ನವೆಂಬರ್ 1ರಿಂದ ಬಿಆರ್‌ಟಿಎಸ್ ಬಸ್ ಸಂಚಾರ: ಡಿಸಿ

7
ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ: ಪಾದಚಾರಿ ಮಾರ್ಗ, ಒಳಚರಂಡಿ ನಿರ್ಮಾಣ ಬಾಕಿ

ನವೆಂಬರ್ 1ರಿಂದ ಬಿಆರ್‌ಟಿಎಸ್ ಬಸ್ ಸಂಚಾರ: ಡಿಸಿ

Published:
Updated:
Deccan Herald

ಹುಬ್ಬಳ್ಳಿ: ತ್ವರಿತ ಸಾರಿಗೆಯ (ಬಿಆರ್‌ಟಿಎಸ್‌) ಮುಖ್ಯ ಕಾಮಗಾರಿಗಳು ಬಹುತೇಕ ಪೂರ್ಣಗೊಂಡಿದ್ದು, ಸಣ್ಣ– ಪುಟ್ಟ ಕೆಲಸಗಳು ಮಾತ್ರ ಬಾಕಿ ಉಳಿದಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಹೇಳಿದರು.

ಹುಬ್ಬಳ್ಳಿಯ ಹೊಸೂರು ಕ್ರಾಸ್‌ನಿಂದ ಉಣಕಲ್ ಕೆರೆ ವರೆಗಿನ ನಾಲ್ಕು ಕಿ.ಮೀ ಕಾಮಗಾರಿಯನ್ನು ಭಾನುವಾರ ಪರಿಶೀಲನೆ ನಡೆಸಿದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ‘ಭೂಸ್ವಾಧೀನ ಮತ್ತು ರಸ್ತೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಬಸ್ ನಿಲ್ದಾಣಗಳು ಸಿದ್ಧವಾಗಿವೆ. ಆದರೆ ಒಳ ಚರಂಡಿ ನಿರ್ಮಾಣ, ಚರಂಡಿ, ಕೇಬಲ್ ಅಳವಡಿಸುವುದು, ಚೇಂಬರ್ ಕೆಲಸಗಳು ಇನ್ನೂ ಆಗಬೇಕಿದೆ. ವಿವಿಧ ಇಲಾಖೆಗಳ ಅಧಿಕಾರಿಗಳ ಮಧ್ಯೆ ಸಮನ್ವಯದ ಕೊರತೆ ಇವು ಬಾಕಿ ಉಳಿಯಲು ಕಾರಣ’ ಎಂದು ಅವರು ಹೇಳಿದರು.

‘ರಸ್ತೆಯ ಎರಡೂ ಬದಿ ಪಾದಚಾರಿ ಮಾರ್ಗದ ನಿರ್ಮಾಣ ಕೆಲಸ ಬಾಕಿ ಇದೆ. ಕೆಲಸಗಾರರ ತಂಡಗಳನ್ನು ರಚಿಸಿ, ವಿವಿಧ ಪಾಳಿಗಳಲ್ಲಿ ಕೆಲಸ ಮಾಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಕಾಮಗಾರಿ ಸ್ಥಳದಲ್ಲಿರುವ ತ್ಯಾಜ್ಯವನ್ನು ಸಂಪೂರ್ಣ ತೆರವು ಮಾಡುವಂತೆ ಹಾಗೂ ಪೂರ್ಣಗೊಂಡಿರುವ ಕಡೆ ಸ್ವಚ್ಛತೆ ಕಾಪಾಡುಕೊಳ್ಳುವಂತೆ ಸಹ ಹೇಳಿದ್ದೇನೆ. ಹೀಗೆ ಮಾಡಿದರೆ ಆಗಿರುವ ಕೆಲಸ ಜನರಿಗೆ ಕಾಣುತ್ತದೆ. ಬಿಆರ್‌ಟಿಎಸ್ ಸೇವೆ ಬೇಗ ಆರಂಭವಾಗಲಿದೆ ಎಂಬ ವಿಶ್ವಾಸ ಮೂಡುತ್ತದೆ’ ಎಂದು ಹೇಳಿದರು.

ಒಳಚರಂಡಿ ಕಾಮಗಾರಿಗಾಗಿ ಗುಂಡಿ ತೆಗೆದು ಅರೆಬರೆ ಕಾಮಗಾರಿ ಮಾಡಿ ಅದನ್ನು ಮುಚ್ಚದಿರುವುದನ್ನು ನೋಡಿದ ಅವರು, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ರಾತ್ರಿ ವೇಳೆ ಯಾರಾದರೂ ಬಿದ್ದರೆ ಯಾರು ಜವಾಬ್ದಾರಿ? ಈ ಕೂಡಲೇ ಅದರ ಮೇಲೆ ಮುಚ್ಚಳ ಮುಚ್ಚಿ ಎಂದು ಸೂಚನೆ ನೀಡಿದರು. ಒಳ ಚರಂಡಿ ಕಾಮಗಾರಿಯನ್ನು ಒಂದು ವಾರದಲ್ಲಿ ಮುಗಿಸಿ ಎಂದು ತಾಕೀತು ಮಾಡಿದರು.

ಭೈರಿದೇವರ ಕೊಪ್ಪದಲ್ಲಿ ಎರಡು ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೀಪಾ ಚೋಳನ್, ಆ ವಿಷಯದ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ ಎಂದರು.

ಅಸಮಾಧನ ವ್ಯಕ್ತಪಡಿಸಿದ ಜನ: 
ಉಣಕಲ್ ಸಮೀಪ ಕಾಮಗಾರಿ ವೀಕ್ಷಣೆ ಮಾಡಲು ಜಿಲ್ಲಾಧಿಕಾರಿ ಹಾಗೂ ಅಧಿಕಾರಿಗಳ ತಂಡ ಹೋದಾಗ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿರುವುದಕ್ಕೆ ಅಲ್ಲಿನ ನಿವಾಸಿಗಳು ತೀರ್ವ ಅಸಮಾಧಾನ ವ್ಯಕ್ತಪಡಿಸಿದರು. ಚರಂಡಿ ನಿರ್ಮಾಣಕ್ಕೆ ಮನೆಯ ಮುಂದೆ ಗುಂಡಿ ತೆಗೆದು ತಿಂಗಳುಗಳೇ ಕಳೆದರೂ ಇನ್ನೂ ಕಾಮಗಾರಿ ಮುಗಿಸಿಲ್ಲ. ಹೀಗೆ ಆದರೆ ಎಲ್ಲವನ್ನೂ ಕಿತ್ತೆಸೆಯಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅವರ ಮಾತುಗಳು ಕೇಳಿದರೂ ಕೇಳಿಸದವರಂತೆ ಅಧಿಕಾರಿಗಳು ಮುಂದೆ ಸಾಗಿದರು.

ಚರ್ಚ್‌ನಿಂದ ಉಣಕಲ್ ವರೆಗೆ 900 ಮೀಟರ್ ಹಾಗೂ ಆರ್‌ಎನ್‌ಎಸ್ ಮೋಟಾರ್ಸ್‌ನಿಂದ ಚರ್ಚ್‌ ವರೆಗೆ 550 ಮೀಟರ್ ರಸ್ತೆ ನಿರ್ಮಾಣ ಕಾಮಗಾರಿ ಮಾತ್ರ ಬಾಕಿ ಇದೆ ಎಂದು ಅಧಿಕಾರಿಗಳು ಹೇಳಿದರು.

ಬಿಆರ್‌ಟಿಎಸ್ ಉಪ ಪ್ರಧಾನ ವ್ಯವಸ್ಥಾಪಕ ಬಸವರಾಜ, ಕಾರ್ಯನಿರ್ವಾಹಕ ಎಂಜಿನಿಯರ್ ಸುನಿಲ್, ಕೆಆರ್‌ಡಿಸಿಎಲ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎನ್‌.ಕೆ. ಕುರಂಕರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !