ಗುರುವಾರ , ಡಿಸೆಂಬರ್ 12, 2019
26 °C
ಸುದ್ದಿ ವಿಶ್ಲೇಷಣೆ

ಕೆರೆಗಳ ಉದ್ಧಾರ ಮರೆತರಾ ಕುಮಾರ?

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Deccan Herald

ಬೆಂಗಳೂರು: ಕೆರೆಗಳ ಸಂರಕ್ಷಣೆಗೆ ಮುಂದಾಗದ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದಂಡದೇಟು ನೀಡಿದ ಬೆನ್ನಲ್ಲೇ, ನಾಲ್ಕು ವರ್ಷಗಳ ಹಿಂದೆ ಇದೇ ವಿಷಯ ಮುಂದಿಟ್ಟುಕೊಂಡು ಸದನದಲ್ಲಿ ಅಬ್ಬರಿಸಿದ್ದ ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಮೇಲೆ ಕೆರೆಗಳ ಉದ್ಧಾರದತ್ತ ಮೌನ ವಹಿಸಿರುವುದು ಏಕೆ ಎಂಬ ಚರ್ಚೆಯೂ ಮುನ್ನೆಲೆಗೆ ಬಂದಿದೆ.

ಕೊಳಚೆ ನೀರು ಸೇರಿ ಕೊಚ್ಚೆಗುಂಡಿಗಳಂತಾಗಿರುವುದು, ಭೂಗಳ್ಳರ ದಾಹಕ್ಕೆ ಕೆರೆಗಳ ವ್ಯಾಪ್ತಿ ಕುಗ್ಗಿ ಹೋಗಿರುವುದು ಇಂದು ನಿನ್ನೆಯ ಕಥೆಯಲ್ಲ. ಕೆರೆಗಳ ನಗರಿ ಎಂದೇ ಕರೆಯಬಹುದಾದಷ್ಟು ಜಲಾಗರಗಳಿಂದ ತುಂಬಿ ಹೋಗಿದ್ದ ಬೆಂಗಳೂರು ಈಗ ನಿಜವಾಗಿಯೂ ಬೆಂದಕಾಳೂರು ಆಗಿದೆ. ಕೆರೆಗಳನ್ನು ಸಪಾಟಾಗಿ ಮುಚ್ಚಿ ಅಲ್ಲಿ ಬಸ್‌ ನಿಲ್ದಾಣ, ಮೈದಾನ, ಮುಗಿಲೆತ್ತರದ ಕಟ್ಟಡಗಳಿಗೆ ಅವಕಾಶ ಕೊಟ್ಟ ಸರ್ಕಾರಗಳ ತಪ್ಪು ನಡೆ ಒಂದೆಡೆ. ಕೆರೆಗಳನ್ನು ಬತ್ತಿಸಿ ಅಂಚಿನಲ್ಲಿ ಒತ್ತುವರಿ ಮಾಡುತ್ತಾ ಬಡಾವಣೆಗಳನ್ನು ನಿರ್ಮಿಸಿ, ನಿವೇಶನ ಮಾರಿದ ಭೂಗಳ್ಳರ ದಾಹ ಮತ್ತೊಂದೆಡೆ.

ಇದು ಕೆರೆಗಳು ಕಣ್ಮರೆಯಾದ ದುರಂತಗಾಥೆಯಾದರೆ, ಇರುವ ಜೀವಂತ ಕೆರೆಗಳಿಗೆ ವಿಷ ಹಾಗೂ ರಾಸಾಯನಿಕ ಮಿಶ್ರಿತ ನೀರು ಬಿಡುವವರದ್ದು ಮತ್ತೊಂದು ಪುರಾಣ. ಬೃಹತ್ ವಸತಿ ಸಮುಚ್ಚಯಗಳನ್ನು ಕಟ್ಟಿ ಮಾರಿದವರು ಕೊಳಚೆ ನೀರು ಶುದ್ಧೀಕರಣ ಘಟಕ (ಎಸ್‌ಟಿಪಿ) ಸ್ಥಾಪಿಸುವ ಭಾರಿ ಖರ್ಚಿನ ಬಾಬತ್ತಿನಿಂದ ತಪ್ಪಿಸಿಕೊಳ್ಳಲು ನೇರವಾಗಿ ರಾಜಕಾಲುವೆಗೆ ಬಿಡತೊಡಗಿದರು. ಇದರಿಂದಾಗಿ ಕೆರೆಗಳು ಚರಂಡಿ ನೀರು ತುಂಬಿಕೊಂಡ ಟ್ಯಾಂಕ್‌ಗಳಾದವು. ಸಂಗ್ರಹಿತ ನೀರು ಹೊರಹೋಗದೇ, ಹೊಸನೀರು ಒಳಬರದೇ ಇರುವುದರಿಂದ ನಗರದಲ್ಲಿರುವ ಅನೇಕ ಕೆರೆಗಳು ಗಬ್ಬುನಾತ ಬೀರುತ್ತಿವೆ. ಈ ಎಲ್ಲದರ ಬಗ್ಗೆ ಎನ್‌ಜಿಟಿ ಕೆಂಡಕಾರುವವರೆಗೆ ಕುಮಾರಸ್ವಾಮಿ ಅವರು ಕಾಯಬಾರದಿತ್ತು. ಅಷ್ಟು ವಿವೇಚನಾಯುತ ಮಾತುಗಳನ್ನು ಅವರು ಈ ಹಿಂದೆಯೇ ಆಡಿದ್ದರು. ಆದರೆ, ಅಧಿಕಾರದ ಉತ್ತುಂಗಕ್ಕೆ ಏರಿದ ಮೇಲೆ ಹಿಂದಿನ ಮಾತುಗಳನ್ನು ಮರೆತುಬಿಟ್ಟರಾ ಎಂಬ ಅನುಮಾನವೂ ಸಾರ್ವಜನಿಕರಲ್ಲಿ ಮೂಡತೊಡಗಿದೆ.

ಕೆರೆಗಳನ್ನು ಕಾಯಲು ಇರುವ ಬೆಂಗಳೂರು ಜಲಮಂಡಳಿ, ಬಿಬಿಎಂಪಿ, ಬಿಡಿಎ, ಕೆರೆ ಅಭಿವೃದ್ಧಿ ಪ್ರಾಧಿಕಾರದಂಥ ಕಾಲಾಳುಗಳು ಕೇವಲ ಕಾಲಹರಣ ಮಾಡುತ್ತಿವೆ ವಿನಃ ರಕ್ಷಣೆಯ ಕಾಯಕದಲ್ಲಿ ಅವುಗಳಿಗೆ ಆಸಕ್ತಿ ಇಲ್ಲ. ಅದನ್ನು ಅರಿತೋ ಎಂಬಂತೆ ಎನ್‌ಜಿಟಿ, ₹500 ಕೋಟಿಯನ್ನು ಮುಫತ್ತಾಗಿ ಇಡುವಂತೆ ಸರ್ಕಾರಕ್ಕೆ ಕಟ್ಟಪ್ಪಣೆ ವಿಧಿಸಿದೆ.

1961ರಲ್ಲಿ ಬೆಂಗಳೂರಿನಲ್ಲಿ 389 ಜೀವಂತ ಕೆರೆಗಳಿದ್ದವು. 1985ರಲ್ಲಿ ಲಕ್ಷ್ಮಣರಾವ್‌ ಸಲ್ಲಿಸಿದ್ದ ವರದಿಯಲ್ಲಿ ಈ ಸಂಖ್ಯೆ 80ಕ್ಕೆ ಇಳಿದಿದೆ ಎಂದು ಹೇಳಲಾಗಿತ್ತು. ಆ ಕಾಲದಲ್ಲಿ 51 ಆರೋಗ್ಯಕರ ಕೆರೆಗಳಿದ್ದವು. 2017ರ ಹೊತ್ತಿಗೆ ರಾಜಧಾನಿಯ ಹೃದಯಭಾಗದಲ್ಲಿರುವ ಆರೋಗ್ಯಕರ ಕೆರೆಗಳ ಸಂಖ್ಯೆ 17ಕ್ಕೆ ಕುಸಿದಿದೆ. ಕೆ.ಬಿ. ಕೋಳಿವಾಡ ನೇತೃತ್ವದ ಸದನ ಸಮಿತಿ ಸಲ್ಲಿಸಿದ ವರದಿ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ 1,545 ಕೆರೆ ಹಾಗೂ ಕಟ್ಟೆಗಳಿವೆ ಎಂದು ಉಲ್ಲೇಖಿಸಿದೆ.

ವೀರಾವೇಶ ಎಲ್ಲಿ ಹೋಯಿತು?

ಬೆಂಗಳೂರಿನ ಕೆರೆಗಳನ್ನು ಒತ್ತುವರಿ ಮಾಡಿಕೊಂಡಿರುವ ರಿಯಲ್ ಎಸ್ಟೇಟ್ ಮಾಫಿಯಾ, ಪ್ರಭಾವಿ ವ್ಯಕ್ತಿಗಳು, ದೊಡ್ಡ ಕಾರ್ಪೊರೇಟ್ ಕಂಪನಿಗಳ ಬಗ್ಗೆ 2014ರಲ್ಲಿ ವಿರೋಧ ಪಕ್ಷದಲ್ಲಿದ್ದ ಕುಮಾರಸ್ವಾಮಿ ಸುದೀರ್ಘವಾಗಿ ಮಾತನಾಡಿದ್ದರು.

ಯಾವ ಕೆರೆಯ ಪ್ರದೇಶ ಎಷ್ಟು ಅತಿಕ್ರಮಣವಾಗಿದೆ, ಯಾವ ಬಿಲ್ಡರ್‌ಗಳು ಇದರ ಹಿಂದೆ ಇದ್ದಾರೆ, ಭೂ ಕಬಳಿಕೆದಾರರು ಯಾರು ಎಂದು ಸವಿಸ್ತಾರವಾಗಿ ವಿವರಿಸಿದ್ದ ಅವರು, ಕೆರೆಗಳು ಹಾಗೂ ಒತ್ತುವರಿಯಾದ ಪ್ರದೇಶಗಳ ಚಿತ್ರಗಳನ್ನು ಸದನದಲ್ಲಿ ಪ್ರದರ್ಶಿಸಿದ್ದರು. ಕೆರೆಗಳ ಉಳಿವಿನ ಅಗತ್ಯದ ಬಗ್ಗೆ ಏರುಧ್ವನಿಯಲ್ಲಿ ಆಗ್ರಹಿಸಿದ್ದರು.

‘ನಗರದ ಕೆರೆ, ಭೂಮಿಯನ್ನು ಉಳಿಸುವುದರಲ್ಲಿ ಎಲ್ಲರೂ ಜಾಣ ಮೌನ ತಾಳಿದ್ದಾರೆ. ಈ ವಿಷಯದಲ್ಲಿ ಮುಖ್ಯಮಂತ್ರಿ ಮುಂದಿನ ದಿನಗಳಲ್ಲಾದರೂ ಕ್ರಮ ಕೈಗೊಳ್ಳಬೇಕು. ಒತ್ತುವರಿಗೆ ಸಂಬಂಧಿಸಿದ ಸ್ವೇಚ್ಛಾಚಾರಗಳಿಗೆ ಯಾರೂ ಕೈಹಾಕದ ರೀತಿಯಲ್ಲಿ ಕೆಲವು ಕಠಿಣ ಕ್ರಮ ಕೈಗೊಂಡು ಅಂತಹವರಿಗೆ ಶಿಕ್ಷೆ ವಿಧಿಸಬೇಕು. ಇಂದು ಭೂಗಳ್ಳರು ಸ್ವೇಚ್ಛಾಚಾರದಿಂದ ವರ್ತಿಸುತ್ತಿದ್ದು, ಎಲ್ಲ ರೀತಿಯಿಂದಲೂ ರಕ್ಷಣೆ ಪಡೆದುಕೊಂಡು ಸಂಪದ್ಭರಿತರಾಗುತ್ತಿದ್ದಾರೆ. ಇದಕ್ಕೆ ಅಂತಿಮ ತೆರೆ ಎಳೆಯಬೇಕಾದರೆ ಒತ್ತುವರಿ ತೆರವು ಮಾಡಬೇಕು’ ಎಂದೂ ಒತ್ತಾಯಿಸಿದ್ದರು.

ಇದನ್ನು ಆಧರಿಸಿ, ಅಂದು ಸಭಾಧ್ಯಕ್ಷರಾಗಿದ್ದ ಕಾಗೋಡು ತಿಮ್ಮಪ್ಪ ಸದನ ಸಮಿತಿ ರಚಿಸಿದ್ದರು. ಈ ಸಮಿತಿ ಕಳೆದ ನವೆಂಬರ್‌ನಲ್ಲಿ ವರದಿಯನ್ನೂ ನೀಡಿತ್ತು. ದೊಡ್ಡ ದೊಡ್ಡ ಕಂಪನಿಗಳು, ಪ್ರಭಾವಿಗಳು ಎಲ್ಲೆಲ್ಲಿ ಒತ್ತುವರಿ ಮಾಡಿದ್ದಾರೆಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ಏನು ಕ್ರಮ ಕೈಗೊಳ್ಳಬೇಕು ಎಂದೂ ವಿವರಿಸಲಾಗಿದೆ.

ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ತಾವೇ ಹಿಂದೆ ಸದನದಲ್ಲಿ ಎತ್ತಿದ್ದ ಧ್ವನಿಯ ಬಗ್ಗೆ ಮಾತನಾಡಿಲ್ಲ ಅಥವಾ ಸದನ ಸಮಿತಿಯ ಶಿಫಾರಸುಗಳನ್ನು ಜಾರಿಗೊಳಿಸುವ ಬಗ್ಗೆ ಆಸಕ್ತಿಯನ್ನೂ ತೋರಿಲ್ಲ.

ಎನ್‌ಜಿಟಿ ಆದೇಶದ ನೆಪದಲ್ಲಾದರೂ ತಾವು ಹಿಂದೆ ಆಡಿದ, ಉಲ್ಲೇಖಿಸಿದ ಮಾತನ್ನು ಅವರು ಪಾಲಿಸಬೇಕಾದುದು ರಾಜಧರ್ಮವಾದೀತು. ಸಿಕ್ಕ ಅಧಿಕಾರವನ್ನು ನಾಡಿನ ಹಿತಕ್ಕೆ ಬಳಸಿಕೊಳ್ಳುವ ಕೆಲಸವನ್ನು ಮಾಡಲು ಅವರು ಮನಸ್ಸು ತೋರಲು ಇದು ಸಕಾಲವಂತೂ ಹೌದು.

ಸರ್ಕಾರ ಇಂದು ಅಸ್ತಿತ್ವದಲ್ಲಿದೆಯೇ?

ಸರ್ಕಾರ ಇಂದು ಅಸ್ತಿತ್ವದಲ್ಲಿದೆಯೇ? ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಸರ್ಕಾರ ಇವರಿಗೆ ಏತಕ್ಕಾಗಿ ಸಂಬಳ ನೀಡುತ್ತಿದೆ? ಕೆರೆಗಳನ್ನು ಭೂಗಳ್ಳರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ. ಇವರೊಂದಿಗೆ ಶಾಮೀಲಾಗಿರುವ ಅಧಿಕಾರಿಗಳು ಒತ್ತುವರಿ ಭೂಮಿಗೆ ಖಾತೆ ಮಾಡಿಕೊಟ್ಟು ಭೂಗಳ್ಳರಿಗೆ ರಕ್ಷಣೆ ನೀಡುತ್ತಿದ್ದಾರೆ. ಈ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲೇಬೇಕು

–ಎಚ್‌.ಡಿ. ಕುಮಾರಸ್ವಾಮಿ (25.07.2014ರಂದು ವಿಧಾನಸಭೆ ಅಧಿವೇಶನದಲ್ಲಿ ಹೇಳಿದ್ದು)

‘ಕೆರೆಗಳ ಕಣ್ಣೀರು’ ಒರೆಸೋಣ ಬನ್ನಿ

ನದಿಯಂತಹ ಜಲಮೂಲ­ದಿಂದ ಬಹು ದೂರದಲ್ಲಿ ನಿರ್ಮಾಣ­ವಾದ ನಗರದಲ್ಲಿ ಒಂದು ಕಾಲಕ್ಕೆ ಎಷ್ಟೊಂದು ಕೆರೆಗಳಿದ್ದವು. ದೇಹದ ಕೊಳೆತ ಭಾಗದಲ್ಲಿ ರಕ್ತದ ಬದಲು ಕೀವು ತುಂಬಿಕೊಳ್ಳುವಂತೆ, ಶುದ್ಧಜಲ ಇರುತ್ತಿದ್ದ ಕೆರೆಗಳ ಅಂಗಳವೀಗ ಕೊಳಚೆ ಸಂಗ್ರಹಾಗಾರವಾಗಿ ಮಾರ್ಪಟ್ಟಿದೆ. ನಿಮ್ಮ ಬಡಾವಣೆಯ ಕೆರೆಗಳು ಈ ರೀತಿ ನರಳುತ್ತಿವೆಯೇ? ಹಾಗಾದರೆ ಅವುಗಳ ಕಣ್ಣೀರು ಒರೆಸಲು ‘ಪ್ರಜಾವಾಣಿ’ ಜತೆ ಕೈಜೋಡಿಸಿ. ಕೆರೆಗಳ ದುರವಸ್ಥೆ, ಒತ್ತುವರಿ ಮಾಹಿತಿಯನ್ನು ಚಿತ್ರಸಹಿತ ವಾಟ್ಸ್‌ಆ್ಯಪ್‌ ಮಾಡಿ. ನಿಮ್ಮ ಹೆಸರು, ಚಿತ್ರವೂ ಜತೆಗಿರಲಿ. ವಾಟ್ಸಪ್‌: 9513322930

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು