ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ದಂಪತಿ ಮಗು ಅಪಹರಿಸಿದ ಮಹಿಳೆ

ಮೆಜೆಸ್ಟಿಕ್ ಬಸ್‌ ನಿಲ್ದಾಣದಲ್ಲಿ ಘಟನೆ l ನೀರು ಕುಡಿಸುವ ನೆಪದಲ್ಲಿ ಕೃತ್ಯ
Last Updated 30 ಏಪ್ರಿಲ್ 2019, 1:41 IST
ಅಕ್ಷರ ಗಾತ್ರ

ಬೆಂಗಳೂರು: ಅವರಿಬ್ಬರು ಅಂಧರು. ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಅವರಿಗೆ ಎಂಟು ತಿಂಗಳ ಮುದ್ದಾದ ಗಂಡು ಮಗುವಿತ್ತು. ಅದರ ಜೊತೆ ಆಟವಾಡುತ್ತ ಖುಷಿ ಖುಷಿಯಾಗಿ ಬದುಕು ಸಾಗಿಸುತ್ತಿದ್ದರು. ಆದರೆ, ಸಂಬಂಧಿಕರೊಬ್ಬರನ್ನು ಭೇಟಿಯಾಗಲೆಂದು ಬೆಂಗಳೂರಿಗೆ ಬಂದಿದ್ದ ದಂಪತಿಯ ಮಗುವನ್ನು ಮಹಿಳೆಯೊಬ್ಬಳು ಅಪಹರಿಸಿದ್ದಾಳೆ.

ರಾಯಚೂರಿನಿಂದ ನಗರಕ್ಕೆ ಬಂದಿದ್ದ ಬಸವರಾಜು ಹಾಗೂ ಬಿ.ಕೆ. ಚಿನ್ನು ದಂಪತಿಯ ಮಗು ಸಾಗರ್‌ನನ್ನು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲೇ ಮಹಿಳೆಯೊಬ್ಬಳು ಅಪಹರಿಸಿಕೊಂಡು ಹೋಗಿದ್ದು, ಆ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ದೇವದುರ್ಗ ತಾಲ್ಲೂಕಿನ ಅರಕೆರೆ ಗ್ರಾಮದ ದಂಪತಿಯ ಸಂಬಂಧಿ ಚನ್ನಬಸವ ಎಂಬುವರು ಬೆಂಗಳೂರಿನಲ್ಲಿ ವಾಸವಿದ್ದಾರೆ. ಅವರನ್ನು ಭೇಟಿಯಾಗಲೆಂದು ದಂಪತಿಯು ಮಗುವಿನ ಸಮೇತ ಬಸ್ಸಿನಲ್ಲಿ ಏಪ್ರಿಲ್ 27ರಂದು ಬೆಳಿಗ್ಗೆ ಮೆಜೆಸ್ಟಿಕ್‌ನ ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಬಂದಿಳಿದಿದ್ದರು’ ಎಂದು ಪೊಲೀಸರು ಹೇಳಿದರು.

‘ನಿಲ್ದಾಣದ ಶೌಚಾಲಯದಲ್ಲಿ ನಿತ್ಯ ಕರ್ಮಗಳನ್ನು ಮುಗಿಸಿದ್ದ ದಂಪತಿ, ಸಂಬಂಧಿಯ ಮನೆಗೆ ಬಸ್ಸಿನಲ್ಲಿ ಹೋಗುವುದಕ್ಕಾಗಿ ಬಿಎಂಟಿಸಿ ನಿಲ್ದಾಣದ ಫ್ಲಾಟ್‌ ಫಾರಂ ನಂ. 19ರಲ್ಲಿ ಕುಳಿತುಕೊಂಡಿದ್ದರು. ಅದೇ ವೇಳೆ ಮಗು ಅಳಲಾರಂಭಿಸಿತ್ತು. ಆಗ ತಾಯಿ ಚಿನ್ನು, ಮಗುವನ್ನು ಎತ್ತಿಕೊಂಡು ನೀರು ಕುಡಿಸಲು ಸಣ್ಣ ಟ್ಯಾಂಕ್‌ ಬಳಿ ಹೋಗಿದ್ದರು.’

‘ಅಂಧರಾಗಿದ್ದ ಚಿನ್ನು ಅವರು ಮಗುವಿಗೆ ನೀರು ಕುಡಿಸಲು ಕಷ್ಟಪಡುತ್ತಿದ್ದರು. ಅದೇ ವೇಳೆ ಸ್ಥಳದಲ್ಲಿದ್ದ ಅಪರಿಚಿತ ಮಹಿಳೆ, ‘ಮಗುವಿಗೆ ನೀರು ಕುಡಿಸುತ್ತೇನೆ. ನನ್ನ ಕೈಗೆ ಕೊಡಿ’ ಎಂದು ಹೇಳಿ ಮಗುವನ್ನು ಎತ್ತಿಕೊಂಡಿದ್ದರು’ ಎಂದು ಪೊಲೀಸರು ವಿವರಿಸಿದರು.

‘ಕೆಲ ನಿಮಿಷಗಳ ಬಳಿಕ ಮಗುವನ್ನು ವಾಪಸ್‌ ಕೊಡುವಂತೆ ಚಿನ್ನು ಕೇಳಿದ್ದರು. ಆದರೆ, ಯಾವುದೇ ಉತ್ತರ ಬಂದಿರಲಿಲ್ಲ. ಅಕ್ಕ–ಪಕ್ಕದಲ್ಲಿ ಕೈಯಾಡಿಸಿದಾಗ ಮಗು ಹಾಗೂ ಮಹಿಳೆ ಇಬ್ಬರೂ ಇರಲಿಲ್ಲ. ಗಾಬರಿಗೊಂಡ ದಂಪತಿ, ‘ಮಗು... ಮಗು...’ ಎಂದು ನಿಲ್ದಾಣದಲ್ಲೆಲ್ಲ ಚೀರಾಡುತ್ತ ಹುಡುಕಾಡಿದರೂ ಪ್ರಯೋಜನವಾಗಿರಲಿಲ್ಲ’ ಎಂದು ಪೊಲೀಸರು ಹೇಳಿದರು.

‘ಜೀವ ಕೊಡಿ’ ಎಂದು ಕಣ್ಣೀರು: ‘ಮಗುವನ್ನು ಕಳೆದುಕೊಂಡು ಕಂಗಾಲಾದ ದಂಪತಿ, ಉಪ್ಪಾರಪೇಟೆ ಠಾಣೆಗೆ ಹೋಗಿ ಪೊಲೀಸರಿಗೆ ವಿಷಯ ತಿಳಿಸಿದರು. ‘ಸಾಗರ್‌, ನಮ್ಮಿಬ್ಬರ ಜೀವ. ಅದನ್ನು ನಮಗೆ ಹುಡುಕಿಕೊಡಿ’ ಎಂದು ಕಣ್ಣೀರಿಟ್ಟರು.

‘ಮೂವರು ಒಟ್ಟಿಗೇ ಬೆಂಗಳೂರಿಗೆ ಬಂದಿದ್ದೆವು. ಈಗ, ಸಾಗರ್ ನಮ್ಮ ಜೊತೆಗಿಲ್ಲ. ಆತನನ್ನು ಹುಡುಕಿಕೊಟ್ಟರೆ ಊರಿಗೆ ಹೋಗುತ್ತೇವೆ. ಎಂದಿಗೂ ಬೆಂಗಳೂರಿನತ್ತ ಮುಖ ಮಾಡುವುದಿಲ್ಲ’ ಎಂದು ಗೋಗರೆದರು. ಅವರ ನೋವಿಗೆ ಸ್ಪಂದಿಸಿದ ಪೊಲೀಸರು, ‘ಆದಷ್ಟು ಬೇಗನೇ ಮಗುವನ್ನು ಪತ್ತೆ ಮಾಡುತ್ತೇವೆ’ ಎಂದು ಭರವಸೆ ನೀಡಿ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT