‘ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕರೆ ಕೋಕಾದಡಿ ಜೈಲಿಗೆ’

7
ಸಿಸಿಬಿ ಕಚೇರಿಯಲ್ಲಿ ಡ್ರಗ್‌ ಪೆಡ್ಲರ್‌ಗಳ ಪರೇಡ್ l ಚಳಿ ಬಿಡಿಸಿ ಎಚ್ಚರಿಕೆ ಕೊಟ್ಟ ಅಲೋಕ್‌ಕುಮಾರ್

‘ಡ್ರಗ್ಸ್‌ ಕೇಸ್‌ನಲ್ಲಿ ಸಿಕ್ಕರೆ ಕೋಕಾದಡಿ ಜೈಲಿಗೆ’

Published:
Updated:

ಬೆಂಗಳೂರು: ರಾಜಧಾನಿಯಲ್ಲಿ ಅವ್ಯಾಹತವಾಗಿರುವ ಮಾದಕ ವಸ್ತು ಸಾಗಣೆ ಹಾಗೂ ಮಾರಾಟಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳು, ಇದೇ ಮೊದಲ ಬಾರಿಗೆ ನಗರದಲ್ಲಿ ‘ಡ್ರಗ್‌ ಪೆಡ್ಲರ್‌’ಗಳ ಪರೇಡ್‌ ನಡೆಸಿ ಖಡಕ್‌ ಎಚ್ಚರಿಕೆ ನೀಡಿದರು.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿ ಆವರಣದಲ್ಲಿ ಶುಕ್ರವಾರ ನಡೆಸಲಾದ ಪರೇಡ್‌ನಲ್ಲಿ 60 ಡ್ರಗ್ ಪೆಡ್ಲರ್‌ಗಳು ಹಾಜರಾದರು. ಅವರೆಲ್ಲರಿಗೂ ಖಡಕ್ ಎಚ್ಚರಿಕೆ ನೀಡಿದ ಹೆಚ್ಚುವರಿ ಪೊಲೀಸ್ ಕಮಿಷನರ್ (ಅಪರಾಧ) ಅಲೋಕ್ ಕುಮಾರ್, ‘ಮಾದಕ ವಸ್ತು ಮಾರಾಟ ಹಾಗೂ ಸಾಗಣೆಯಿಂದ ದೂರ ಉಳಿಯಿರಿ. ಅಂಥ ಪ್ರಕರಣದಲ್ಲಿ ಪದೇ ಪದೇ ಸಿಕ್ಕಿಬಿದ್ದರೆ ಕೋಕಾ ಕಾಯ್ದೆ ಅಡಿ ಜೈಲಿಗೆ ಕಳುಹಿಸುತ್ತೇವೆ’ ಎಂದರು.

ಮಗನ ಜೊತೆ ಬಂದ ಪೆಡ್ಲರ್‌: ಮಾದಕ ವಸ್ತು ಮಾರಾಟದ ಎರಡು ಪ್ರಕರಣದಲ್ಲಿ ಭಾಗಿಯಾಗಿದ್ದ ಚಾಮರಾಜಪೇಟೆಯ ಸೈಯದ್ ಅಕ್ಮಲ್‌ ಎಂಬಾತ ಕಿವಿಯೋಲೆ, ಜೀನ್ಸ್ ಪ್ಯಾಂಟ್, ಟೀ–ಶರ್ಟ್ ಧರಿಸಿ, ಮೊಣಕೈಯಲ್ಲಿ ಟ್ಯಾಟೊ ಹಾಕಿಸಿಕೊಂಡು ಬಂದಿದ್ದ. ಆತನನ್ನು ಕಂಡು ಸಿಡಿಮಿಡಿಕೊಂಡ ಅಲೋಕ್ ಕುಮಾರ್, ತರಾಟೆಗೆ ತೆಗೆದುಕೊಂಡರು.

‘ಏನಿದು ನಿನ್ನ ಸ್ಟೈಲ್‌? ವಯಸ್ಸಿಗೆ ತಕ್ಕಂತೆ ನಡೆದುಕೊ. ನಿನ್ನ ಮಗನನ್ನು ನೋಡಿ ಕಲಿ. ಈ ಸ್ಟೈಲ್ ಬಿಟ್ಟು ನೀಟಾಗಿ ಬಂದು ಅಧಿಕಾರಿಗಳ ಬಳಿ ವರದಿ ಮಾಡಿಕೊ’ ಎಂದು ಅಲೋಕ್‌ಕುಮಾರ್ ತಾಕೀತು ಮಾಡಿದರು.

ಇನ್ನೊಬ್ಬ ಪೆಡ್ಲರ್‌ ಚಾಮರಾಜನಗರದ ಸೋಮಶೇಖರ್ ಅಲಿಯಾಸ್ ಸೋಮನನ್ನು ನೋಡಿದೊಡನೇ ಇನ್‌ಸ್ಪೆಕ್ಟರ್‌ ಜೊತೆ ಮಾತನಾಡಿ ಅಲೋಕ್‌ಕುಮಾರ್, ‘ನೋಡ್ರಿ. ಇವ್ನು ಓದಿದ್ದು ಎಂಟನೇ ತರಗತಿ. ಆದರೆ, ಗಾಂಜಾ ವ್ಯವಹಾರ ಇಂಗ್ಲಿಷ್‌ನಲ್ಲೇ ಮಾಡುತ್ತಾನೆ’ ಎಂದರು.

ಸೋಮನತ್ತ ತಿರುಗಿ, ‘ನಿನಗೆ ಇಂಗ್ಲಿಷ್‌ ಬರುತ್ತೆ ಅಲ್ವಾ? ನನ್ನ ಜೊತೆ ಇಂಗ್ಲೀಷ್‌ನಲ್ಲೇ ಮಾತನಾಡು ನೋಡೋಣ’ ಎಂದರು. ಆಗ ಅಂಜಿದ ಸೋಮ, ‘ಇಲ್ಲ ಸರ್, ನನಗೆ ಇಂಗ್ಲಿಷ್ ಬರಲ್ಲ’ ಎಂದ. ‘ಹುಷಾರ್... ನೀನು ದಂಧೆ ಮಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ’ ಎಂದು ಅಲೋಕ್‌ಕುಮಾರ್‌ ಎಚ್ಚರಿಕೆ ನೀಡಿದರು.

ರಕ್ತ ಪರೀಕ್ಷೆ ಮಾಡಿಸಿ ಪ್ರಕರಣ: ಡ್ರಗ್‌ ಪೆಡ್ಲರ್‌ಗೆ ಎಚ್ಚರಿಕೆ ನೀಡಿದ ಅಲೋಕ್‌, ‘ಇದು ಮೊದಲ ಪರೇಡ್‌. ಪ್ರತಿಯೊಬ್ಬರೂ ತಪ್ಪು ತಿದ್ದಿಕೊಂಡು ಜೀವನ ನಡೆಸಬೇಕು. ಮುಂದಿನ ಪರೇಡ್‌
ನಲ್ಲಿ ಪ್ರತಿಯೊಬ್ಬರ ರಕ್ತ ಪರೀಕ್ಷೆ ಮಾಡಿಸುತ್ತೇನೆ. ಮಾದಕ ವ್ಯಸನಿ ಎಂಬುದು ಗೊತ್ತಾದರೆ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸುತ್ತೇನೆ’ ಎಂದರು.

ಸಿಸಿಬಿ ಡಿಸಿಪಿ ಎಸ್.ಗಿರೀಶ್, ಎಸಿಪಿ ಮೋಹನ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್‌ಗಳಾದ ನಾರಾಯಣಗೌಡ, ಆಯೇಷಾ ಹಾಜರಿದ್ದರು.

ಹೊರ ಜಿಲ್ಲೆಗಳಿಂದ ಗಾಂಜಾ ಪೂರೈಕೆ

‘ಚಾಮರಾಜನಗರ, ಕೊಳ್ಳೇಗಾಲ, ಹೊಸಪೇಟೆ, ಆನೇಕಲ್, ಶಿಡ್ಲಘಟ್ಟ, ಚಿಂತಾಮಣಿ, ಗೌರಿಬಿದನೂರು ಹಾಗೂ ಚಿಕ್ಕಬಳ್ಳಾಪುರದಿಂದ ಬೆಂಗಳೂರಿಗೆ ಗಾಂಜಾ ಪೂರೈಕೆ ಆಗುತ್ತಿರುವುದಾಗಿ ಕೆಲವು ಪೆಡ್ಲರ್‌ಗಳು ಹೇಳಿದ್ದಾರೆ. ಮುಂದಿನ ವಾರದಿಂದ ಹೊರ ಜಿಲ್ಲೆಗೂ ಹೋಗಿ ಆರೋಪಿಗಳನ್ನು ಪತ್ತೆ ಮಾಡಲಿದ್ದೇವೆ’ ಎಂದು ಅಲೋಕ್‌ಕುಮಾರ್ ಹೇಳಿದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !