ಕನ್ನಡಕ್ಕೆ ಮಹಾ ದ್ರೋಹ: ಎಸ್‌.ಜಿ. ಸಿದ್ದರಾಮಯ್ಯ

7
ಇಂಗ್ಲಿಷ್‌ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ

ಕನ್ನಡಕ್ಕೆ ಮಹಾ ದ್ರೋಹ: ಎಸ್‌.ಜಿ. ಸಿದ್ದರಾಮಯ್ಯ

Published:
Updated:
Deccan Herald

ಬೆಂಗಳೂರು: ‘ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್‌ ಮಾಧ್ಯಮ ಆರಂಭಿಸುವ ಚಿಂತನೆ ಅವೈಜ್ಞಾನಿಕ ಮತ್ತು ಮಾತೃ ಭಾಷೆಗೆ ಎಸಗು
ತ್ತಿರುವ ದೊಡ್ಡ ದ್ರೋಹ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಿ.ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.

2019–20ನೇ ಶೈಕ್ಷಣಿಕ ಸಾಲಿನಲ್ಲಿ ಒಂದು ಸಾವಿರ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಆರಂಭಿಸುವುದಾಗಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಂಗಳವಾರ ವಿಧಾನಸಭೆಯಲ್ಲಿ ತಿಳಿಸಿದ್ದರು.

ಸರ್ಕಾರದ ನಿರ್ಧಾರದ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ರಾಜಕಾರಣಿಗಳಿಗೆ ಕನ್ನಡ ಭಾಷೆಯ ಬಗ್ಗೆ ಕೀಳರಿಮೆ ಇರುವುದರಿಂದ ಇಂತಹ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಸರ್ಕಾರದ ಇಂತಹ ಕೆಟ್ಟ ಪ್ರಯೋಗಗಳಿಂದಾಗಿ ವಿದ್ಯಾರ್ಥಿಗಳ ಮೇಲಾಗುವ ಪರಿಣಾಮಗಳ ಅರಿವು ಅವರಿಗೆ ಇಲ್ಲ’ ಎಂದು ಹೇಳಿದರು.

‘ಇಂಗ್ಲಿಷ್‌ ಮಾಧ್ಯಮವನ್ನು ಸರ್ಕಾರಿ ಶಾಲಾ ವಿದ್ಯಾರ್ಥಿಗಳ ಮೇಲೆ ಹೇರಿದರೆ ಅವರು ಕನ್ನಡವನ್ನೂ ಕಲಿಯುವುದಿಲ್ಲ, ಇಂಗ್ಲಿಷ್‌ ಕಠಿಣವೆನಿಸಿ ಅರ್ಧಕ್ಕೆ ಶಾಲೆ ಬಿಟ್ಟು ಹೋಗುವ ಸಾಧ್ಯತೆಯೇ ಹೆಚ್ಚು. ಪ್ರತಿಯೊಂದು ಮಗುವೂ ಪರಿಸರದ ಭಾಷೆ, ಮಾತೃ ಭಾಷೆ ಅಥವಾ ರಾಜ್ಯ ಭಾಷೆಯನ್ನು ಶಿಕ್ಷಣ ಮಾಧ್ಯಮವಾಗಿ ಕಲಿಸಬೇಕು ಎಂಬುದು ಜಾಗತಿಕ ಸತ್ಯ. ವ್ಯವಹಾರ ಜ್ಞಾನಕ್ಕೆ ಇಂಗ್ಲಿಷ್‌ ಕಲಿಸುವುದನ್ನು ಒಪ್ಪುತ್ತೇನೆ’ ಎಂದರು.

‘ಕರ್ನಾಟಕ ಸರ್ಕಾರ ಮೊದಲಿ ನಿಂದಲೂ ಕನ್ನಡದ ಅಸ್ತಿತ್ವಕ್ಕೆ ಧಕ್ಕೆ ತಂದು ಅನ್ಯ ಭಾಷೆ ಬೆಳೆಸಲು ಹೋಗಿಲ್ಲ. ಹಾಗೆಂದು ಅನ್ಯ ಭಾಷೆಗಳನ್ನು ದ್ವೇಷಿಸಲೂ ಇಲ್ಲ. ಇಂಗ್ಲಿಷ್‌ ಮಾಧ್ಯಮದ ಶಿಕ್ಷಣ ಎಂಬುದು ಒಂದು ದಂಧೆಯಾಗಿದೆ. ಇಂಗ್ಲಿಷ್‌ ಶಿಕ್ಷಣವೆಂದರೆ ಗುಣಮಟ್ಟದ ಶಿಕ್ಷಣ ಎಂಬುದು ಕೇವಲ ಭ್ರಮೆ. ಸರ್ಕಾರ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಅನ್ನು ಒಂದು ಚೆನ್ನಾಗಿ ಕಲಿಸುವುದಕ್ಕೆ ನಮ್ಮ ತಕರಾರು ಇಲ್ಲ’ ಎಂದು
ಹೇಳಿದರು. 

***

ಪೂರ್ವ ತಯಾರಿ ಇರಲಿ– ಹನುಮಂತಯ್ಯ
ಒಂದರಿಂದ ನಾಲ್ಕನೇ ತರಗತಿವರೆಗೆ ಕನ್ನಡ ಮಾಧ್ಯಮದಲ್ಲೇ ಪರಿಣಾಮಕಾರಿಯಾಗಿ ಕಲಿಸಬೇಕು. ಜತೆಗೆ ಇಂಗ್ಲಿಷ್‌ ಅನ್ನು ಒಂದು ಭಾಷೆಯನ್ನಾಗಿ ಕಲಿಸಬೇಕು ಎಂದು ಲೇಖಕ ಹಾಗೂ ರಾಜ್ಯಸಭಾ ಸದಸ್ಯ ಎಲ್‌.ಹನುಮಂತಯ್ಯ ಹೇಳಿದರು. ಪ್ರಾಥಮಿಕ ಹಂತದಿಂದ ಇಂಗ್ಲಿಷ್‌ ಮಾಧ್ಯಮ ಆರಂಭಿಸುವುದಕ್ಕೆ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಪೂರ್ವ ತಯಾರಿ ಇಲ್ಲದೆ, ಇಂಗ್ಲಿಷ್‌ ಮಾಧ್ಯಮ ಆರಂಭಿಸಿದರೆ, ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಅಂದರೆ, ಮಕ್ಕಳನ್ನು ಕಣ್ಣು ಮುಚ್ಚಿ ಕಾಡಿಗೆ ಬಿಟ್ಟಂತೆ ಆಗುತ್ತದೆ ಎಂದು ತಿಳಿಸಿದರು. ಐದನೇ ತರಗತಿಯಿಂದ ಎ,ಬಿ,ಸಿ,ಡಿ ಕಲಿಸಲು ಆರಂಭಿಸಿದರೆ ಇಂಗ್ಲಿಷ್‌ ಮಾಧ್ಯಮ ಆರಂಭಿಸಿಯೂ ಪ್ರಯೋಜನ ಆಗದು. ಇಂಗ್ಲಿಷ್‌ ಮಾಧ್ಯಮಕ್ಕೆ ಪೂರಕವಾಗಿ ಶಿಕ್ಷಕರನ್ನು ತಯಾರಿಗೊಳಿಸಬೇಕು. ಅಗತ್ಯ ಕಲಿಕೆ ಪರಿಕರಗಳನ್ನೂ ನೀಡಬೇಕು ಎಂದು ಹನುಮಂತಯ್ಯ ಹೇಳಿದರು.

***
ಕನ್ನಡ ಮಾಧ್ಯಮವೇ ಇರಲಿ, ಇಂಗ್ಲಿಷ್‌ ಕಲಿಸಿ

‘ಇಂಗ್ಲಿಷ್‌ ಅನ್ನು ಒಂದು ಭಾಷೆಯಾಗಿ ಕಲಿಸುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ, ಭಾಷಾ ಮಾಧ್ಯಮ ಕನ್ನಡವೇ ಇರಬೇಕು. ಕನ್ನಡ ಶಾಲೆಗಳನ್ನು ಮುಚ್ಚಿ ಇಂಗ್ಲಿಷ್‌ ಮಾಧ್ಯಮ ಶಾಲೆಗಳನ್ನು ಆರಂಭಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ಕನ್ನಡ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ನೀಡಿ ಹೆಚ್ಚಿನ ಶಕ್ತಿ ತುಂಬಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !