ಗುರುವಾರ , ಫೆಬ್ರವರಿ 25, 2021
24 °C
ನುಚ್ಚು ನೂರಾಯ್ತು ಉನ್ನತ ವ್ಯಾಸಂಗದ ಕನಸು l

ಅಂಕಪಟ್ಟಿ ಕೇಳಿದರೆ ‘ಡೆತ್‌ನೋಟ್’ ಕೊಟ್ಟ!: ರೈಲಿಗೆ ತಲೆ ಕೊಟ್ಟವನ ಕತೆ

ಎಂ.ಸಿ.ಮಂಜುನಾಥ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ಬಿ.ಟೆಕ್ ಓದುತ್ತೇನೆ’ ಎಂದು ಹೇಳಿದ ಮಗನ ಮಾತು ಕೇಳಿ ಆ ಪೋಷಕರ ಖುಷಿಗೆ ಪಾರವೇ ಇರಲಿಲ್ಲ. ಕೂಡಲೇ ‘ಪ್ರಭಾವಿ’ಗಳ ಕೈ–ಕಾಲು ಹಿಡಿದು ನಲ್ಲೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಸೀಟು ಕೊಡಿಸುವುದಕ್ಕೆ ಅಣಿಯಾಗಿದ್ದರು. ಅಂಕಪಟ್ಟಿಗಳನ್ನು ಮೇಲ್ ಮಾಡುವಂತೆ ಮಗನಿಗೂ ಸೂಚಿಸಿದ್ದರು. ಆದರೆ, ಆತ ಕಳುಹಿಸಿದ್ದ ದಾಖಲೆ ಹೆತ್ತವರನ್ನು ದಿಗಿಲು ಬಡಿಸುವಂತಿತ್ತು. ಅದು ಅಂಕಪಟ್ಟಿ ಆಗಿರದೆ, ಮಗನ ಡೆತ್‌ನೋಟ್ (ಮರಣ ಪತ್ರ) ಆಗಿತ್ತು!

‘ನನ್ನ ಹುಡುಗಿ ಮೋಸ ಮಾಡಿದಳು. ಹೀಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಪತ್ರ ಬರೆದಿದ್ದ 23 ವರ್ಷದ ಲೋಕೇಶ್, ಅದನ್ನು ತಂದೆಗೆ ಹಾಗೂ ತಾನು ಪ್ರೀತಿಸುತ್ತಿದ್ದ ಯುವತಿಗೆ ಕಳುಹಿಸಿ ಮೊಬೈಲ್ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದ. ಇದರಿಂದ ಗಾಬರಿಗೆ ಬಿದ್ದ ಪೋಷಕರು, ಮಗನನ್ನು ಹುಡುಕಿಕೊಂಡು ಆಂಧ್ರದಿಂದ ತಕ್ಷಣ ಬೆಂಗಳೂರಿಗೆ ಹೊರಟು ಬಂದರು. ಅಷ್ಟರಲ್ಲಾಗಲೇ ಆತ ವೈಟ್‌ಫೀಲ್ಡ್ ಸಮೀಪದ ಹೂಡಿಯಲ್ಲಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದ.

ಲೋಕೇಶ್ ಸಾವಿನ ಸಂಬಂಧ ತಂದೆ ಎಡಂಬಾಕಂ ವೇಣುಗೋಪಾಲ್ ಅವರು ಶನಿವಾರ ಕಂಟೋನ್ಮೆಂಟ್ ರೈಲ್ವೆ ಠಾಣೆಗೆ ದೂರು ಕೊಟ್ಟಿದ್ದಾರೆ. ಡೆತ್‌ನೋಟ್‌ ವಿವರ ಆಧರಿಸಿ ಆತ್ಮಹತ್ಯೆಗೆ ಪ್ರಚೋದನೆ (ಐಪಿಸಿ 306) ಆರೋಪದಡಿ ಎಫ್‌ಐಆರ್ ದಾಖಲಿಸಿಕೊಂಡಿರುವ ಪೊಲೀಸರು, ಆ ಯುವತಿಯನ್ನು ವಿಚಾರಣೆಗೆ ಕರೆದಿದ್ದಾರೆ. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡು ಕೋಮಾ ಸ್ಥಿತಿ ತಲುಪಿರುವ ಲೋಕೇಶ್ ತಾಯಿ, ನಲ್ಲೂರಿನ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹುಡುಗಿ ಖರ್ಚಿಗೆ ಸರ ಕದ್ದೊಯ್ದ: ‘ನಲ್ಲೂರಿನಲ್ಲಿ ಬಿ.ಟೆಕ್ ಓದುತ್ತಿದ್ದ ಲೋಕೇಶ್, 3ನೇ ವರ್ಷಕ್ಕೆ ಕಾಲೇಜು ತೊರೆದಿದ್ದ. ನಂತರ ಊರಿನಲ್ಲೇ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಆತ, ಅಧಿಕ ಸಂಪಾದನೆಯ ಆಸೆಯಿಂದ ಬೆಂಗಳೂರಿಗೆ ಬಂದ. ದೊಮ್ಮಲೂರಿನ ಆಭರಣ ಮಳಿಗೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡ ಮಗನಿಗೆ, 31 ವರ್ಷದ ಯುವತಿಯ ಜತೆ ಪ್ರೇಮವಾಗಿತ್ತು’ ಎಂದು ವೇಣುಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚೆಗೆ ಊರಿಗೆ ಬಂದಿದ್ದ ಆತ, ತನ್ನ ಪ್ರೀತಿಯ ವಿಚಾರ ಹೇಳಿಕೊಂಡಿದ್ದ. ಆಕೆಯನ್ನೇ ಮದುವೆ ಆಗುವುದಾಗಿಯೂ ತಿಳಿಸಿದ್ದ. ‘ಆ ಹುಡುಗಿ ವಯಸ್ಸಿನಲ್ಲಿ ನಿನಗಿಂತ 8 ವರ್ಷ ದೊಡ್ಡವಳು. ಪ್ರೀತಿ–ಗೀತಿ ಎಲ್ಲ ಬೇಡ’ ಎಂದು ಬುದ್ಧಿ ಹೇಳಿದ್ದೆವು. ಆ ಮಾತು ಕೇಳದ ಆತ, ಮನೆಯಲ್ಲಿದ್ದ 40 ಗ್ರಾಂನ ಚಿನ್ನದ ಸರವನ್ನು ತೆಗೆದುಕೊಂಡು ಬೆಂಗಳೂರಿಗೆ ಮರಳಿದ್ದ. ‘ಸರದ ಬಗ್ಗೆ ಕೇಳಿದರೆ ಸತ್ತು ಹೋಗುತ್ತೇನೆ’ ಎಂದು ಹೆದರಿಸಿದ್ದರಿಂದ ನಾವು ಚಕಾರ ಎತ್ತಿರಲಿಲ್ಲ. ಅದನ್ನು ಮಾರಿ, ಆ ಹಣವನ್ನು ಹುಡುಗಿಗೆ ಖರ್ಚು ಮಾಡಿದ್ದ ಎಂಬುದು ನಂತರ ಗೊತ್ತಾಯಿತು.’

‘ಫೆ.2ರಂದು ಕರೆ ಮಾಡಿದ ಲೋಕೇಶ್, ‘ನಾನು ಆಕೆಯನ್ನು ಬಿಡಲು ನಿರ್ಧರಿಸಿದ್ದೇನೆ. ಮತ್ತೆ ಕಾಲೇಜು ಸೇರಿಕೊಂಡು ಬಿ.ಟೆಕ್ ಕೋರ್ಸ್ ಪೂರ್ಣಗೊಳಿಸುತ್ತೇನೆ’ ಎಂದಿದ್ದ. ಬೆಳಿಗ್ಗೆ ಹಾಗೆ ಹೇಳಿದ್ದವನು ಅದೇ ದಿನ ರಾತ್ರಿ 7.48ಕ್ಕೆ ವಾಟ್ಸ್‌ಆ್ಯಪ್‌ನಲ್ಲಿ ಡೆತ್‌ನೋಟ್‌ ಕಳುಹಿಸಿದ್ದ. ಗಾಬರಿಯಾಗಿ ಆತನ ಸ್ನೇಹಿತರಿಗೆಲ್ಲ ಕರೆ ಮಾಡಿ ವಿಚಾರಿಸುತ್ತಿದ್ದೆವು.’

‘ಹೀಗಿರುವಾಗ, ರಾತ್ರಿ 11 ಗಂಟೆಗೆ ಆ ಹುಡುಗಿಯೇ ಕರೆ ಮಾಡಿದಳು. ‘ಲೋಕೇಶ್ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನನಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾನೆ. ಇದರಿಂದ ನನಗೆ ತೊಂದರೆ ಆಗುತ್ತಿದೆ. ಆತನ ವಿರುದ್ಧ ಪೊಲೀಸರಿಗೆ ದೂರು ಕೊಡುತ್ತೇನೆ’ ಎಂದಳು. ಫೆ.3ರ ಮಧ್ಯಾಹ್ನ ಕರೆ ಮಾಡಿದ ರೈಲ್ವೆ ಪೊಲೀಸರು, ‘ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನ ಮೊಬೈಲ್‌ನಲ್ಲಿ ನಿಮ್ಮ ನಂಬರ್ ಸಿಕ್ಕಿತು. ತಕ್ಷಣ ಬೌರಿಂಗ್ ಆಸ್ಪತ್ರೆಗೆ ಬನ್ನಿ’ ಎಂದರು. ಅಲ್ಲಿಗೆ ಹೋದಾಗ, ಆ ಶವ ನನ್ನ ಮಗನದ್ದೇ ಆಗಿತ್ತು’ ಎಂದು ಹೇಳುತ್ತ ವೇಣುಗೋಪಾಲ್ ದುಃಖತಪ್ತರಾದರು.

‘ಹರ ಹರ ಮಹಾದೇವ್’
‘ಮಗ ಒಂದು ಪುಟದ ಡೆತ್‌ನೋಟ್ ಬರೆದಿದ್ದಾನೆ. ‘ಆಕೆ ನನ್ನ ಭಾವನೆಗಳ ಜೊತೆ ಆಟವಾಡಿಬಿಟ್ಟಳು. ಈಗ ಸತ್ತು ಹೋಗು ಎನ್ನುತ್ತಿದ್ದಾಳೆ’ ಎಂದು ನೋವು ತೋಡಿಕೊಂಡಿದ್ದಾನೆ. ಆತ ಸತ್ತ ವಿಚಾರ ತಿಳಿಯುತ್ತಿದ್ದಂತೆಯೇ, ‘ಹರ ಹರ ಮಹಾದೇವ್’ ಎಂದು ಆಕೆ ವಾಟ್ಸ್‌ಆ್ಯಪ್ ಸ್ಟೇಟಸ್ ಬದಲಿಸಿಕೊಂಡಿದ್ದಾಳೆ. ಸ್ವಲ್ಪವೂ ಮಾನವೀಯತೆ ಇಲ್ಲದ ಆ ಹುಡುಗಿ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ವೇಣುಗೋಪಾಲ್ ದೂರು ಕೊಟ್ಟಿದ್ದಾರೆ.

ಯುವತಿಯಿಂದಲೂ ದೂರು
‘ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಲೋಕೇಶ್ ಬೆದರಿಸುತ್ತಿದ್ದಾನೆ’ ಎಂದು ಯುವತಿ ಫೆ.2ರ ರಾತ್ರಿಯೇ ಅಶೋಕನಗರ ಠಾಣೆಗೆ ದೂರು ಕೊಟ್ಟಿದ್ದಾರೆ. ಪೊಲೀಸರು ಅದನ್ನು ಸಾಮಾನ್ಯ ಪ್ರಕರಣ (ಎನ್‌ಸಿಆರ್) ದಾಖಲಿಸಿಕೊಂಡು ಕಳುಹಿಸಿದ್ದಾರೆ. ಹೀಗಾಗಿ, ಪ್ರಕರಣದ ಬಗ್ಗೆ ಆ ಸಿಬ್ಬಂದಿಯಿಂದಲೂ ಮಾಹಿತಿ ಕೋರಲಾಗಿದೆ’ ಎಂದು ಕಂಟೋನ್ಮೆಂಟ್ ಪೊಲೀಸರು ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು