ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಳುಬಿದ್ದಿದ್ದ ಕೆರೆಗೆ ಗ್ರಾಮಸ್ಥರಿಂದ ಮರುಜೀವ

ಅಕ್ಷರ ಗಾತ್ರ

ಹೆಸರಘಟ್ಟ: ಮೂವತ್ತು ವರ್ಷಗಳಿಂದ ಪಾಳು ಬಿದಿದ್ದ ಚೆಲ್ಲಹಳ್ಳಿ ಕೆರೆಗೆ ಗ್ರಾಮದ ಯುವಕರು ಮರುಜೀವ ನೀಡಿದ್ದಾರೆ.

ಗ್ರಾಮದ ಸರ್ವೆ ನಂ.105ರಲ್ಲಿ ಆರು ಎಕರೆ ಪ್ರದೇಶದಲ್ಲಿ ಕೆರೆಯು ಮೈಚಾಚಿಕೊಂಡಿದೆ. ದನಕರುಗಳಿಗೆ ನೀರುಣಿಸಲು ಹಾಗೂ ಬಟ್ಟೆ ತೊಳೆಯಲು ಗ್ರಾಮಸ್ಥರು ಈ ಕೆರೆಯನ್ನೇ ಅವಲಂಬಿಸಿದ್ದರು. ಕಾಲಕ್ರಮೇಣ ಕುರುಚಲು ಗಿಡಗಳು, ಕಳೆ ಸಸ್ಯಗಳು ಬೆಳೆದು ಕೆರೆ ಅಸ್ತಿತ್ವ ಕಳೆದುಕೊಂಡಿತ್ತು.

ಸುತ್ತಮುತ್ತಲಿನ ಜನ ಕೆರೆಯನ್ನು ಒತ್ತುವರಿ ಮಾಡಿಕೊಂಡುಹೊಲ–ಗದ್ದೆಗಳನ್ನು ಮಾಡಿಕೊಂಡಿದ್ದರು. ಇದನ್ನು ಕಂಡ ಯುವಕರು ಕೆರೆ ಜಾಗವನ್ನು ಸರ್ವೇ ಮಾಡಿಸಿ, ಈಗ ಕೆರೆಗೆ ಮೂಲರೂಪ ನೀಡಿದ್ದಾರೆ.

‘ಪ್ರತಿಯೊಬ್ಬರ ಮನೆಯಿಂದ ಒಬ್ಬರು ಶ್ರಮದಾನ ಮಾಡಲು ಬಂದರು. ಗುದ್ದಲಿ ಹಿಡಿದು ಹೂಳು ತೆಗೆದರು. ಮನೆಯಲ್ಲಿದ್ದ ಟ್ರ್ಯಾಕ್ಟರ್‌ಗಳಿಂದ ಹೂಳು ಸಾಗಿಸಿದರು. ನಯಾ ಪೈಸೆ ನೀರಿಕ್ಷೆ ಮಾಡದೇ ಊರ ಕೆರೆಯನ್ನು ಉಳಿಸಿಕೊಳ್ಳಬೇಕೆಂಬ ಮನೋಭಾವದಿಂದ ಎಲ್ಲರೂ ಶ್ರಮದಾನ ಮಾಡಿದರು. ಕೆಲವು ದಾನಿಗಳು ಮುಂದೆ ಬಂದು ಸಹಾಯ ನೀಡಿದರು. ಗ್ರಾಮಸ್ಥರು ಒಗ್ಗಟ್ಟಿನ ಶ್ರಮದಾನದಿಂದ ಕೆರೆ ಕಂಗೊಳಿಸುತ್ತಿದೆ’ ಎನ್ನುವುದು ಯುವ ಪಡೆಯ ಅನಿಸಿಕೆ.

‘ಕೆರೆ ಅಭಿವೃದ್ಧಿ ಪಡಿಸಲು ಸರ್ಕಾರದ ಮೊರೆ ಹೋಗಿದ್ದರೆ ಕೆಲಸ ವಿಳಂಬವಾಗುತ್ತಿತ್ತು. ಈ ಮಳೆಗಾಲದಲ್ಲಿ ಕೆರೆಯಲ್ಲಿ ನೀರು ನಿಲ್ಲುವಂತಾಗಲು ಕೆಲಸ ಆರಂಭಿಸಿದೆವು. ನೀರಿದ್ದರೆ ಸುತ್ತಲಿನ ಭೂ ಪ್ರದೇಶದಲ್ಲಿ ಅಂತರ್ಜಲ ಹೆಚ್ಚಿ ಕೃಷಿ ಚಟುವಟಿಕೆಗೆ ಹೆಚ್ಚು ಅನುಕೂಲವಾಗುತ್ತದೆ. ಈ ಬಾರಿ ಉತ್ತಮ ಮಳೆ ಬಂದರೆ ನಮ್ಮ ಬದುಕು ಹಸನಾಗುತ್ತದೆ’ ಎನ್ನುವ ಭರವಸೆಯನ್ನು ಗ್ರಾಮಸ್ಥರು ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT