ಮದುವೆಯಾಗುವುದಾಗಿ ನಂಬಿಸಿ ₹25.20 ಲಕ್ಷ ವಂಚನೆ

7
ವಿವಾಹ ನಂಟು ಬೆಸೆಯುವ ಸಂಸ್ಥೆ ಮೂಲಕ ಯುವತಿಗೆ ಪರಿಚಿತನಾಗಿದ್ದ ಆರೋಪಿ

ಮದುವೆಯಾಗುವುದಾಗಿ ನಂಬಿಸಿ ₹25.20 ಲಕ್ಷ ವಂಚನೆ

Published:
Updated:

ಬೆಂಗಳೂರು: ವಿವಾಹದ ನಂಟು ಬೆಸೆಯುವ ಸಂಸ್ಥೆಯೊಂದರ ಮೂಲಕ ನಗರದ ಯುವತಿಯೊಬ್ಬರನ್ನು ಪರಿಚಯಿಸಿಕೊಂಡಿದ್ದ ದೆಹಲಿಯ ರೋನಿತ್ ಮಲ್ಹೋತ್ರಾ ಎಂಬಾತ, ಮದುವೆ ಆಗುವುದಾಗಿ ನಂಬಿಸಿ ₹25.20 ಲಕ್ಷ ಪಡೆದು ಪರಾರಿಯಾಗಿದ್ದಾನೆ.

ಈ ಸಂಬಂಧ ಯುವತಿ, ವರ್ತೂರು ಠಾಣೆಗೆ ದೂರು ನೀಡಿದ್ದಾರೆ. ಆ ಪ್ರಕರಣ ಪುಟ್ಟೇನಹಳ್ಳಿ ಠಾಣೆಗೆ ವರ್ಗಾವಣೆ ಆಗಿದೆ.

‘ನಗರದ ಸಾಫ್ಟ್‌ವೇರ್‌ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಯುವತಿ, ಸರ್ಜಾಪುರ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ ವಾಸವಿದ್ದಾರೆ. ವರನನ್ನು ಹುಡುಕುತ್ತಿದ್ದ ಅವರು ಫೋಟೊ ಸಮೇತ ವೈವಾಹಿಕ ಸಂಸ್ಥೆಗೆ ಸ್ವ–ವಿವರ ನೀಡಿದ್ದರು. ಅದನ್ನು ತಿಳಿದುಕೊಂಡು ಯುವತಿಗೆ ಇ–ಮೇಲ್ ಕಳುಹಿಸಿದ್ದ ಆರೋಪಿ, ಮದುವೆಯಾಗುವುದಾಗಿ ಹೇಳಿದ್ದ. ಅದನ್ನು ಯುವತಿ ಸಹ ನಂಬಿದ್ದಳು’ ಎಂದು ಪೊಲೀಸರು ಹೇಳಿದರು.

‘ಯುವತಿ ಹಾಗೂ ಆರೋಪಿ, ಪರಸ್ಪರ ಮೊಬೈಲ್ ನಂಬರ್ ವಿನಿಮಯ ಮಾಡಿಕೊಂಡು ಮಾತನಾಡಲಾರಂಭಿಸಿದ್ದರು. ಯುವತಿಯ ಸಹೋದರನನ್ನೂ ಆರೋಪಿ ಪರಿಚಯಿಸಿಕೊಂಡಿದ್ದ. ‘ಮದುವೆಗೂ ಮುನ್ನ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ’ ಎಂದಿದ್ದ ಆರೋಪಿ, 2018ರ ಜ. 28ರಂದು ಬೆಂಗಳೂರಿಗೆ ಬಂದಿದ್ದ. ಜೆ.ಪಿ.ನಗರದ ಡಾಲರ್ಸ್ ಕಾಲೊನಿಯಲ್ಲಿರುವ ಮಂತ್ರಿ ಲೈಟ್ಸ್ ಅಪಾರ್ಟ್‌ಮೆಂಟ್ ಸಮುಚ್ಚಯದ ಬಳಿ ಯುವತಿಯನ್ನು ಭೇಟಿಯಾಗಿದ್ದ. ಪೂಜೆಗೆ ಎಂದು ಹೇಳಿ ಯುವತಿಯಿಂದ ₹7.50 ಲಕ್ಷ, ಸೀರೆ, ಚಿನ್ನದ ಓಲೆ ತೆಗೆದುಕೊಂಡು ಹೋಗಿದ್ದ.’

‘ಅದಾದ ಬಳಿಕವೂ ಆರೋಪಿ, ಆಗಾಗ ಯುವತಿಯನ್ನು ಭೇಟಿ ಮಾಡುತ್ತಿದ್ದ. ಪ್ರತಿ ಬಾರಿಯೂ ನಾನಾ ಸಮಸ್ಯೆಗಳನ್ನು ಹೇಳಿ ಹಣ ಪಡೆದುಕೊಂಡು ಹೋಗುತ್ತಿದ್ದ. ಆತ ತನ್ನನ್ನು ಮದುವೆಯಾಗುತ್ತಾನೆಂದು ನಂಬಿದ್ದ ಯುವತಿ, ಒಟ್ಟು ₹25.20 ಲಕ್ಷ ಕೊಟ್ಟಿದ್ದರು’ ಎಂದರು.

‘ಕಳೆದ ಮೇ 10ರಂದು ಕೊನೆಯದಾಗಿ ಹಣ ಪಡೆದುಕೊಂಡು ಹೋಗಿದ್ದ ಆರೋಪಿ, ಆ ನಂತರ ಸಂಪರ್ಕಕ್ಕೆ ಸಿಕ್ಕಿಲ್ಲ. ಮೊಬೈಲ್ ಸ್ವಿಚ್ ಆಫ್‌ ಮಾಡಿಕೊಂಡಿದ್ದಾನೆ. ಇ–ಮೇಲ್‌ಗೂ ಪ್ರತಿಕ್ರಿಯಿಸುತ್ತಿಲ್ಲ ಎಂದು ಯುವತಿ ತಿಳಿಸಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ಯುವತಿಯ ಸ್ವ–ವಿವರ ಪಡೆದಿದ್ದ ವಿವಾಹ ಸಂಬಂಧ ಬೆಸೆಯುವ ಸಂಸ್ಥೆಯ ಪ್ರತಿನಿಧಿಗಳನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಪಡೆದುಕೊಳ್ಳಲಾಗಿದೆ. ಆರೋಪಿ, ಬೇರೊಂದು ಹೆಸರು ಹೇಳಿಕೊಂಡು ಯುವತಿಯನ್ನು ವಂಚಿಸಿದಂತೆ ಮೇಲ್ನೋಟಕ್ಕೆ ತೋರುತ್ತಿದೆ’ ಎಂದು ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !