ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಯ ಹೆಸರು ಹೇಳದೆಯೇ ಮತ ಯಾಚಿಸಿದ ಸತೀಶ್‌ ರೆಡ್ಡಿ

Last Updated 31 ಮಾರ್ಚ್ 2019, 20:16 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿರುವ ಅಭ್ಯರ್ಥಿ ತೇಜಸ್ವಿ ಸೂರ್ಯ ಅವರ ಹೆಸರನ್ನು ಉಲ್ಲೇಖಿಸದೆಯೇ ಬೊಮ್ಮನಹಳ್ಳಿಯ ಶಾಸಕ ಸತೀಶ್‌ ರೆಡ್ಡಿ ಭಾನುವಾರ ಮತಯಾಚನೆ ಮಾಡಿದರು.

‘ಈ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ನಗಣ್ಯ. ಮೋದಿ ಮತ್ತು ಯಡಿಯೂರಪ್ಪ ಅವರೇ ನಮ್ಮ ಅಭ್ಯರ್ಥಿ. ಅವರೇ ನಮ್ಮ ಜೋಡೆತ್ತುಗಳು ಎಂದು ಭಾವಿಸಿ ಕೆಲಸ ಮಾಡೋಣ’ ಎಂದು ಸತೀಶ್‌ ರೆಡ್ಡಿ ಹೇಳಿದರು.

‘ಅನಂತಕುಮಾರ್ ಅವರ ಅಗಲುವಿಕೆಯ ನೋವು ಇನ್ನೂ ಮಾಸಿಲ್ಲ. ಅವರ ಸ್ಥಾನ ತುಂಬುವ ವಿಚಾರದಲ್ಲಿ ಪಕ್ಷದಲ್ಲಿ ಕೆಲವು ಗೊಂದಲಗಳು ಉಂಟಾಗಿರುವುದು ನಿಜ. ಅದೇನೇ ಇರಲಿ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅನಂತ ಕುಮಾರ್‌ ಅವರಿಗೆ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಸಿಕ್ಕಿತ್ತು. ಈಗ ಮೋದಿ ಅವರೇ ಅಭ್ಯರ್ಥಿಯಾಗಿದ್ದಾರೆ ಎಂದು ಭಾವಿಸಿ ಅದಕ್ಕಿಂತ ಹೆಚ್ಚಿನ ಮುನ್ನಡೆ ನೀಡಿ’ ಎಂದು ಮತದಾರರಲ್ಲಿ ಮನವಿ ಮಾಡಿದರು.

‘ನಾವು ಏಕಾಏಕಿ ತೇಜಸ್ವಿನಿ ಅನಂತಕುಮಾರ್‌ ಅವರ ಕೈಬಿಡಲು ಆಗಲ್ಲ. ಅವರಿಗೆ ರಾಷ್ಟ್ರಮಟ್ಟದಲ್ಲಿ ಒಳ್ಳೆಯ ಸ್ಥಾನ ಸಿಗಬೇಕು’ ಎಂದು ಆಶಿಸಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ,‘ಯುವಕರಾಗಿರುವ ತೇಜಸ್ವಿ ಸೂರ್ಯ ಅವರಲ್ಲಿ ಪ್ರಾಮಾಣಿಕತೆ ಮತ್ತು ಕಳಕಳಿಯ ಗುಣಗಳಿವೆ. ಅವರನ್ನು ತಪ್ಪದೇ ಚುನಾಯಿಸಿ’ ಎಂದು ಮನವಿ ಮಾಡಿದರು.

ಪ್ರಚಾರಕ್ಕೆ ಆರ್‌.ಅಶೋಕ ಗೈರು ಕುರಿತ ಪ್ರಶ್ನೆಗೆ, ‘ಯಾರು ಬಂದರು, ಯಾರು ಗೈರಾದರು ಎನ್ನುವುದು ಮುಖ್ಯವಲ್ಲ. ಮೋದಿ ಅವರಿಗಾಗಿ ಎಲ್ಲರೂ ಮತ ಹಾಕಿದರೆ, ಬಿಎಸ್‌ವೈಗೆ ಮತ ಹಾಕಿದಂತೆ. ಬಿಎಸ್‌ವೈಗೆ ಮತ ಹಾಕಿದರೆ ತೇಜಸ್ವಿ ಸೂರ್ಯಗೆ ಮತ ಹಾಕಿದಂತೆ’ ಎಂದು ಪ್ರತಿಕ್ರಿಯಿಸಿದರು.

‘ಆರ್‌.ಅಶೋಕ ಮತ್ತು ತೇಜಸ್ವಿ ಅವರಿಗೆ ಪೂರ್ವ ನಿಗದಿತ ಕಾರ್ಯಕ್ರಮ ಇದ್ದರಿಂದ ಪ್ರಚಾರಕ್ಕೆ ಬರಲು ಆಗಿಲ್ಲ’ ಎಂದು ಸ್ಥಳೀಯ ಮುಖಂಡರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT