ಡ್ರಗ್ಸ್ ಮಾರುತ್ತಿದ್ದ ವಿದೇಶಿಗರ ಬಂಧನ

7
ಕಾಲೇಜುಗಳ ಬಳಿ ಆರೋಪಿಗಳ ಅಡ್ಡೆ * ವಿದ್ಯಾರ್ಥಿಗಳಿಂದ ಪೊಲೀಸ್‌ ಬಾತ್ಮೀದಾರರಿಗೆ ಮಾಹಿತಿ

ಡ್ರಗ್ಸ್ ಮಾರುತ್ತಿದ್ದ ವಿದೇಶಿಗರ ಬಂಧನ

Published:
Updated:
Deccan Herald

ಬೆಂಗಳೂರು: ನಗರದ ವಿವಿಧ ಕಾಲೇಜುಗಳ ಬಳಿ ಬಗೆ ಬಗೆಯ ಮಾದಕ ವಸ್ತುಗಳನ್ನು ಮಾರುತ್ತಿದ್ದ ಮೂವರು ಆಫ್ರಿಕಾ ಪ್ರಜೆಗಳು ಹಾಗೂ ಕೇರಳದ ಡಾನ್‌ ಟಿ. ಥಾಮಸ್ (24) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಉಗಾಂಡದ ಲುಟಾಯಾ ಪ್ಯಾಟ್ರಿಕ್ (36), ದಕ್ಷಿಣ ಸುಡಾನ್‌ನ ಸಬಾಸಿಯೋ ಪೌಲ್ ಗಿಲ್ಲೋ (22) ಹಾಗೂ ನೈಜೀರಿಯಾದ ಚುಕುನಾನ್ಸೊ ಅಜ್ಮಾಮೆಕ್ವಿ (42) ಬಂಧಿತರು. ಆರೋಪಿಗಳಿಂದ ಎರಡು ಬೈಕ್‌ಗಳು, ಆರು ಮೊಬೈಲ್‌, ವಿವಿಧ ಬ್ರ್ಯಾಂಡ್‌ನ ಡ್ರಗ್ಸ್‌, ಮೂರು ಮಾಪನ ಉಪಕರಣ, ಹುಕ್ಕಾ ಹಾಗೂ ಭಂಗಿ ಸಲಕರಣೆಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.

60 ದಿನಗಳ ಅವಧಿಗೆ ಪ್ರವಾಸಿ ವೀಸಾದಡಿ ಇದೇ ಮೇನಲ್ಲಿ ಬೆಂಗಳೂರಿಗೆ ಬಂದಿದ್ದ ಲುಟಾಯಾ, ಕಲ್ಯಾಣನಗರದ ಬಾಬುಸಾಪಾಳ್ಯದಲ್ಲಿ ಮನೆ ಬಾಡಿಗೆ ಪಡೆದು ಡ್ರಗ್ಸ್ ದಂದೆನಡೆಸುತ್ತಿದ್ದ. ಕೆ.ಆರ್.ಪುರದ ಎಸ್‌ಇಎ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಆತನ ಸ್ನೇಹಿತ ಸಬಾಸಿಯೋ, ವ್ಯಾಸಂಗ ನಿಲ್ಲಿಸಿ ದಂದೆಗೆ ಕೈಜೋಡಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಕಾಲೇಜು ಬಳಿಯೇ ಅಡ್ಡೆ: ಮತ್ತೊಂದೆಡೆ ಅಜ್ಮಾಮೆಕ್ವಿ ಹಾಗೂ ಕೇರಳದ ಥಾಮಸ್, ‘ಕ್ರಿಸ್ತು ಜಯಂತಿ ಕಾಲೇಜ್‌’ ಬಳಿ ಮಾದಕ ವಸ್ತು ಮಾರಾಟಕ್ಕೆ ಪ್ರತ್ಯೇಕ ಅಡ್ಡೆ ಮಾಡಿಕೊಂಡಿದ್ದರು. ವಿದ್ಯಾರ್ಥಿಗಳು ಹಾಗೂ ಪರಿಚಿತ ಗ್ರಾಹಕರು ಅಲ್ಲಿಗೆ ಹೋಗಿ ಗಾಂಜಾ, ಚರಸ್, ಓಸಿಬಿ, ಎಲ್‌ಎಸ್‌ಡಿ, ಎಂಡಿಎಂಎನಂಥ ಡ್ರಗ್ಸ್ ಖರೀದಿಸುತ್ತಿದ್ದರು.

ಬಿಸಿನೆಸ್ ವೀಸಾದಡಿ 2012ರಲ್ಲಿ ನಗರಕ್ಕೆ ಬಂದಿದ್ದ ಅಜ್ಮಾಮೆಕ್ವಿ, ಯಲಹಂಕ ಉಪನಗರದಲ್ಲಿ ನೆಲೆಸಿದ್ದ. 2017ರಲ್ಲಿ ಸಿಸಿಬಿ ಪೊಲೀಸರು ಈತನ ಮನೆ ಹಾಗೂ ಡ್ರಗ್ಸ್ ಮಾರಲೆಂದೇ ಕೆ.ಆರ್.ಪುರದಲ್ಲಿ ಬಾಡಿಗೆ ಪಡೆದಿದ್ದ ಕೊಠಡಿ ಮೇಲೆ ದಾಳಿ ನಡೆಸಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿದ್ದರು. ಈ ಸಂಬಂಧ ಯಲಹಂಕ ಹಾಗೂ ಕೆ.ಆರ್.‍ಪುರ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಜಾಮೀನಿನ ಮೇಲೆ ಬಿಡುಗಡೆಯಾಗಿ, ಪುನಃ ದಂದೆ ಮುಂದುವರಿಸಿದ್ದ.

ಅಜ್ಮಾಮೆಕ್ವಿಯು 2012ರಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಹಾಗೂ 2014ರಲ್ಲಿ ಹೆಣ್ಣೂರು ಠಾಣೆ ವ್ಯಾಪ್ತಿಯಲ್ಲಿ ನಡೆದ ನೈಜೀರಿಯಾ ಯುವಕನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಕಲ್ಕೆರೆಯಲ್ಲಿ ಮನೆ: ಕ್ರಿಸ್ತು ಜಯಂತಿ ಕಾಲೇಜಿನ ಹಳೆ ವಿದ್ಯಾರ್ಥಿಯಾಗಿದ್ದ ಥಾಮಸ್, ಈಗ ಒಳಾಂಗಣ ವಿನ್ಯಾಸಕಾರನಾಗಿ ಕೆಲಸ ಮಾಡುತ್ತಾನೆ. ಕಮಿಷನ್ ಆಸೆಗೆ ಬಿದ್ದು ಅಜ್ಮಾಮೆಕ್ವಿ ಜತೆ ಸೇರಿದ ಈತ, ಆರಂಭದಲ್ಲಿ ವಿದ್ಯಾರ್ಥಿಗಳಿಗೆ ಉಚಿತವಾಗಿ ಡ್ರಗ್ಸ್ ಕೊಟ್ಟು ವ್ಯಸನಿಗಳನ್ನಾಗಿ ಮಾಡುತ್ತಿದ್ದ. ಆ ನಂತರ ಅವರೇ ಈತನನ್ನು ಹುಡುಕಿಕೊಂಡು ಬರುತ್ತಿದ್ದರು.

ಅಜ್ಮಾಮೆಕ್ವಿ ಸೂಚನೆಯಂತೆ ಇತ್ತೀಚೆಗೆ ಕಲ್ಕೆರೆಯಲ್ಲಿ ಬಾಡಿಗೆ ಮನೆ ಮಾಡಿದ್ದ ಥಾಮಸ್, ಅಲ್ಲಿಂದಲೇ ಬಾಣಸವಾಡಿ, ಹೆಣ್ಣೂರು, ರಾಮಮೂರ್ತಿನಗರ, ಬಾಗಲೂರು, ಯಲಹಂಕ ಹಾಗೂ ಸಂಪಿಗೆಹಳ್ಳಿ ಭಾಗಗಳಲ್ಲಿ ಡ್ರಗ್ಸ್ ಮಾರುತ್ತಿದ್ದರು ಎಂದು ಪೊಲೀಸರು ಹೇಳಿದರು. 

‘ದಂದೆ ಬಗ್ಗೆ ಕೆಲ ವಿದ್ಯಾರ್ಥಿಗಳು ನಮ್ಮ ಬಾತ್ಮೀದಾರರಿಗೆ ಮಾಹಿತಿ ಕೊಟ್ಟಿದ್ದರು. ಆರೋಪಿಗಳ ಪತ್ತೆಗೆ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದ ತಂಡಗಳು, ನಾಲ್ಕೂ ಮಂದಿಯನ್ನು ವಶಕ್ಕೆ ಪಡೆದವು. ನೈಜೀರಿಯಾದ ಮೂಸಾ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ನಡೆಯುತ್ತಿದೆ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಆರೋಪಿಗಳ ಬಳಿ ಸಿಕ್ಕ ಡ್ರಗ್ಸ್‌ ವಿವರ

ಡ್ರಗ್ಸ್‌;ಪ್ರಮಾಣ

ಮೆಥಂಫೆಟಮೈನ್;27ಗ್ರಾಂ

ಕೊಕೇನ್;6 ಗ್ರಾಂ

ಚರಸ್;25 ಗ್ರಾಂ

ಎಂಡಿಎಂಎ ಮಾತ್ರೆಗಳು;254

ಎಲ್‌ಎಸ್‌ಡಿ; 8 ಪೇಪರ್

ಗಾಂಜಾ; 1 ಕೆ.ಜಿ

ವೀಡ್ ಆಯಿಲ್; ಒಂದು ಬಾಟಲಿ

 

 

 

 

ಬರಹ ಇಷ್ಟವಾಯಿತೆ?

 • 4

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !