ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಂಡರ್‌ ಶ್ಯೂರ್‌ ಕಾಮಗಾರಿ ಆರಂಭ

ಕಾಟನ್‌ಪೇಟೆ: ಗೂಡ್‌ಶೆಡ್‌ ರಸ್ತೆ ಜಂಕ್ಷನ್‌ನಿಂದ ಒಂದೂವರೆ ಕಿ.ಮೀ ಮೈಸೂರು ರಸ್ತೆವರೆಗೆ
Last Updated 7 ಫೆಬ್ರುವರಿ 2019, 20:07 IST
ಅಕ್ಷರ ಗಾತ್ರ

ಬೆಂಗಳೂರು: ಕಾಟನ್‌ಪೇಟೆ ಮುಖ್ಯರಸ್ತೆಯನ್ನು ಗೂಡ್‌ಶೆಡ್‌ ರಸ್ತೆ ಜಂಕ್ಷನ್‌ನಿಂದ ಮೈಸೂರು ರಸ್ತೆವರೆಗೆ ಟೆಂಡರ್‌ ಶ್ಯೂರ್‌ ಯೋಜನೆ ಅಡಿ ಅಭಿವೃದ್ಧಿಪಡಿಸಲಾಗುತ್ತಿದೆ. ಸುಮಾರು 1.15 ಕಿ.ಮೀ ಉದ್ದದ ಈ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಚಾಲನೆ ನೀಡಲಾಯಿತು.

ಇಲ್ಲಿ 180 ಮಿ.ಮೀ ದಪ್ಪದ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆಯ ಎರಡೂ ಬದಿಗಳಲ್ಲಿ ತಲಾ 300 ಮಿ.ಮೀ ವ್ಯಾಸದ ಹಾಗೂ 150 ಮಿ.ಮೀ ವ್ಯಾಸದ ಕುಡಿಯುವ ನೀರಿನ ಪೈಪ್‌ಲೈನ್‌ಗಳನ್ನು ಹಾಗೂ 300 ಮೀ ವ್ಯಾಸದ ಒಳಚರಂಡಿ ಕೊಳವೆಗಳನ್ನೂ ಹೊಸತಾಗಿ ಅಳವಡಿಸಲಾಗುತ್ತಿದೆ. ರಸ್ತೆಯ ಉದ್ದಕ್ಕೂ ಎಲ್ಇಡಿ ಬೀದಿ ದೀಪಗಳನ್ನು ಅಳವಡಿಸಲಾಗುತ್ತಿದೆ.

ಸೂಪರ್‌ ಟಾಕೀಸ್‌ ಜಂಕ್ಷನ್‌ ಬಳಿ ರಾಜಕಾಲುವೆಗೆ ಸುಮಾರು 250 ಮೀ ಉದ್ದಕ್ಕೆ 2 x1.6 ಮೀ ವಿಸ್ತೀರ್ಣದ ಕಾಂಕ್ರೀಟ್‌ ಬಾಕ್ಸ್‌ ಕೊಳವೆಗಳನ್ನು ನಿರ್ಮಿಸಲಾಗುತ್ತದೆ.ರಸ್ತೆಗಿಂತ ಸುಮಾರು 10 ಅಡಿ ಆಳದಲ್ಲಿ ಇಲ್ಲಿ ಮಳೆ ನೀರು ಹರಿಯಲು 900 ಮಿ.ಮೀ ವ್ಯಾಸದ ಕೊಳವೆಮಾರ್ಗವನ್ನು ಜಲಮಂಡಳಿ ನಿರ್ಮಿಸಲಿದೆ.

ರಾಜಕಾಲುವೆ ಹಾಗೂ 900 ಮೀ. ವ್ಯಾಸದ ಒಳಚರಂಡಿ ಕೊಳವೆ ಮಾರ್ಗ ನಿರ್ಮಿಸುವ ಕಾಮಗಾರಿಯನ್ನು ಮೊದಲು ನಡೆಸಲಾಗುತ್ತದೆ. ಎರಡು ತಿಂಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ. ಅದಾದ ಬಳಿಕವಷ್ಟೇ ರಸ್ತೆ ಕಾಮಗಾರಿ ಆರಂಭಿಸಲಿದ್ದೇವೆ. ಇದಕ್ಕೆ ಆರು ತಿಂಗಳು ಬೇಕಾಗುತ್ತದೆ. ಒಟ್ಟು ಎಂಟು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ’ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಭವಿಷ್ಯದಲ್ಲಿ ಈ ರಸ್ತೆಯನ್ನು ಯಾವುದೇ ಕಾರಣಕ್ಕೂ ಅಗೆಯುವ ಪ್ರಮೇಯ ಎದುರಾಗಬಾರದು. ಈ ಕಾರಣಕ್ಕಾಗಿ ರಸ್ತೆಯ ಇಕ್ಕೆಲಗಳಲ್ಲೂ ಒಳಚರಂಡಿ ಹಾಗೂ ಕುಡಿಯುವ ನೀರು ಹಾಗೂ ಆಪ್ಟಿಕ್‌ ಫೈಬರ್‌, ವಿದ್ಯುತ್‌ ಕೇಬಲ್ ಮಾರ್ಗ ಅಳವಡಿಸುತ್ತಿದ್ದೇವೆ’ ಎಂದು ಅವರು ವಿವರಿಸಿದರು.

ಗುದ್ದಲಿ ಪೂಜೆ: ಕಾಮಗಾರಿಯ ಗುದ್ದಲಿ ಪೂಜೆ ಗುರುವಾರ ನಡೆಯಿತು. ಮೇಯರ್‌ ಗಂಗಾಂಬಿಕೆ, ಶಾಸಕ ದಿನೇಶ್‌ ಗುಂಡೂರಾವ್‌, ಬೇಲಿಮಠದ ಶಿವರುದ್ರ ಸ್ವಾಮೀಜಿ, ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌, ಪಾಲಿಕೆ ಆಡಳಿತ ‍ಪಕ್ಷದ ನಾಯಕ ಅಬ್ದುಲ್‌ ವಾಜಿದ್‌, ಕಾಟನ್‌ಪೇಟೆ ವಾರ್ಡ್‌ನ ಪಾಲಿಕೆ ಸದಸ್ಯ ಡಿ.ಪ್ರಮೋದ್‌, ಗಾಂಧಿನಗರ ವಾರ್ಡ್‌ನ ಸದಸ್ಯೆ ಲತಾ ಕುವರ್‌ ರಾಥೋಡ್‌ ಭಾಗವಹಿಸಿದ್ದರು.

ವಾಹನ ಸಂಚಾರ ನಿಷೇಧ

ಟೆಂಡರ್‌ಶ್ಯೂರ್‌ ಕಾಮಗಾರಿ ಆರಂಭವಾಗಿರುವ ಕಾರಣ ಕಾಟನ್‌ ಪೇಟೆ ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಾರ್ಗದ ಬದಲು ವಾಹನಗಳು ಮಾಗಡಿ ರಸ್ತೆ ಅಥವಾ ಬಿನ್ನಿಮಿಲ್‌ ರಸ್ತೆಯನ್ನು ಬಳಸಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT