ನನಗೊಂದು ಅವಕಾಶ ನೀಡಿ: ವಿನಯ ಕುಲಕರ್ಣಿ

ಭಾನುವಾರ, ಏಪ್ರಿಲ್ 21, 2019
26 °C
ಒಟ್ಟಿಗೆ ವೇದಿಕೆ ಹಂಚಿಕೊಂಡು ಒಗ್ಗಟ್ಟು ಪ್ರದರ್ಶಿಸಿದ ಕಾಂಗ್ರೆಸ್– ಜೆಡಿಎಸ್ ಮುಖಂಡರು

ನನಗೊಂದು ಅವಕಾಶ ನೀಡಿ: ವಿನಯ ಕುಲಕರ್ಣಿ

Published:
Updated:
Prajavani

ಹುಬ್ಬಳ್ಳಿ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್– ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಹೆಸರು ಘೋಷಣೆಯಾದ ಬೆನ್ನಲ್ಲೇ, ಎರಡೂ ಪಕ್ಷಗಳಲ್ಲಿ ಚಟುವಟಿಕೆ ಗರಿಗೆದರಿದೆ.

ವಿನಯ ಕುಲಕರ್ಣಿ ನಾಮಪತ್ರ ಸಲ್ಲಿಕೆಯ ಮುನ್ನಾ ದಿನವಾದ ಬುಧವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ವೇದಿಕೆ ಹಂಚಿಕೊಂಡ ಉಭಯ ಪಕ್ಷಗಳ ನಾಯಕರು, ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶ ನೀಡಿದರು. ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಳಗೊಂಡ ಜಂಟಿ ಸಮಿತಿ ರಚಿಸಿ ಪ್ರಚಾರ ಮಾಡುವುದಾಗಿ ಘೋಷಿಸಿದರು.

ಶಾಕಿರ್ ಸನದಿ ಅವರಿಗೆ ಟಿಕೆಟ್ ಕೈತಪ್ಪಿದ್ದರಿಂದ ಅಲ್ಪಸಂಖ್ಯಾತರಿಗೆ ಅಸಮಾಧಾನ ಉಂಟಾಗಿದೆ ಎಂಬ ಮಾತನ್ನು ತಳ್ಳಿ ಹಾಕಿದ ನಾಯಕರು, ನಾಮಪತ್ರ ಸಲ್ಲಿಕೆಗೆ ಪ್ರೊ. ಐ.ಜಿ. ಸನದಿ ಹಾಗೂ ಅವರ ಪುತ್ರ ಶಾಕಿರ್ ಸಹ ಬರುತ್ತಾರೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡುವುದರಿಂದ ಈ ಬಾರಿ ಗೆಲುವು ಖಚಿತ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

ವಿನಯ ಕುಲಕರ್ಣಿ ಮಾತನಾಡಿ, ‘ಹದಿನೈದು ವರ್ಷಗಳಿಂದ ಸಂಸದರಾಗಿರುವ ಜೋಶಿ ಅವರು ಕ್ಷೇತ್ರದ ಅಭಿವೃದ್ಧಿಗೆ ಕೆಲಸ ಮಾಡಿಲ್ಲ. ಒಂದೇ ಒಂದು ಕೈಗಾರಿಕೆಯನ್ನು ಇಲ್ಲಿಗೆ ತಂದಿಲ್ಲ. ಅವರ ಸಾಧನೆ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶಗಳಿಗೆ ಒಂದೇ ಒಂದು ಕೊಡುಗೆ ಸಹ ನೀಡಿಲ್ಲ. ಅಲ್ಲದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಸಹ ತಮ್ಮದೆಂದು ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಅಷ್ಟೇ’ ಎಂದು ದೂರಿದರು.

‘ಕೇಂದ್ರ ಸರ್ಕಾರ ಸ್ವಾಮಿನಾಥನ್ ವರದಿ ಜಾತಿ ಮಾಡಿಲ್ಲ. ಸಾಲ ಮನ್ನಾ ಸಹ ಮಾಡಿಲ್ಲ. ಜೋಶಿ ಅವರು ಎಂದಿಗೂ ಈ ಭಾಗದ ರೈತರ ಪರ ಹೋರಾಟ ಮಾಡಿಲ್ಲ. ಜನರು ಆಶೀರ್ವಾದ ಮಾಡಿ ಒಂದು ಅವಕಾಶ ನೀಡಿದರೆ, ನಾನು ಈ ಭಾಗದ ರೈತರ ಧ್ವನಿಯಾಗಿ ಕೇಂದ್ರದಲ್ಲಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.

ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ, ಎರಡೂ ಪಕ್ಷದ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಬೇಕು. ಕಳೆದ ಬಾರಿ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಮನೆಯಿಂದ ಹೊರಗೇ ಬರದ ಕಾರಣ ಮತ ಕಡಿಮೆ ಬಿದ್ದಿತ್ತು. ಆದರೆ ಈ ಬಾರಿ ಮೈತ್ರಿ ಅಭ್ಯರ್ಥಿಗೆ ಹೆಚ್ಚಿನ ಮತಗಳು ಜೆಡಿಎಸ್ ಕಡೆಯಿಂದಲೂ ಮತಗಳು ಸಿಗಲಿವೆ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ ಮಾನೆ, ಮುಖಂಡರಾದ ಅಲ್ತಾಫ್ ಹಳ್ಳೂರು, ಅನಿಲ ಕುಮಾರ ಪಾಟೀಲ, ರಜತ್ ಉಳ್ಳಾಗಡ್ಡಿಮಠ ಇದ್ದರು.

ಬರಹ ಇಷ್ಟವಾಯಿತೆ?

 • 6

  Happy
 • 2

  Amused
 • 0

  Sad
 • 0

  Frustrated
 • 4

  Angry

Comments:

0 comments

Write the first review for this !