ಸೋಮವಾರ, ಮಾರ್ಚ್ 1, 2021
30 °C

ಅನುದಾನ ವಿಷಯದಲ್ಲಿ ಸಿ.ಎಂ ರಾಜಕಾರಣ: ಸಿ.ಟಿ. ರವಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ‘ಕೇಂದ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ದೂರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಅನುದಾನ ವಿಷಯದಲ್ಲಿ ರಾಜಕಾರಣ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ. ದೂರಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ತಮ್ಮ ಕುರ್ಚಿ ಉಳಿಸಿಕೊಳ್ಳಲು, ಹಿಂದಿನ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರಗಳ ಕುರಿತು ಮುಖ್ಯಮಂತ್ರಿ ಮೌನ ವಹಿಸುತ್ತಿದ್ದಾರೆ’ ಎಂದರು.

‘ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ₹ 35 ಸಾವಿರ ಕೋಟಿ ಲೆಕ್ಕಕ್ಕೇ ಸಿಕ್ಕಿಲ್ಲ ಎಂಬ ಸಿಎಜಿ ವರದಿಯನ್ನು ಪಕ್ಷದ ನಾಯಕರಾದ ಎನ್. ರವಿಕುಮಾರ್ ಪ್ರಕಟಿಸಿದ್ದಾರೆ. ಕೇಂದ್ರದಿಂದ ಅನುದಾನ ಬಂದಿರುವ ಮಾಹಿತಿಯನ್ನು ಕೊಡಗು-ಮೈಸೂರು ಸಂಸದರು ನೀಡಿದ್ದಾರೆ. ಸಿಎಜಿ ವರದಿ ಕುರಿತು ಸಿದ್ದರಾಮಯ್ಯ ಉಡಾಫೆಯಿಂದ ಉತ್ತರಿಸಿದರೆ, ಸಂಸದರ ಮಾತಿಗೆ ಮುಖ್ಯಮಂತ್ರಿ ಸಿಡಿಮಿಡಿಗೊಂಡಿದ್ದಾರೆ’ ಎಂದರು.

‘ತಮ್ಮ ಮೇಲಿನ ಆರೋಪಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಜೆಟ್ ಗಾತ್ರ ಹೆಚ್ಚಿದಾಗ ವ್ಯತ್ಯಾಸ ಆಗುವುದು ಸ್ವಾಭಾವಿಕ ಎಂದಿದ್ದಾರೆ. 13 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯ, ಜನರ ತೆರಿಗೆ ಹಣಕ್ಕೆ ಲೆಕ್ಕ ನೀಡುವ ಅವಶ್ಯಕತೆ ಇಲ್ಲ ಎಂದೂ ಹೇಳಿದ್ದಾರೆ. ಬಜೆಟ್ ಅಂದಾಜು ಮತ್ತು ಖರ್ಚಿನ ನಡುವೆ ಲೆಕ್ಕಕ್ಕೆ ಸಿಗದ ಹಣದ ಮಾಹಿತಿ ಪತ್ತೆಗೆ ಸದನ ಸಮಿತಿ ರಚಿಸಬೇಕು’ ಎಂದು ರವಿ ಆಗ್ರಹಿಸಿದರು.

‘ಸರ್ಕಾರ ನಡೆಸಲು ಕಾಂಗ್ರೆಸ್‌ ಅವಕಾಶ ನೀಡಿದೆ ಎಂಬ ಕಾರಣಕ್ಕೆ ಆ ಪಕ್ಷದ ಭ್ರಷ್ಟಾಚಾರಗಳ ಬಗ್ಗೆ ಮುಖ್ಯಮಂತ್ರಿ ಮೌನ ವಹಿಸಿದ್ದಾರೆ. ನೈಸ್ ಹಗರಣದ ಸಂತ್ರಸ್ತರಿಗೆ ನ್ಯಾಯ ಒದಗಿಸುತ್ತೇನೆ ಎಂದಿದ್ದ ಮುಖ್ಯಮಂತ್ರಿ ಈಗ ಏನೂ ಮಾಡುತ್ತಿಲ್ಲ. ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧವೂ ಕ್ರಮ ಕೈಗೊಳ್ಳದೆ ಸುಮ್ಮನಿದ್ದಾರೆ’ ಎಂದು ದೂರಿದರು.

ನಾನು ಆಕಾಂಕ್ಷಿ ಅಲ್ಲ: ಹಾಸನದಿಂದ ಲೋಕಸಭೆ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ರವಿ, ‘ನಾನು ಆಕಾಂಕ್ಷಿ ಅಲ್ಲ, ಅಭ್ಯರ್ಥಿಯೂ ಅಲ್ಲ. ಯಾರು ಎಲ್ಲಿಂದ ಸ್ಪರ್ಧಿಸಬೇಕು ಎಂಬುದನ್ನು ಕೇಂದ್ರ ಸಂಸದೀಯ ಮಂಡಳಿ ತೀರ್ಮಾನಿಸುತ್ತದೆ. ಆದರೆ, ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷ ಹೇಳಿದ್ದನ್ನು ಕೇಳುತ್ತೇನೆ’ ಎಂದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು