ಇಂದಿರಾ ಕ್ಯಾಂಟೀನ್‌: ಸಿಗಲಿದೆ ಬಿಸಿ ಬಿಸಿ ಚಹಾ, ಕಾಫಿ

ಗುರುವಾರ , ಜೂಲೈ 18, 2019
28 °C
ಮೆನು ಆಕರ್ಷಕಗೊಳಿಸಲು ಪಾಲಿಕೆ ಕ್ರಮ

ಇಂದಿರಾ ಕ್ಯಾಂಟೀನ್‌: ಸಿಗಲಿದೆ ಬಿಸಿ ಬಿಸಿ ಚಹಾ, ಕಾಫಿ

Published:
Updated:
Prajavani

ಬೆಂಗಳೂರು: ಇಂದಿರಾ ಕ್ಯಾಂಟೀನ್‌ನಲ್ಲಿ ಇದುವರೆಗೆ ಊಟ ಹಾಗೂ ಉಪಾಹಾರವನ್ನು ಮಾತ್ರ ನೀಡಲಾಗುತ್ತಿತ್ತು. ಆಗಸ್ಟ್‌ ತಿಂಗಳಿನಿಂದ ಮೆನು ಬದಲಾಗಲಿದೆ. ಇನ್ನು ಉಪಾಹಾರದ ಜೊತೆ ಬಿಸಿ ಬಿಸಿ ಕಾಫಿ ಅಥವಾ ಚಹಾವನ್ನೂ ಸವಿಯಬಹುದು.

‘ಇಂದಿರಾ ಕ್ಯಾಂಟೀನ್‌ಗಳಿಗೆ ಊಟ ಪೂರೈಸುವ ಈಗಿನ ಟೆಂಡರ್‌ ಅವಧಿ ಆಗಸ್ಟ್‌ 11ಕ್ಕೆ ಮುಕ್ತಾಯವಾಗಲಿದೆ. ಜನರು ಏನು ಸಲಹೆ ನೀಡಿದ್ದಾರೆ, ಅವರು ಏನು ಬದಲಾವಣೆ ಬಯಸುತ್ತಾರೆ ಎಂಬುದನ್ನು ನೋಡಿಕೊಂಡು ಹೊಸ ಟೆಂಡರ್‌ ನೀಡುವ ವೇಳೆ ಕೆಲವೊಂದು ಹೊಸ ತಿನಿಸುಗಳನ್ನು ಸೇರ್ಪಡೆ ಮಾಡಲಿದ್ದೇವೆ’ ಎಂದು ಪಾಲಿಕೆ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕ್ಯಾಂಟೀನ್‌ನಲ್ಲಿ ಚಹಾ ಮತ್ತು ಕಾಫಿ ನೀಡುವಂತೆ ಬೇಡಿಕೆ ಬಂದಿತ್ತು. ಹೊಸ ಟೆಂಡರ್‌ನಲ್ಲಿ ಇದನ್ನು ಸೇರ್ಪಡೆಗೊಳಿಸಲಿದ್ದೇವೆ. ಜತೆಗೆ ಮಂಗಳೂರು ಬನ್ಸ್‌, ಬ್ರೆಡ್‌ ಜಾಮ್‌, ದಿನ ಬಿಟ್ಟು ದಿನ ಚಪಾತಿ ನೀಡುವ ಪ್ರಸ್ತಾವವೂ ಇದೆ. ಜೊತೆಗೆ ರಾಗಿಮುದ್ದೆ ಹಾಗೂ ಸಾರು ಕೂಡಾ ಲಭ್ಯ ಇರಲಿದೆ’ ಎಂದು ಅವರು ತಿಳಿಸಿದರು.

‘ಹೊಸ ತಿನಿಸುಗಳಿಗೆ ದರ ನಿಗದಿಪಡಿಸುವ ಕುರಿತು ಚರ್ಚೆ ನಡೆದಿದೆ. ಸಾಧ್ಯವಾದಷ್ಟು ಈಗಿನ ದರವನ್ನೇ ಮುಂದುವರಿಸಲು
ಪ್ರಯತ್ನಿಸುತ್ತೇವೆ. ಮುಂದಿನ ವಾರವೇ ಹೊಸ ಟೆಂಡರ್‌ ಆಹ್ವಾನಿಸಲಿದ್ದೇವೆ’ ಎಂದರು.

‘ಇಂದಿರಾ ಕ್ಯಾಂಟೀನ್‌ಗಳಲ್ಲಿ ಅಡುಗೆಗೆ ಬಳಸುವ ಪದಾರ್ಥಗಳ ಗುಣಮಟ್ಟದ ಬಗ್ಗೆ ಬಹಳ ಕಾಳಜಿ ವಹಿಸುತ್ತೇವೆ. ವಿವಿಧ ಹಂತಗಳಲ್ಲಿ ಅದನ್ನು ಪರಿಶೀಲಿಸಲಾಗುತ್ತದೆ. ಗುಣಮಟ್ಟದಲ್ಲಿ ಲೋಪ ಕಂಡುಬಂದರೆ ಅಂತಹ ಪದಾರ್ಥಗಳನ್ನು ಹಿಂದಕ್ಕೆ ಕಳುಹಿಸಲಾಗುತ್ತದೆ. ಕ್ಯಾಂಟೀನ್‌ಗೆ ಪೂರೈಕೆ ಆಗುವ ಆಹಾರವನ್ನು ಹಾಗೂ ಅಡುಗೆಗೆ ಬಳಸುವ ಸಾಮಗ್ರಿಗಳನ್ನು ಮಾರ್ಷಲ್‌ಗಳೂ ಪರಿಶೀಲಿಸುತ್ತಾರೆ’ ಎಂದರು.

‘ಕಿಚನ್‌ನಲ್ಲಿ ಇದ್ದದ್ದು ಬಿಸಾಡಲು ಇಟ್ಟಿದ್ದ ತರಕಾರಿ’

ಬೊಮ್ಮನಹಳ್ಳಿ ವಲಯದ ಇಂದಿರಾ ಅಡುಗೆಮನೆಯಲ್ಲಿ ಕೊಳೆತ ತರಕಾರಿ ಪತ್ತೆಯಾಗಿದೆ ಎಂಬ ಆರೋಪ ಬಗ್ಗೆ ಪ್ರತಿಕ್ರಿಯಿಸಿದ ಆಯುಕ್ತರು, ‘ಬಿಸಾಡಲು ಇಟ್ಟಿದ್ದ ಕೊಳೆತ ತರಕಾರಿ ಹಾಗೂ ಅಕ್ಕಿಯನ್ನು ಬಳಸಿ ವಿಡಿಯೊ ಮಾಡಿದ್ದಾರೆ. ಆ ವಿಡಿಯೊ ಬಳಸಿ ಕೊಳೆತ ತರಕಾರಿಯನ್ನು ಅಡುಗೆಗೆ ಬಳಸಲಾಗುತ್ತಿದೆ ಎಂದು ಬಿಂಬಿಸಲಾಗಿದೆ’ ಎಂದರು.

ಈ ಆರೋಪ ವ್ಯಕ್ತವಾದ ಬಳಿಕ ಪಾಲಿಕೆ ಅಧಿಕಾರಿಗಳು ಇಂದಿರಾ ಕಿಚನ್‌ಗಳಿಗೆ ಹಾಗೂ ಕೆಲವು ಕ್ಯಾಂಟೀನ್‌ಗಳಿಗೆ ದಿಢೀರ್‌ ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

‘ಯಾವುದೇ ಅಡುಗೆಮನೆಯಲ್ಲೂ ಆಹಾರ ತಯಾರಿಸಲು ಬಳಸುವ ಸಾಮಗ್ರಿಗಳ ಗುಣಮಟ್ಟದಲ್ಲಿ ಯಾವುದೇ ಲೋಪ ಕಂಡುಬಂದಿಲ್ಲ. ಇಂದಿರಾ ಕ್ಯಾಂಟೀನ್‌ ಆಹಾರದ ಗುಣಮಟ್ಟವೂ ಚೆನ್ನಾಗಿಯೇ ಇತ್ತು’ ಎಂದು ಆಯುಕ್ತರು ತಿಳಿಸಿದರು.

‘ಇಂದಿರಾ ಕ್ಯಾಂಟೀನ್‌ನ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಪದೇ ಪದೇ ನಡೆಯುತ್ತಿದೆ. ಈ ಹಿಂದೆ ಇಲ್ಲಿನ ಆಹಾರದ ಗುಣಮಟ್ಟದ ಬಗ್ಗೆ ಆರೋಪ ಕೇಳಿ ಬಂದಾಗ ಆಗ ಕ್ಯಾಂಟೀನ್‌ಗಳಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಎನ್‌ಎಬಿಎಲ್‌ ಹಾಗೂ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷೆಗೆ ಒಳಪಡಿಸಿದ್ದೆವು. ಎಲ್ಲದರಲ್ಲೂ ತೃಪ್ತಿದಾಯಕ ಫಲಿತಾಂಶ ಬಂದಿತ್ತು’ ಎಂದರು.

‘ಇಂದಿರಾ ಕ್ಯಾಂಟೀನ್‌ ಗಳಿಗೆ ವ್ಯಾಪಾರ ಪರವಾನಗಿ ಇಲ್ಲ’

ನಗರದಲ್ಲಿನ ಬಹುತೇಕ ಇಂದಿರಾ ಕ್ಯಾಂಟೀನ್‌ಗಳು ವ್ಯಾಪಾರ ಪರವಾನಗಿ (ಟಿಎಲ್‌) ಹೊಂದಿಲ್ಲ. ನಿಯಮ ರೂಪಿಸಿದ ಬಿಬಿಎಂಪಿಯೇ, ತನ್ನ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್‌ಗಳಿಗೆ ಟಿಎಲ್‌ ನೀಡದೆ ನಿಯಮ ಉಲ್ಲಂಘಿಸಿದೆ ಎಂಬ ಆರೋಪ ಕೇಳಿ ಬಂದಿದೆ.

‘ನಗರದಲ್ಲಿನ ಇಂದಿರಾ ಕ್ಯಾಂಟೀನ್‌ಗಳಿಗೆ ಟಿಎಲ್‌ ನೀಡಿಲ್ಲ. ಈ ಕ್ಯಾಂಟೀನ್‌ಗಳನ್ನು ಬಿಬಿಎಂಪಿಯೇ ನಡೆಸುವುದರಿಂದ ಪರವಾನಗಿ ನೀಡುವ ಅಗತ್ಯವೇ ಬೀಳುವುದಿಲ್ಲ. ಬೇರೆಯವರು ಮಾತ್ರ ಪರವಾನಗಿ ಪಡೆಯಬೇಕಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ)
ಡಾ. ವಿಜೇಂದ್ರ ಹೇಳಿದರು.

***

ಕ್ಯಾಂಟೀನ್‌ಗಳಿಗೆ ಪ್ರತಿವಾರವೂ ಭೇಟಿ ನೀಡುತ್ತೇನೆ. ಆಹಾರ ಗುಣಮಟ್ಟದ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
– ಎನ್‌.ಮಂಜುನಾಥ್‌ ಪ್ರಸಾದ್‌, ಬಿಬಿಎಂಪಿ ಆಯುಕ್ತ

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !