ಶನಿವಾರ, ಜನವರಿ 25, 2020
16 °C
ತುಮಕೂರಿನಲ್ಲಿ ನಿಷೇದಾಜ್ಞೆ ನಡುವೆಯೂ ಪ್ರತಿಭಟನೆಗೆ ಯತ್ನ, ಗುಂಪು ಚದುರಿಸಿದ ಪೊಲೀಸರು

ಪ್ರತಿಭಟಿಸುವ ಹಕ್ಕು ಕಿತ್ತುಕೊಂಡ ಸರ್ಕಾರ: ಆಕ್ರೋಶ

ಪ್ರಜಾವಾಣಿ ವಾರ್ತೆ: Updated:

ಅಕ್ಷರ ಗಾತ್ರ : | |

Prajavani

ತುಮಕೂರು: ಪೌರತ್ವ(ತಿದ್ದುಪಡಿ) ಕಾಯ್ದೆ ವಿರೋಧಿಸಿ ಮುಸ್ಲಿಂ ಸಮುದಾಯ ಹಾಗೂ ಪ್ರಗತಿಪರ ಸಂಘಟಗಳು ತುಮಕೂರಿನಲ್ಲಿ ನಿಷೇದಾಜ್ಞೆ ನಡುವೆಯೂ ಪ್ರತಿಭಟನೆಗೆ ಯತ್ನಿಸಿದ್ದು, ಪೊಲೀಸರು ಪ್ರತಿಭಟನೆಗೆ ಅವಕಾಶ ನೀಡದೇ ಗುಂಪನ್ನು ಚದುರಿಸಿದರು.

ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆಗೆ ಅವಕಾಶ ನೀಡದ ಕಾರಣ ಕೆಲಕಾಲ ಪೊಲೀಸು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭದಲ್ಲಿ ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿ, ‘ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ(ತಿದ್ದುಪಡಿ) ಕಾಯ್ದೆ ವಿರೋಧಿಸಿ ಪ್ರಗತಿಪರ, ದಲಿತ, ಎಡಪಕ್ಷಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುತ್ತಿದೆ’ ಎಂದು ಹೋರಾಟಗಾರರು ಆರೋಪಿಸಿದರು.

ಭಯಭೀತ ವಾತಾವರಣ: ರಾಜ್ಯ ಸರ್ಕಾರವು ನಮ್ಮ ಪ್ರತಿಭಟನೆ ಹತ್ತಿಕ್ಕುವುದಕ್ಕಾಗಿ ತಡ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪ್ರತಿಭಟನಾಕಾರರನ್ನು ಭಯಭೀತಿಗೊಳಿಸುವಂತಹ ವಾತಾವರಣವನ್ನು ಜಿಲ್ಲಾಡಳಿತ ಹಾಗೂ ಪೊಲೀಸರು ಕೈಗೊಂಡಿದ್ದಾರೆ’ ಎಂದು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾ ಅಧ್ಯಕ್ಷ ಅತೀಕ್ ಅಹಮದ್ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಜನವಿರೋಧಿ ಕಾಯ್ದೆಯನ್ನು ಸಂವಿಧಾನಾತ್ಮಕವಾಗಿ ಪ್ರತಿಭಟಿಸುವ ಹಕ್ಕನ್ನು ರಾಜ್ಯ ಸರ್ಕಾರ ಕಿತ್ತುಕೊಂಡಿದೆ. ಪ್ರತಿಭಟನೆಗೆ ಜನರು ಸೇರದಂತೆ ಪೊಲೀಸರು ಮಾಡಿರುವುದು ಸರಿಯಲ್ಲ. ಇದೀಗ ನಾವು ಕಾನೂನಿಗೆ ಗೌರವ ಕೊಟ್ಟು ಪ್ರತಿಭಟನೆ ಹಿಂಪಡೆದಿದ್ದೇವೆ. ಮುಂದೆಯೂ ಹೀಗೆ ಆದರೆ ಸಹಿಸುವುದಿಲ್ಲ. ಪೌರತ್ವ ಕಾಯ್ದೆ ವಿರೋಧಿಸಿ ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳುವ ಪ್ರತಿಭಟನೆಗೆ ಜಿಲ್ಲಾಡಳಿತ ಅವಕಾಶ ನೀಡಬೇಕು’ ಎಂದು ಆಗ್ರಹಿಸಿದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ‘ಪೊಲೀಸರು ಸಂವಿಧಾನಾತ್ಮಕವಾಗಿ ನೀಡಿರುವ ಪ್ರತಿಭಟಿಸುವ ಹಕ್ಕನ್ನು ಕಿತ್ತುಕೊಳ್ಳುತ್ತಿರುವುದು ಸರಿಯಲ್ಲ, ಕಾನೂನು ಉಲ್ಲಂಘಿಸಿ ಪ್ರತಿಭಟಿಸುವವರ ಮೇಲೆ ಕ್ರಮ ಕೈಗೊಳ್ಳದವರು, ಕಾನೂನು ಗೌರವಿಸುವವರನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ’ ಎಂದು ಆಕ್ಷೇಪಿಸಿದರು.

ಹೋರಾಟಗಾರ ಗಿರೀಶ್ ಮಾತನಾಡಿ, ‘ಕೇಂದ್ರ ಸರ್ಕಾರದ ಗುಲಾಮನಂತೆ ರಾಜ್ಯ ಸರ್ಕಾರ ವರ್ತಿಸುತ್ತಿದೆ. ಇದು ಸರಿಯಲ್ಲ, ಪ್ರತಿಭಟನೆಯನ್ನು ಹತ್ತಿಕ್ಕುವ ಮೂಲಕ ಸಂವಿಧಾನದ ಹಕ್ಕು ಕಿತ್ತುಕೊಳ್ಳುತ್ತಿರುವುದು ಖಂಡನೀಯ’ ಎಂದರು. ಪ್ರಮುಖರಾದ ದೊರೈರಾಜು, ತಾಜುದ್ದೀನ್ ಷರೀಫ್, ಎ.ನರಸಿಂಹಮೂರ್ತಿ, ಕಂಬೇಗೌಡ, ಪಿ.ಎನ್.ರಾಮಯ್ಯ, ಬುರ್ಹಾನ್, ಸೈಯದ್ ಮುದಾಸೀರ್, ಬಿ.ಉಮೇಶ್, ಸುಬ್ರಮಣ್ಯ ಮತ್ತಿತರರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು