮಾತೆಯ ಪ್ರತಿಮೆ ನಿಲ್ಲಿಸಲಾಗುವುದು. ಬೃಂದಾವನ ಉದ್ಯಾನದ ಮೂಲ ಸ್ವರೂಪಕ್ಕೆ ಧಕ್ಕೆ ಆಗದಂತೆ ಇದನ್ನು ನಿರ್ಮಿಸುವುದರ ಜೊತೆಗೆ ವಿಶ್ವದ ಅಗ್ರಮಾನ್ಯ ಪ್ರವಾಸಿ ತಾಣವಾಗಿಸಲಾಗುವುದು ಎಂದು ಶಿವಕುಮಾರ್‌ ಹೇಳಿದರು.

2 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಯೋಜನಾ ವರದಿ ಮತ್ತು ಒಪ್ಪಂದದ ಕುರಿತು ಇದೇ 20ರಂದು ಕಾವೇರಿ ನೀರಾವರಿ ನಿಗಮದ ಅಂದಾಜು ಪರಿಶೀಲನಾ ಸಭೆ ಅಂತಿಮಗೊಳಿಸಲಿದೆ. ಬಳಿಕ ಕಾವೇರಿ ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆ, ಸರ್ಕಾರದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಗುವುದು. ಅಂತಿಮವಾಗಿ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಂಡು ಜಾಗತಿಕ ಟೆಂಡರ್‌ ಕರೆಯಲು ತೀರ್ಮಾನಿಸಲಾಯಿತು.

**

₹ 300 ಕೋಟಿ ಆದಾಯ

ಹೊಸ ಯೋಜನೆ ಕಾರ್ಯಗತಗೊಂಡರೆ ವರ್ಷಕ್ಕೆ ₹300 ಕೋಟಿ ಆದಾಯ ಸಿಗಲಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ₹ 30 ಕೋಟಿ ಆದಾಯ ಬರಲಿದೆ. ಈಗ ಕೆಆರ್‌ಎಸ್‌ನಿಂದ ಸರ್ಕಾರಕ್ಕೆ ಬರುತ್ತಿರುವ ಆದಾಯ ₹ 6 ಕೋಟಿ.

**
ಮುಖ್ಯಾಂಶಗಳು
* ಜೈಪುರದ ಸಿನ್ಸಿಯರ್ ಆರ್ಕಿಟೆಕ್ಟ್ ಕನ್ಸಲ್ಟೆಂಟ್‌ನಿಂದ ಯೋಜನೆ ಪ್ರಾತ್ಯಕ್ಷಿಕೆ

* ಯೋಜನೆ ಅನುಷ್ಠಾನಕ್ಕೆ ಜಾಗತಿಕ ಟೆಂಡರ್‌

* ವಿಶ್ವದ ಪ್ರವಾಸಿಗರನ್ನು ಸೆಳೆಯಲು ಹೊಸ ಆಕರ್ಷಣೆ

 

Tags: 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !