ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಅಂದಾಜು ₹38 ಕೋಟಿ ವೆಚ್ಚದ ಯೋಜನೆ: ನಾಲ್ಕು ಪ್ಲಾಟ್‌ಫಾರ್ಮ್ ನಿರ್ಮಾಣ

ಕಂಟೋನ್ಮೆಂಟ್‌ ಉಪನಗರ ರೈಲುಗಳ ಟರ್ಮಿನಲ್‌ಗೆ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಂಟೋನ್ಮೆಂಟ್ ರೈಲು ನಿಲ್ದಾಣವನ್ನು ಉಪನಗರ ರೈಲುಗಳ ಟರ್ಮಿನಲ್‌ ನಿಲ್ದಾಣವಾಗಿ ಮಾರ್ಪಡಿಸುವ ಯೋಜನೆಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.

ಮುಂಬೈನ ಚರ್ಚ್‌ಗೇಟ್ ರೈಲು ನಿಲ್ದಾಣದ ಮಾದರಿಯಲ್ಲಿ ಅಂದಾಜು ₹38 ಕೋಟಿ ವೆಚ್ಚದಲ್ಲಿ ಟರ್ಮಿನಲ್ ನಿರ್ಮಾಣ ಮಾಡುವ ಸಂಬಂಧ ರೈಲ್ವೆ ಇಲಾಖೆ ಬೆಂಗಳೂರು ವಿಭಾಗದ ಅಧಿಕಾರಿಗಳು ಯೋಜನೆ ಸಿದ್ಧಪಡಿಸಿ 2017ರ ನವೆಂಬರ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದರು. 

‘ಈ ಯೋಜನೆಗೆ ಅನುಮೋದನೆ ದೊರೆತಿದೆ. ವಿಸ್ತೃತ ಕಾರ್ಯಸಾಧ್ಯತಾ ವರದಿ ಸಿದ್ಧಪಡಿಸಿದ ನಂತರ ಟೆಂಡರ್ ಕರೆಯಲಾಗುವುದು’ ಎಂದು ನೈರುತ್ಯ ರೈಲ್ವೆಯ ಮುಖ್ಯ ಆಡಳಿತಾಧಿಕಾರಿ ಕೆ.ಸಿ. ಸ್ವಾಮಿ ತಿಳಿಸಿದರು.

ಒಂದು ವರ್ಷದಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಬಹುದು. ಯೋಜನೆ ಪ್ರಕಾರ, ನಿಲ್ದಾಣದ ದಕ್ಷಿಣ ಭಾಗದಲ್ಲಿ ನಾಲ್ಕು ಪ್ಲಾಟ್‌ಫಾರ್ಮ್ ನಿರ್ಮಾಣ ವಾಗಲಿವೆ. ವೈಟ್‌ಫೀಲ್ಡ್‌, ಹೊಸೂರು, ಬಂಗಾರಪೇಟೆ ಮತ್ತು ಮಾರಿಕುಪ್ಪಂಗೆ ಹೋಗುವ ರೈಲುಗಳಿಗಾಗಿ ಈ ಪ್ಲಾಟ್‌ಫಾರ್ಮ್ ಬಳಕೆಯಾಗಲಿದೆ ಎಂದರು.

ಬೆಂಗಳೂರು ಪೂರ್ವದ ಉಪನಗರಗಳಿಗೆ ಸಂಪರ್ಕ ಕಲ್ಪಿಸುವ ಈ ಯೋಜನೆ ಲಕ್ಷಾಂತರ ಮಂದಿಗೆ ಅನುಕೂಲವಾಗಲಿದೆ.  ಈ ನಾಲ್ಕು ಪ್ಲಾಟ್‌ಫಾರ್ಮ್‌ಗಳನ್ನು ಸ್ಥಳೀಯ ರೈಲುಗಳಿಗಾಗಿಯೇ ಮೀಸಲಿಡಲಾಗುವುದು. ಕನಿಷ್ಠ 10 ರೈಲುಗಳನ್ನು ಈ ಮಾರ್ಗದಲ್ಲಿ ಸಂಚರಿಸುವಂತೆ ಮಾಡಬಹುದು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮೆಟ್ರೊ ಸಂಪರ್ಕ

ಪ್ರಸ್ತಾವಿತ ಟರ್ಮಿನಲ್ ನಿಲ್ದಾಣಕ್ಕೆ ಮೆಟ್ರೊ ರೈಲಿನ ಸಂಪರ್ಕವೂ ದೊರೆಯಲಿದೆ.

ಶಿವಾಜಿನಗರ– ಟ್ಯಾನರಿ ರಸ್ತೆಗೆ ಸಂಪರ್ಕ ಕಲ್ಪಿಸಲಿರುವ ಮೆಟ್ರೊ ಈ ಮಾರ್ಗದಲ್ಲೇ ಹಾದು ಹೋಗಲಿದೆ. ಟರ್ಮಿನಲ್‌ ಬಳಿ ಮೆಟ್ರೊ ನಿಲ್ದಾಣ ತಲೆ ಎತ್ತಲಿದ್ದು, ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು