ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಡೀ ದಿನ ಸ್ತಬ್ಧವಾದ ಜಿಲ್ಲೆ

ಕೊರೊನಾ ವೈರಸ್‌ ಸೋಂಕು ತಡೆಗಾಗಿ ಮನೆಯಲ್ಲೇ ಉಳಿದ ಜನ
Last Updated 28 ಮಾರ್ಚ್ 2020, 16:14 IST
ಅಕ್ಷರ ಗಾತ್ರ

ಮಂಗಳೂರು: ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯುವುದಕ್ಕಾಗಿ ಜಿಲ್ಲಾಡಳಿತದ ನಿರ್ಧಾರದಂತೆ ದಕ್ಷಿಣ ಕನ್ನಡ ಜಿಲ್ಲೆ ಶನಿವಾರ ಸಂಪೂರ್ಣ ಬಂದ್‌ ಆಗಿತ್ತು. ಜಿಲ್ಲೆಯಾದ್ಯಂತ ಇಡೀ ದಿನ ಹಾಲು, ದಿನಸಿ, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೂ ಅವಕಾಶ ಇರಲಿಲ್ಲ.

ಜಿಲ್ಲೆಯಾದ್ಯಂತ ಎಲ್ಲ ಮಾರುಕಟ್ಟೆಗಳು, ಅಂಗಡಿ ಮುಂಗಟ್ಟುಗಳು ಬಂದ್‌ ಆಗಿದ್ದವು. ಖಾಸಗಿ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿತ್ತು. ಆಸ್ಪತ್ರೆಗೆ ತೆರಳುವವರು ಮತ್ತು ತುರ್ತು ಸೇವೆಗೆ ಸಂಬಂಧಿಸಿದ ಖಾಸಗಿ ವಾಹನಗಳ ಸಂಚಾರಕ್ಕಷ್ಟೇ ಪೊಲೀಸರು ಅವಕಾಶ ಕಲ್ಪಿಸಿದರು. ಉಳಿದವರನ್ನು ವಾಪಸ್‌ ಕಳುಹಿಸಲಾಯಿತು.

ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್–19 ದೃಢಪಟ್ಟ ಪ್ರಕರಣಗಳಲ್ಲಿ ಭಾರಿ ಏರಿಕೆ ಆಗಿರುವುದು ಮತ್ತು ರಾಜ್ಯದ ಕರಾವಳಿಯ ಉತ್ತರ ಕನ್ನಡ ಜಿಲ್ಲೆಯಲ್ಲೂ ಸೋಂಕು ತಗುಲಿದವರ ಸಂಖ್ಯೆ ಹೆಚ್ಚುತ್ತಿರುವುದು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಆತಂಕ ಸೃಷ್ಟಿಸಿದೆ. ಈ ಕಾರಣದಿಂದ ಸೋಂಕು ತಡೆಗಾಗಿ ಒಂದು ದಿನದ ಮಟ್ಟಿಗೆ ಸಂಪೂರ್ಣ ಬಂದ್‌ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿತ್ತು.

ಹಾಲು ಮಾರಾಟಕ್ಕೂ ತಡೆ

ಶನಿವಾರ ಒಂದು ದಿನದ ಮಟ್ಟಿಗೆ ಜಿಲ್ಲೆಯನ್ನು ಸಂಪೂರ್ಣ ಬಂದ್‌ ಮಾಡುವ ನಿರ್ಧಾರವನ್ನು ಜಿಲ್ಲಾಡಳಿತ ಶುಕ್ರವಾರ ರಾತ್ರಿ ಪ್ರಕಟಿಸಿತ್ತು. ಹಾಲು ಪೂರೈಕೆ ಮತ್ತು ಮಾರಾಟ, ದಿನಪತ್ರಿಕೆಗಳ ವಿತರಣೆ ಹಾಗೂ ಔಷಧಿ ಅಂಗಡಿಗಳಿಗೆ ಬಂದ್‌ನಿಂದ ವಿನಾಯಿತಿ ನೀಡಿರುವುದಾಗಿ ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್‌ ಪ್ರಕಟಿಸಿದ್ದರು.

ಜಿಲ್ಲೆಯ ಬಹುತೇಕ ಹಾಲಿನ ಕೇಂದ್ರಗಳಿಗೆ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ ಶುಕ್ರವಾರ ರಾತ್ರಿಯೇ ಹಾಲು ಪೂರೈಕೆಯಾಗಿತ್ತು. ಕೆಲವು ಕೇಂದ್ರಗಳಲ್ಲಿ ಬೆಳಿಗ್ಗೆ 5ರಿಂದಲೇ ಹಾಲಿನ ಕೇಂದ್ರಗಳನ್ನು ತೆರೆಯಲಾಗಿತ್ತು. 5.30ರ ಸುಮಾರಿಗೆ ಎಲ್ಲ ಹಾಲಿನ ಕೇಂದ್ರಗಳನ್ನು ಪೊಲೀಸರು ಮುಚ್ಚಿಸಿದರು. ಇದರಿಂದಾಗಿ ಹಾಲು ಖರೀದಿಗೆ ಬಂದವರು ಬರಿಗೈಲಿ ಮರಳುವಂತಾಯಿತು.

ಮಂಗಳೂರು ನಗರದ ಕೆಲವೆಡೆ ಸೇರಿದಂತೆ ಜಿಲ್ಲೆಯ ಹಲವು ಭಾಗಗಳಲ್ಲಿ ದಿನಪತ್ರಿಕೆಗಳ ವಿತರಣೆಗೆ ಹೊರಟಿದ್ದವರನ್ನು ಪೊಲೀಸರು ತಡೆದರು. ಕೆಲವೆಡೆ ವಿತರಕರ ಮೇಲೆ ಲಾಠಿ ಬೀಸಿದರು. ಇದರಿಂದ ಬೆದರಿದ ವಿತರಕರು ದಿನಪತ್ರಿಕೆಗಳನ್ನು ತಲುಪಿಸುವುದರಿಂದ ದೂರ ಉಳಿದರು.

ಔಷಧಿ ಮಳಿಗೆಗಳಲ್ಲಿ ಸಾಲು

ಬಹುತೇಕ ಔಷಧಿ ಮಳಿಗೆಗಳು ಔಷಧಿಗಳ ಪೂರೈಕೆಯ ಸಮಸ್ಯೆಗೆ ಸಿಲುಕಿವೆ. ದಾಸ್ತಾನು ಮಾಡಿಕೊಂಡಿದ್ದ ಔಷಧಿಗಳು ಖಾಲಿ ಆಗಿರುವುದರಿಂದ ಹೆಚ್ಚಿನ ಮಳಿಗೆಗಳನ್ನು ಶನಿವಾರ ತೆರೆದಿರಲಿಲ್ಲ. ಬೆರಳೆಣಿಕೆಯ ಔಷಧಿ ಅಂಗಡಿಗಳಷ್ಟೇ ಬಾಗಿಲು ತೆರೆದಿದ್ದವು. ಅಂತಹ ಮಳಿಗೆಗಳ ಎದುರು ಗ್ರಾಹಕರ ಉದ್ದನೆಯ ಸಾಲು ಕಂಡುಬಂತು.

ತರಕಾರಿ, ಹಣ್ಣು, ಮೀನು ಮತ್ತು ಮಾಂಸದ ಅಂಗಡಿಗಳು ಸಂಪೂರ್ಣವಾಗಿ ಬಂದ್‌ ಆಗಿದ್ದವು. ಮೀನು ಮತ್ತು ಮಾಂಸದ ಪೂರೈಕೆ ಬಹುತೇಕ ಸ್ಥಗಿತಗೊಂಡಿದೆ. ಈ ಕಾರಣದಿಂದ ಬಹುತೇಕ ಅಂಗಡಿಗಳು ಎರಡು ದಿನಗಳಿಂದ ಬಾಗಿಲು ಮುಚ್ಚಿವೆ. ಆದರೆ, ತರಕಾರಿ ಮತ್ತು ಹಣ್ಣುಗಳ ಪೂರೈಕೆ ಆಗಿತ್ತು. ತರಕಾರಿ ಮತ್ತು ಹಣ್ಣನ್ನು ಹೊತ್ತ ವಾಹನಗಳು ಶುಕ್ರವಾರ ರಾತ್ರಿಯೇ ಮಂಗಳೂರು ಪ್ರವೇಶಿಸಿದ್ದವು. ಶನಿವಾರ ಬೆಳಿಗ್ಗೆ ಸರಕನ್ನು ವಾಹನದಿಂದ ಇಳಿಸಿ, ದಾಸ್ತಾನು ಮಾಡಿಕೊಳ್ಳುವುದಕ್ಕೆ ಮಾತ್ರ ಪೊಲೀಸರು ಅವಕಾಶ ನೀಡಿದರು.

ಸಂಪೂರ್ಣ ಬಂದ್‌ ಆದೇಶದ ನಡುವೆಯೂ ಕೆಲವರು ಖರೀದಿಗಾಗಿ ಮಾರುಕಟ್ಟೆಗಳತ್ತ ಬಂದಿದ್ದರು. ಕೇಂದ್ರ ಮಾರುಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿತ್ತು. ಕಠಿಣ ಕ್ರಮದ ಎಚ್ಚರಿಕೆ ನೀಡಿದ ಪೊಲೀಸರು, ಮಾರುಕಟ್ಟೆಗೆ ಬಂದಿದ್ದ ಜನರನ್ನು ವಾಪಸ್‌ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT