ಬುಧವಾರ, ಡಿಸೆಂಬರ್ 11, 2019
27 °C
ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು

ಗ್ರಾಮ ಪಂಚಾಯಿತಿ ಅಧ್ಯಕ್ಷನ ಕೊಲೆ: ಮಾಜಿ ಅಧ್ಯಕ್ಷ ಸೇರಿ ನಾಲ್ವರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹುಬ್ಬಳ್ಳಿ: ತಾಲ್ಲೂಕಿನ ಛಬ್ಬಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸವರಾಜ ಕಡಪಟ್ಟಿ ಕೊಲೆ ಪ್ರಕರಣ ಭೇದಿಸಿರುವ ಹುಬ್ಬಳ್ಳಿ ಗ್ರಾಮೀಣ ಠಾಣೆ ಪೊಲೀಸರು, ಮಾಜಿ ಅಧ್ಯಕ್ಷ ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಾಜಿ ಅಧ್ಯಕ್ಷ ಸುಧೀರ ಶಂಕರಗೌಡ ಪಾಟೀಲ, ಛಬ್ಬಿ ಗ್ರಾಮದ ಜಿನ್ನಪ್ಪ ಈಶ್ವರಪ್ಪ ಗಾಬಣ್ಣವರ, ರತ್ನಾಕರ ಮಲ್ಲಪ್ಪ ಮತ್ತು ಮಂಜುನಾಥ ಪರಶುರಾಮ ಬಂಧಿತರು.

‘20–20 ತಿಂಗಳ ಅವಧಿಗೆ ಅಧ್ಯಕ್ಷ ಸ್ಥಾನ ಹಂಚಿಕೊಳ್ಳುವ ಒಪ್ಪಂದವನ್ನು ಮಾಡಿಕೊಂಡು ಮೊದಲ ಅವಧಿಯನ್ನು ಸುಧೀರನಿಗೆ ನೀಡಲಾಗಿತ್ತು. ಆದರೆ ಆತ ರಾಜೀನಾಮೆ ನೀಡಲು ನಿರಾಕರಿಸಿದ ಕಾರಣ ವೈಷ್ಯಮ್ಯ ಬೆಳೆದಿತ್ತು. ಬಸವರಾಜ ಎಂಟು ಮಂದಿ ಸದಸ್ಯರನ್ನು ಸೆಳೆದು, ಅವಿಶ್ವಾಸ ನಿರ್ಣಯ ಮಂಡಿಸಿ ಪದಚ್ಯುತಿಗೊಳಿಸಿ ಆಗಸ್ಟ್‌ನಲ್ಲಿ ತಾನೇ ಅಧ್ಯಕ್ಷನಾಗಿದ್ದ. ಇದು ಇಬ್ಬರ ಮಧ್ಯೆ ಇನ್ನಷ್ಟು ದ್ವೇಷ ಬೆಳೆಯುವಂತೆ ಮಾಡಿತ್ತು’ ಎಂದು ಧಾರವಾಢ ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ರಾಮನಗೌಡ ಹಟ್ಟಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಬಂಧಿತರು ಹಾಗೂ ತಲೆಮೆಸಿಕೊಂಡಿರುವ ಇನ್ನೂ ನಾಲ್ವರು ಆರೋಪಿಗಳು ಸೇರಿ ಸಂಚು ಕೊಲೆಗೆ ಸಂಚು ರೂಪಿಸಿದ್ದರು. ಬಸವರಾಜ ಸ್ನೇಹಿತರಾದ ಮೈಲಾರಿ ಮತ್ತು ಜಗದೀಶ ಅವರೊಂದಿಗೆ ನ.23ರಂದು ಹುಬ್ಬಳ್ಳಿಯಲ್ಲಿ ಊಟ ಮಾಡಿಕೊಂಡು ಮನೆಗೆ ಮರಳುವಾಗ ತಡಸಾ ಕ್ರಾಸ್‌ ಸಮೀಪ ಹಿಂದಿನಿಂದ ಟಾಟಾ ಸುಮೊ ಡಿಕ್ಕಿ ಹೊಡೆಸಿದ್ದರು. ಆ ನಂತರ ಬಸವರಾಜ ಅವರ ಮೇಲೆ ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿ ಕೊಂದಿದ್ದರು’ ಎಂದು ಅವರು ಮಾಹಿತಿ ನೀಡಿದರು.

‘ಕೊಲೆ ಮಾಡುವುದಕ್ಕಾಗಿಯೇ ಅವರು ಟಾಟಾ ಸುಮೊವೊಂದನ್ನ ಖರೀದಿಸಿದ್ದರು. ಕೊಲೆ ಮಾಡಿದ ನಂತರ ಇನ್ನೊಂದು ವಾಹನದಲ್ಲಿ ಬೆಳಗಾವಿಗೆ ಹೋಗಿ ಅಲ್ಲಿಂದ ಮಹಾರಾಷ್ಟ್ರಕ್ಕೆ ಹೋಗಿದ್ದರು. ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಅವರನ್ನು ಬಂಧಿಸಲು ಇನ್‌ಸ್ಪೆಕ್ಟರ್‌ಗಳಾದ ಎಸ್‌.ಬಿ. ಮಾಳಗೊಂಡ, ವಿಜಯ ಬಿರಾದಾರ, ಟಿ. ವೆಂಕಟಸ್ವಾಮಿ ಹಾಗೂ ಎಸ್‌ಐಗಳಾದ ನವೀನ ಜಕ್ಕಲಿ, ಮಂಜುಳಾ ಅವರನ್ನು ಒಳಗೊಂಡ ಮೂರು ತಂಡ ರಚಿಸಲಾಗಿತ್ತು. ವೈಜ್ಞಾನಿಕವಾಗಿ ತನಿಖೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.

ಆರೋಪಿಗಳಾದ ಸೋಮಶೇಖರ ಕಾಚಾಪುರ, ರಾಜೇಂದ್ರ ಈಶ್ವರಪ್ಪ, ಮುನ್ನಾ ಮೇಸ್ತ್ರಿ ಮತ್ತು ಭರತೇಶ ಈಶ್ವರಪ್ಪ ಅವರನ್ನು ಬಂಧಿಸಲಾಗುವುದು ಎಂದರು.

 

ಪ್ರತಿಕ್ರಿಯಿಸಿ (+)