ಬುಧವಾರ, ಅಕ್ಟೋಬರ್ 16, 2019
22 °C

ಫಸಲು ಕೈಗೆ ಬರಲು ಬೇಕು ಮಳೆ

Published:
Updated:
Prajavani

ದಾಬಸ್ ಪೇಟೆ: ಸೋಂಪುರ ಹೋಬಳಿಯ ಮುಖ್ಯ ಬೆಳೆಯಾದ ರಾಗಿ ಪೈರು ಹುಲುಸಾಗಿ ಬಂದಿದ್ದು ರೈತರಲ್ಲಿ ಸಂತಸ ಮೂಡಿಸಿದೆ. ಆದರೆ, ಅಕ್ಟೋಬರ್‌–ನವೆಂಬರ್‌ನಲ್ಲಿ ಉತ್ತಮ ಮಳೆಯಾದರೆ ಮಾತ್ರ ಹೇರಳ ಫಸಲು ಸಿಗಲಿದೆ.

ಕಳೆದ ವರ್ಷ ಕೊನೆಯ ದಿನಗಳಲ್ಲಿ ಮಳೆ ಕೈಕೊಟ್ಟಿದ್ದರಿಂದ ಉತ್ತಮ ಫಸಲು ಬಾರದೆ ಹೋಗಿತ್ತು. ಹುಲ್ಲು, ರಾಗಿ ಇಳುವರಿ ಗಣನೀಯವಾಗಿ ಕಡಿಮೆಯಾಗಿತ್ತು. ಈ ಬಾರಿ ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಉತ್ತಮ ಮಳೆಯಾಗಿ ಹುಟ್ಟುವಳಿ ಚೆನ್ನಾಗಿ ಬಂದಿದೆ. ರೈತರು ಕಳೆ ಕಿತ್ತು, ಗೊಬ್ಬರ ಹಾಕಿ ಆರೈಕೆ ಮಾಡುತ್ತಿರುವುದರಿಂದ ಹೋಬಳಿಯ ವಿವಿಧ ಭಾಗಗಗಳಲ್ಲಿ ರಾಗಿ ಪೈರು ಹಸಿರಿನಿಂದ ನಳನಳಿಸುತ್ತಿದೆ.

ತೊಗರಿ, ಮುಸುಕಿನ ಜೋಳ, ಅವರೆ, ಅಲಸಂದೆ ಬೆಳೆಗಳ ಮಧ್ಯೆಯೂ ಸುಮಾರು 3,965 ಹೆಕ್ಟೇರ್‌ ಪ್ರದೇಶದಲ್ಲಿ ರಾಗಿ ಬಿತ್ತನೆಯಾಗಿದೆ. ಶಿವಗಂಗೆ, ಆಗಲಕುಪ್ಪೆ, ನರಸೀಪುರ, ಹೆಗ್ಗುಂದ ಭಾಗಗಳಲ್ಲಿ ಉತ್ತಮ ಬೆಳೆ ಬಂದಿದೆ.

‘ಕೆಲವು ವರ್ಷಗಳಿಂದ ಬಿತ್ತನೆ ಹಾಗೂ ಹುಟ್ಟುವಳಿ ಸಮಯದಲ್ಲೇ ರಾಗಿ ಬೆಳೆ ಕುಂಠಿತವಾಗುತ್ತಿತ್ತು. ಸದ್ಯಕ್ಕೆ ಸಕಾಲಕ್ಕೆ ಬಿದ್ದ ಮಳೆಯಿಂದ ಈ ಬಾರಿ ಬೆಳೆ ಚೆನ್ನಾಗಿದೆ. ಹಸ್ತೆ ಮತ್ತು ಚಿತ್ತೆ ಮಳೆಗಳು ಚೆನ್ನಾಗಿ ಸುರಿದರೆ ಉತ್ತಮ ಫಸಲು ಖಂಡಿತ’ ಎನ್ನುತ್ತಾರೆ ರೈತ ರಮೇಶ್.

ಅಕ್ಟೋಬರ್‌ನಲ್ಲಿ ವಾಡಿಕೆ ಮಳೆಯಾದರೆ ರಾಗಿ ಬೆಳೆಗೆ ತೊಂದರೆಯಿಲ್ಲ. ನಿರೀಕ್ಷಿತ ಫಸಲು ಬರುತ್ತದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಹೇಳಿದರು.

Post Comments (+)